ಸೋಮವಾರಪೇಟೆ, ಮೇ 24: ಕಾನ್ವೆಂಟ್ ಬಾಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿದ್ದು, ಪಂಚಾಯಿತಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ಚೌಡ್ಲು ಗ್ರಾಪಂ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕಳೆದ 2-3 ತಿಂಗಳುಗಳಿಂದ ಸಮರ್ಪಕ ನೀರು ಸರಬರಾಜಿಲ್ಲದೆ ಪರದಾಡುವಂತಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಪಂಚಾಯಿತಿ ಗಮನಕ್ಕೆ ತಂದರೂ ಸಹ ಪ್ರಯೋಜನವಾಗಿಲ್ಲ ಎಂದು ನಿವಾಸಿ ವಿನ್ಸಿ ಡಿಸೋಜ ಹೇಳಿದರು.

ಗುರುವಾರ ಬೆಳಿಗ್ಗೆ ಕಛೇರಿ ಮುಂದೆ ಜಮಾಯಿಸಿದ ಗ್ರಾಮಸ್ಥರು ಪಿ.ಡಿ.ಒ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೀರು ಕೊಡಿ ಎಂದರೆ, ಚುನಾವಣೆ ಕೆಲಸ, ನೀತಿ ಸಂಹಿತೆ ಎಂದು ಸಬೂಬು ಹೇಳುತ್ತಿರಾ... ಚುನಾವಣೆ ಬಂದರೆ ಕುಡಿಯುವ ನೀರು ಸರಬರಾಜು ಮಾಡುವದಿಲ್ಲವೆ? ಎಂದು ಮಹಿಳೆಯರು ಪ್ರಶ್ನಿಸಿದರು.

ಕಾನ್ವೆಂಟ್ ಬಾಣೆಯಲ್ಲಿ ಒಂದು ಕೊಳವೆ ಬಾವಿ ಇದೆ. ಇವತ್ತಿಗೂ ಪರ್ಯಾಯ ವ್ಯವಸ್ಥೆ ಇಲ್ಲ. ಆದರೆ ಅಧ್ಯಕ್ಷರ ಮನೆಗೆ ದಿನದ 24 ಗಂಟೆ ನೀರು ಕೊಡಲಾಗುತ್ತಿದೆ. ಇಂತಹ ತಾರತಮ್ಯ ಸಲ್ಲದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಿ.ಡಿ.ಓ ಸುಮೇಶ್ ಮಾತನಾಡಿ, ಚುನಾವಣೆ ಕಾರ್ಯದಲ್ಲಿ ಭಾಗಿಯಾಗಿದ್ದ ಕಾರಣ ಸಮಸ್ಯೆಯಾಗಿದೆ. ಮುಂದಿನ ಮುರ್ನಾಲ್ಕು ದಿನಗಳೊಳಗೆ ಸಮಸ್ಯೆ ಬಗೆ ಹರಿಸುವದಾಗಿ ತಿಳಿಸಿದರು. ಈ ಸಂದರ್ಭ ಕಾರ್ಯದರ್ಶಿ ಕುಶಾಲಪ್ಪ, ಗ್ರಾ.ಪಂ. ಸದಸ್ಯ ಸಿ.ಸಿ.ನಂದ, ಏಕಾನಂದ, ಗಣಪತಿ, ಪರಮೇಶ್, ಜಗದೀಶ್, ಪ್ರಜ್ವಲ್, ಪ್ರೇಮ, ಶಿಲ್ಪ, ರಾಜಣ್ಣ ಮತ್ತಿತರರು ಇದ್ದರು.