ವೀರಾಜಪೇಟೆ, ಮೇ 24: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಜೂನ್ 10 ರಿಂದ ಆರಂಭಗೊಳ್ಳಲಿರುವ 19 ವರ್ಷದ ಬಾಲಕ ಹಾಗೂ ಬಾಲಕಿಯರ ದ್ವಿತೀಯ ವರ್ಷದ ರಾಷ್ಟ್ರಮಟ್ಟದ ಊರ್ಜಾ ಕಪ್ ಫುಟ್ಬಾಲ್ ಪಂದ್ಯಾಟಕ್ಕೆ ಕೊಡಗು ಜಿಲ್ಲಾ ತಂಡವನ್ನು ತಾ. 27 ರಂದು 9 ಗಂಟೆಗೆ ಕುಶಾಲನಗರದ ಗುಡ್ಡೆಹೊಸೂರಿನ ಐ.ಎನ್.ಎಸ್. ಫುಟ್ಬಾಲ್ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವದು. ಆಯ್ಕೆಗೆ ಬರುವ ಕ್ರೀಡಾಪಟುಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ನ ಮೂಲಪ್ರತಿಯನ್ನು ಹಾಜರುಪಡಿಸಬೇಕು ಎಂದು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾ ಫುಟ್ಬಾಲ್ ತೀರ್ಪುಗಾರರ ಅಧ್ಯಕ್ಷ ಹಾಗೂ ಕೋಚ್ ಪಂದಿಕಂಡ ನಾಗೇಶ್ ಮಾತನಾಡಿ, ಕಳೆದ 15 ವರ್ಷಗಳಿಂದ ನಮ್ಮ ಜಿಲ್ಲೆಯ ಹಲವಾರು ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಅನೇಕ ಫುಟ್ಬಾಲ್ ಪಂದ್ಯಗಳು ನಡೆಯುತ್ತಿದ್ದು, ಉತ್ತಮ ಪ್ರತಿಭೆಗಳು ಹೊರಹೊಮ್ಮುತ್ತಿದ್ದಾರೆ. ದುರಾದೃಷ್ಟ ಸಂಗತಿ ಎಂದರೆ ಜಿಲ್ಲೆಯಲ್ಲಿ ಅನಧಿಕೃತವಾದ ಸಂಸ್ಥೆಯೊಂದು ಹುಟ್ಟಿಕೊಂಡು ರಾಜ್ಯ ಹಾಗೂ ಜಿಲ್ಲಾ ಸಂಸ್ಥೆಯ ಯಾವದೇ ಅನುಮತಿಯನ್ನು ಪಡೆಯದೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಗೆ ಮುಂದಾಗಿದೆ. ಆ ಸಂಸ್ಥೆಯ ಕ್ರೀಡಾಪಟುಗಳಿಗೆ ಯಾವದೇ ಮಾನ್ಯತೆ ಇಲ್ಲ. ಅಂತಹವರನ್ನು ಜಿಲ್ಲಾ ತಂಡ ಎಂದು ಪರಿಗಣಿಸಲಾಗುವದಿಲ್ಲ. ಅಲ್ಲದೆ ಸುಂಟಿಕೊಪ್ಪ ಹಾಗೂ ಗೋಣಿಕೊಪ್ಪದಲ್ಲಿ ನಕಲಿ ಆಧಾರ್ ಕಾರ್ಡ್ಗಳನ್ನು ತಯಾರಿಸಿ 19 ವರ್ಷದ ವಯೋಮಿತಿಯ ಆಟಗಾರರನ್ನು 14 ವರ್ಷ ವಯೋಮಿತಿಯಲ್ಲಿ ಆಡಿಸುತ್ತಿರುವದು ತಮ್ಮ ಗಮನಕ್ಕೆ ಬಂದಿರುವದರಿಂದ ಕ್ರೀಡಾಪಟುಗಳ ಆಧಾರ್ ಕಾರ್ಡ್ಗಳನ್ನು ಆನ್ಲೈನ್ ಮೂಲಕ ಪರಿಶೀಲಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವದು ಎಂದು ಹೇಳಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಖಜಾಂಚಿ ದೀಪಕ್ ಮಾಚಯ್ಯ ಉಪಸ್ಥಿತರಿದ್ದರು.