ಮಡಿಕೇರಿ, ಮೇ 23 : ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿಕ್ಷಕ ಕೆ.ಕೆ.ಮಂಜುನಾಥ್ ಕುಮಾರ್ ಅವರು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್‍ಕುಮಾರ್ ಶಿಕ್ಷಕರು ಹಾಗೂ ಶಿಕ್ಷಕರ ಕ್ಷೇತ್ರದ ಆಗುಹೋಗುಗಳ ಬಗ್ಗೆ ಮಾಹಿತಿ ಇರುವವರು ಮತ್ತು ಶೈಕ್ಷಣಿಕವಾಗಿ ತೊಡಗಿಸಿಕೊಂಡವರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾಗಬೇಕೆನ್ನು ವದು ಸಂವಿಧಾನದ ಆಶಯವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದಕ್ಕೆ ವಿರುದ್ಧವಾಗಿ ಶಿಕ್ಷಕರ ಭಾವನೆಯನ್ನು ಅರ್ಥಮಾಡಿಕೊಳ್ಳದ ಹಾಗೂ ಶೈಕ್ಷಣಿಕ ಕ್ಷೇತ್ರದ ಬಗ್ಗೆ ಕಾಳಜಿ ಇಲ್ಲದ ವ್ಯಕ್ತಿಗಳು ಗೆಲುವನ್ನು ಸಾಧಿಸುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.
ಈ ಬಾರಿ ಶಿಕ್ಷಕರೊಬ್ಬರು ವಿಧಾನ ಪರಿಷತ್ ಸದಸ್ಯರಾಗಬೇಕೆಂದು ಶಿಕ್ಷಕ ವರ್ಗ ಪಣತೊಟ್ಟಿದ್ದು, ಜೂ.8 ರಂದು ತಮ್ಮ ಗೆಲುವು ಖಚಿತವೆಂದು ಮಂಜುನಾಥ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಚುನಾವಣೆಯಲ್ಲಿ ಕೆಲವರ ಕುತಂತ್ರದಿಂದಾಗಿ ಅಲ್ಪಮತಗಳಿಂದ ಸೋಲಾಗಿದೆ. ಆದರೆ ಈ ಬಾರಿ ಸರ್ವ ಶಿಕ್ಷಕರು ನನ್ನ ಪರವಾಗಿದ್ದು, ಎಲ್ಲೆಲ್ಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿಸಿದರು.
ಶಿಕ್ಷಕರು ಮತ್ತು ಶಿಕ್ಷಕರ ಕ್ಷೇತ್ರದ ಅನೇಕ ಸಮಸ್ಯೆಗಳು ಇನ್ನೂ ಕೂಡ ಬಗೆಹರಿಯದೆ ಜೀವಂತವಾಗಿದ್ದು, ನಾನು ವಿಧಾನಪರಿಷತ್ ಸದಸ್ಯನಾಗಿ ಆಯ್ಕೆಯಾದ ತಕ್ಷಣ ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸುವದಾಗಿ ಮಂಜುನಾಥ್‍ಕುಮಾರ್ ಭರವಸೆ ನೀಡಿದರು.
ನಾಮಪತ್ರ ಸಲ್ಲಿಸುವ ಸಂದರ್ಭ ಜಿ.ಪಂ ಸದಸ್ಯರಾದ ಕೆ.ಪಿ.ಚಂದ್ರಕಲಾ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಪಿ.ಶಶಿಧರ್, ಸೋಮವಾರಪೇಟೆ ಅಧ್ಯಕ್ಷ ಕೆ.ಎಂ.ಲೋಕೇಶ್, ನಾಪೋಕ್ಲು ಅಧ್ಯಕ್ಷರಾದ ಬಿ.ಎಂ.ರಮಾನಾಥ್, ಪ್ರಮುಖರಾದ ಬಿ.ಜಿ.ಮಂಜುನಾಥ್, ಆದಂ ಮತ್ತಿತರರು ಹಾಜರಿದ್ದರು.
ಸುಮಾರು ಒಂದು ಸಾವಿರ ಶಿಕ್ಷಕರು ತಲಾ 10 ರೂ.ಗಳಂತೆ ಸಂಗ್ರಹಿಸಿ ಹತ್ತು ಸಾವಿರ ರೂ. ಠೇವಣಿಯನ್ನು ಪಾವತಿಸಿದ್ದು ವಿಶೇಷವಾಗಿತ್ತು. ವಿಧಾನ ಪರಿಷತ್ ಸದಸ್ಯೆವೀಣಾ ಅಚ್ಚಯ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವುಮಾದಪ್ಪ ಅವರು ತಮ್ಮ ಗೆಲುವಿಗಾಗಿ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದಾರೆ ಎಂದು ಕೆ.ಕೆ.ಮಂಜುನಾಥ್ ಕುಮಾರ್ ಇದೇ ಸಂದರ್ಭ ತಿಳಿಸಿದರು.