ಸುಂಟಿಕೊಪ್ಪ, ಮೇ 23: ಗ್ರಾಮದಲ್ಲಿ ಶಾಂತಿ ಸಾಮರಸ್ಯ ಉಳಿಯಬೇಕಾದರೆ ಶ್ರದ್ಧಾ ಕೇಂದ್ರಗಳ ಅವಶ್ಯಕತೆ ಇದೆ. ಶ್ರದ್ಧಾ ಕೇಂದ್ರಗಳು ಜೀರ್ಣೋದ್ಧಾರಗೊಂಡಾಗ ಮಾತ್ರ ಗ್ರಾಮದಲ್ಲಿ ಶಾಂತಿ ಸಾಮರಸ್ಯ ವೃದ್ಧಿಯಾಗಿ ರೋಗ ರುಜಿನಗಳನ್ನು ತಡೆಯಬಹುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಹೇಳಿದರು.

ಕಂಬಿಬಾಣೆಯ ಶ್ರೀರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ತೃತೀಯ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ನೂತನವಾಗಿ ನಿರ್ಮಿಸಲಾಗಿ ರುವ ನೈವೇಧ್ಯ ಕೊಠಡಿ ಹಾಗೂ ಅಡುಗೆ ಕೋಣೆಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧರ್ಮವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಕೊಡಗಿನ ಗ್ರಾಮಗಳಲ್ಲಿ ರುವ ಪುರಾತನ ದೇವಸ್ಥಾನಗಳು ಜೀರ್ಣೋದ್ಧಾರ ಗೊಳ್ಳುತ್ತಿರುವದ ರಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಕಂಡು ಬರುತ್ತಿದೆ ಎಂದರು.

ನೂತನ ನೈವೇಧ್ಯ ಕೊಠಡಿ ಹಾಗೂ ಅಡುಗೆ ಕೋಣೆಯನ್ನು ತಾಲೂಕು ಪಂಚಾಯಿತಿ ಸದಸ್ಯ ಬಿಜು ಉದ್ಘಾಟಿಸಿ ಮಾತನಾಡಿ, ತಾ.ಪಂ. ವತಿಯಿಂದ ದೊರೆತ ಅನುದಾನದಲ್ಲಿ ದೇವಸ್ಥಾನ ಅಭಿವೃದ್ಧಿಗೆ ವಿನಿಯೋಗಿ ಸಿದ್ದು ಮುಂದಿನ ದಿನಗಳಲ್ಲಿಯೂ ಗ್ರಾಮದ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡುವದಾಗಿ ಭರವಸೆ ವ್ಯಕ್ತಪಡಿಸಿದರು.

ಜಗನ್ನಾಥ್ ಶೆಣೈ ಮಾತನಾಡಿ ದೇವಸ್ಥಾನದಲ್ಲಿ ಪ್ರತಿವಾರವು ದೇವರ ಭಜನೆ ಹರಿಕಥೆಗಳನ್ನು ಆಯೋಜಿಸುವ ಮೂಲಕ ಯುವ ಪೀಳಿಗೆಗಳಿಗೆ ಮನವರಿಕೆ ಮಾಡುವ ಕಾರ್ಯವನ್ನು ದೇವಸ್ಥಾನ ಆಡಳಿತ ಮಂಡಳಿ ನಡೆಸುವಂತೆ ಕಿವಿ ಮಾತು ಹೇಳಿದರು.

ಸಮಾರಂಭದ ವೇದಿಕೆಯಲ್ಲಿ ರೋಶಿನಿ ತೋಟದ ಮಾಲೀಕರಾದ ಎ. ರಾಮಚಂದ್ರಶೆಟ್ಟಿ, ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಅಧ್ಯಕ್ಷ ಪಿ.ಕೆ.ಮುತ್ತಣ್ಣ, ಗಣಪತಿ ನರ್ಸರಿ ಮಾಲೀಕ ಜಿ.ಕುಮಾರಸ್ವಾಮಿ, ಕಂಬಿಬಾಣೆ ಗ್ರಾ.ಪಂ. ಅಧ್ಯಕ್ಷ ಕೆ.ಬಿ.ಕೃಷ್ಣ ಮತ್ತಿತರರು ಇದ್ದರು.

ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸ್ಥಳ ಶುದ್ಧಿ, ಗಣಪತಿ ಹೋಮ, ದುರ್ಗಾಹೋಮ, ರಾಮತಾರಕ ಹೋಮ, ಪಂಚವಿಂಶತಿ ಕಲಶ ಪೂಜೆ, ಶ್ರೀ ರಾಮ ಮತ್ತು ಚಾಮುಂಡೇಶ್ವರಿ ದೇವರಿಗೆ ಪಂಚಾಮೃತ ಅಭಿಷೇಕ ಸಹಿತ ಪಂಚವಿಂಶತಿ ಕಲಶಾಭೀಷೇಕ, ಮಹಾಪೂಜೆ, ವೈದಿಕಾ ಮಂತ್ರಾಕ್ಷತೆ, ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.