ಸೋಮವಾರಪೇಟೆ, ಮೇ 24: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸೋಮವಾರಪೇಟೆಯ ಶಾಸಕರ ಕಚೇರಿಯಲ್ಲಿ ಇಂದು ಕಾರ್ಯಾರಂಭಕ್ಕಿಳಿದರು. ವಿಧಾನ ಸಭಾ ಚುನಾವಣೆ ಘೋಷಣೆ ಯಾಗುತ್ತಿದ್ದಂತೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಶಾಸಕರ ಕಚೇರಿಯನ್ನು ತೊರೆದಿದ್ದ ರಂಜನ್ ಅವರು ಪಕ್ಷದ ಕಚೇರಿಯಲ್ಲೇ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಭೇಟಿಯಾಗುತ್ತಿದ್ದರು. ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿರುವ ಅಪ್ಪಚ್ಚು ರಂಜನ್ ಅವರು ಇಂದು ಅಧಿಕೃತವಾಗಿ ಕಚೇರಿಯಲ್ಲಿ ಕೆಲಸಕ್ಕಿಳಿದರು. ಕಚೇರಿಯಲ್ಲಿ ಬೆಳಗ್ಗೆ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಚಂದ್ರಶೇಖರ್ ಭಟ್ ಪೌರೋಹಿತ್ಯದಲ್ಲಿ ಗಣಪತಿ ಹೋಮ ಸೇರಿದಂತೆ ಇನ್ನಿತರ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಭಾರತೀಯ ಜನತಾ ಪಾರ್ಟಿಯ ನೂರಾರು ಕಾರ್ಯಕರ್ತರು ಪೂಜೆಯಲ್ಲಿ ಭಾಗವಹಿಸಿದ್ದರು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪಕ್ಷದ ಜಿಲ್ಲಾ ವಕ್ತಾರ ಅಭಿಮನ್ಯುಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್,ಪ್ರಮುಖರಾದ ವಿ.ಎಂ. ವಿಜಯ, ಎಸ್.ಬಿ. ಭರತ್ ಕುಮಾರ್, ಎನ್. ಆರ್. ಅಜೀಶ್ ಕುಮಾರ್, ಪಕ್ಷದ ತಾಲೂಕು ಕಾರ್ಯದರ್ಶಿ ಮನು ರೈ, ಪಟ್ಟೆಮನೆ ಶೇಷಪ್ಪ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ತಾ.ಪಂ. ಸದಸ್ಯೆ ತಂಗಮ್ಮ, ಬಿಜೆಪಿ ಮಹಿಳಾ ಮೋರ್ಚಾದ ನಳಿನಿ ಗಣೇಶ್, ಸುಮಾ ಸುದೀಪ್, ಉಷಾ ತೇಜಸ್ವಿ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.