ಮಡಿಕೇರಿ, ಮೇ 23: ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿಯಲ್ಲಿ ಜಲಮೂಲ ಕ್ಷೀಣಿಸುತ್ತಿರುವ ಆತಂಕ ವ್ಯಕ್ತಗೊಂಡಿದ್ದು, ಬ್ರಹ್ಮಗಿರಿ ಬೆಟ್ಟ ಸೇರಿದಂತೆ ಕ್ಷೇತ್ರದ ಪಾವಿತ್ರ್ಯ ಕಾಪಾಡುವ ದಿಕ್ಕಿನಲ್ಲಿ ಅಗತ್ಯ ದೋಷ ಪರಿಹಾರ ಕೈಗೊಳ್ಳುವಂತೆ ತೃತೀಯ ದಿನದ ಅಷ್ಟಮಂಗಲ ಪ್ರಶ್ನೆಯಲ್ಲಿ ದೈವಜ್ಞರು ನಿರ್ದೇಶಿಸಿದ್ದಾರೆ.

ಆ ಹೊರತಾಗಿ ತಲಕಾವೇರಿ-ಭಾಗಮಂಡಲ ಕ್ಷೇತ್ರ ಮರಣಶಯ್ಯೆಯಲ್ಲಿರುವ ದುಸ್ಥಿತಿ ತಲಪಿದೆ ಎಂದು ದೈವಜ್ಞರು ವಿಶ್ಲೇಷಿಸಿದ್ದಾರೆ. ಆದರೆ, ಪ್ರಾರಂಭದ ಸೂಚನೆಯಲ್ಲಿ ಈ ಬಗ್ಗೆ ಅಪಾಯದ ಮುನ್ಸೂಚನೆ ಬಂದರೂ ಬಳಿಕ ಬಂದ ಶಕುನ ಶಾಸ್ತ್ರದ ಅನ್ವಯ ಈ ಎಲ್ಲ ದೋಷಗಳಿಗೆ ಪರಿಹಾರವೂ ಕಂಡುಬಂದಿತು.

ಕೊಡಗು ಸೀಮೆಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಇಂದು ಮುಂದುವರಿದ ಪ್ರಶ್ನೆ ಸಂದರ್ಭ, ಅಷ್ಟಮಂಗಲಕ್ಕೆ ದೈವಜ್ಞರನ್ನು ತಾಂಬೂಲ ಕೊಟ್ಟು ಆಹ್ವಾನಿಸಿದ ಲಕ್ಷಣದ ವಿಮರ್ಶೆ ನಡೆಸಿದ ವೇಳೆಯಲ್ಲಿ ಕ್ಷೇತ್ರದ ದುಸ್ಥಿತಿಯೊಂದಿಗೆ ಕಾವೇರಿ ನದಿ ಮೂಲ ಮುಂದೊಮ್ಮೆ ಸರಸ್ವತಿ ನದಿಯಂತೆ ಅದೃಶ್ಯವಾದೀತೆ ಎಂಬ ಜಿಜ್ಞಾಸೆ ವ್ಯಕ್ತಗೊಂಡಾಗ, ಅಂತಹ ಸನ್ನಿವೇಶ ಎದುರಾಗದಂತೆ ತಲಕಾವೇರಿ-ಭಾಗಮಂಡಲ ಕ್ಷೇತ್ರಗಳೊಂದಿಗೆ

(ಮೊದಲ ಪುಟದಿಂದ) ಬ್ರಹ್ಮಗಿರಿಯ ಪರಿಸರವನ್ನು ಸಂರಕ್ಷಿಸುವ ದಿಕ್ಕಿನಲ್ಲಿ ಚಿಂತನೆ ಹರಿಸಲಾಯಿತು.

ಮುಖ್ಯವಾಗಿ ಕ್ಷೇತ್ರಕ್ಕೆ ಬರುವ ಮಹಿಳೆಯರು, ಮಕ್ಕಳ ಸಹಿತ ಪ್ರತಿಯೊಬ್ಬರು ಶುದ್ಧ ಮನಸ್ಸಿನೊಂದಿಗೆ ಶುಚೀರ್ಭೂತರಾಗಿ ಸಾಂಪ್ರದಾಯಿಕ ಉಡುಪುಗಳಲ್ಲಿ ದೈವದರ್ಶನ ಮಾಡಬೇಕೆಂದು ಕಂಡುಬಂತು. ಶಬರಿಮಲೆ ಕ್ಷೇತ್ರದಲ್ಲಿನ ಕಟ್ಟುಪಾಡುಗಳಂತೆ ತಲಕಾವೇರಿ ಕ್ಷೇತ್ರ ದರ್ಶನ ವ್ಯವಸ್ಥೆ ರೂಪಿಸಲು ಸಲಹೆ ನೀಡಲಾಯಿತು. ಅಲ್ಲದೆ ಕ್ಷೇತ್ರದಲ್ಲಿ ನಿಶ್ಯಬ್ಧತೆಯಿಂದಿರಬೇಕು ಎಂದು ಸೂಚಿಸಲಾಯಿತು.

ಬ್ರಹ್ಮಗಿರಿಗೆ ನಿರ್ಬಂಧ: ಬ್ರಹ್ಮಗಿರಿ ಬೆಟ್ಟದ ಪಾವಿತ್ರ್ಯ ಲೆಕ್ಕಿಸದೆ ಪ್ರವಾಸಿ ತಾಣದ ಭಾವನೆಯಿಂದ ಮೋಜು, ಮಸ್ತಿಗಾಗಿ ತೆರಳುವದನ್ನು ಕಡ್ಡಾಯವಾಗಿ ನಿರ್ಬಂಧಿಸುವದರೊಂದಿಗೆ, ಸಾಧು ಸಂತರು, ಸಾಧಕರು, ಸದ್ಭಕ್ತ ಪುರುಷರು ಮಾತ್ರ ತೀರ್ಥ ಸ್ನಾನ ಮಾಡಿ ಶುಭ್ರವಸ್ತ್ರಧಾರಿಗಳಾಗಿ ಕೇವಲ ತುಲಾ ಮಾಸದಲ್ಲಿ ತೆರಳಲು ಅವಕಾಶ ಮಾಡಿಕೊಡುವಂತೆ ದೈವಜ್ಞರು ನಿರ್ದೇಶಿಸಿದರು. ಈ ಸಂಬಂಧ ಸ್ಥಳೀಯರಲ್ಲಿ ಪರ-ವಿರೋಧದ ಬಗ್ಗೆ ದೇವಾಲಯ ಸಮಿತಿ ಸೂಕ್ತ ತಿಳುವಳಿಕೆ, ಸೂಚನಾ ಫಲಕಗಳನ್ನು ಅಳವಡಿಸುವಂತೆ ಅಭಿಪ್ರಾಯ ಕೇಳಿಬಂತು.

ಪ್ರತಿ ವರ್ಷ ತುಲಾ ಸಂಕ್ರಮಣ (ಅ. 17) ರಿಂದ ಪ್ರಾರಂಭಗೊಂಡು ವೃಷಭ ಸಂಕ್ರಮಣ (ಮೇ 15)ರ ವರೆಗೆ ಮಾತ್ರ ಬ್ರಹ್ಮಗಿರಿ ಬೆಟ್ಟ ಹತ್ತಬಹುದಾಗಿದೆ. ಕನ್ಯೆಯರು, ವಯೋವೃದ್ಧ ಮಹಿಳೆಯರು ಹಾಗೂ ಪುರುಷರು ಶುಚಿರ್ಭೂತರಾಗಿ ಮಾತ್ರ ಬೆಟ್ಟ ಹತ್ತಬಹುದಾಗಿದೆ ಎಂದು ಜ್ಯೋತಿಷಿಗಳು ತಿಳಿಸಿದರು. ಬ್ರಹ್ಮಗಿರಿ ಬೆಟ್ಟದಲ್ಲಿ ಮಹರ್ಷಿ ಅಗಸ್ತ್ಯರ ನೆಲೆಯಿದೆ. ಅಲ್ಲಿಗೆ ತೆರಳುವವರು ಮೌನಿಗಳಾಗಿ ಧ್ಯಾನಾಸಕ್ತರಾಗಬೇಕೇ ಹೊರತು ಶಬ್ಧ ಮಾಲಿನ್ಯ ಆಗಬಾರದು ಎಂದರು.

ಜಲ ಮೂಲಕ್ಕೆ ಧಕ್ಕೆ: ಈ ಮೊದಲು ಸರಕಾರದಿಂದ ಕ್ಷೇತ್ರದ ಅಭಿವೃದ್ಧಿ ಸಂದರ್ಭ ಜಲಮೂಲಕ್ಕೆ ಪೋಷಣೆ ನೀಡುತ್ತಿದ್ದ ಅತ್ತಿಮರಗಳನ್ನು ತೆರವುಗೊಳಿಸಿ ಕ್ಷೇತ್ರ ತಂತ್ರಿಗಳ ನಿರ್ದೇಶನವನ್ನೂ ಪಡೆಯದೆ ತೀರ್ಥ ಕುಂಡಿಕೆ ಬಳಿ ತಡೆಗೋಡೆ ಇತ್ಯಾದಿ ನಿರ್ಮಾಣದಿಂದ ಜಲಮೂಲ ಸೆಲೆಗಳಲ್ಲಿ ವ್ಯತ್ಯಾಸವಾಗಿದೆ ಎಂಬ ಅಂಶವೂ ಪ್ರಶ್ನೆಯಿಂದ ಗೋಚರಿಸಿದೆ.

ಪ್ರವಾಸಿಗಳಿಂದ ಅಶುಚಿತ್ವ: ತಲಕಾವೇರಿ ಕ್ಷೇತ್ರಕ್ಕೆ ಭಕ್ತಿಯಿಂದ ನಡೆದುಕೊಳ್ಳದೆ, ಶುದ್ಧಭಾವವಿಲ್ಲದೆ ಬರುವ ಕೆಲವು ಪ್ರವಾಸಿಗರು ಹಾಗೂ ಕೆಲವೊಮ್ಮೆ ಅಂತಹ ಮಹಿಳೆಯರು ಕೊಳದ ನೀರನ್ನು ಮಲಿನಗೊಳಿಸುವದರಿಂದ ಅಶುಚಿತ್ವದೊಂದಿಗೆ ಕ್ಷೇತ್ರದಲ್ಲಿ ಹೆಚ್ಚಿನ ದೋಷ ಬಾಧೆಗಳು ಎದುರಾಗಿದ್ದು, ಕಾವೇರಿ ಸನ್ನಿಧಿಯ ಚೈತನ್ಯ ಕುಂದುವಂತಾಗಿ ಅರ್ಚಕರು ಆಡಳಿತ ಸಿಬ್ಬಂದಿಯಲ್ಲಿ ಕಲಹಗಳಿಗೆ ಎಡೆಯಾಗಿದೆ ಎಂದು ಗೋಚರವಾಯಿತು.

ಪುರಾಣೋಕ್ತ ಇತಿಹಾಸ: ತಲಕಾವೇರಿ-ಭಾಗಮಂಡಲ ಕ್ಷೇತ್ರಕ್ಕೆ ಪುರಾಣೋಕ್ತ ಇತಿಹಾಸದೊಂದಿಗೆ, ಪರಂಪರಾಗತವಾಗಿ ನಡೆದುಕೊಂಡು ಬರುತ್ತಿದ್ದ ಪೂಜಾದಿ ಸಹಿತ ತಕ್ಕಾಮೆ ಇತ್ಯಾದಿಯಲ್ಲಿ ಮಾರ್ಪಾಡುಗಳಾಗಿದ್ದು, ಅವೆಲ್ಲವನ್ನೂ ಹಿಂದಿನಂತೆಯೇ ಮರು ಸ್ಥಾಪಿಸಲು ದೈವ ಪ್ರೇರಣೆ ಇರುವದಾಗಿ ಅಭಿಪ್ರಾಯ ಕೇಳಿಬಂತು. ಕ್ಷೇತ್ರಕ್ಕೆ ಇತರ ದೈವ ನೆಲೆಗಳ ಸಂಬಂಧ, ಮಂಡೀರ, ಪಟ್ಟಮಾಡ ಹಾಗೂ ಮಣವಟ್ಟಿರ ಜೊತೆಗೆ ಈಗ ಇರುವ ಕೋಡಿ ಹಾಗೂ ಬಳ್ಳಡ್ಕ ಕುಟುಂಬಗಳ ಮುಂದಾಳತ್ವ ಈ ಸಂದರ್ಭ ಗೋಚರವಾಗಿ ಚರ್ಚೆ ನಡೆಯಿತು.

ಅಷ್ಟಮಂಗಲಕ್ಕೆ ಆಗಮಿಸಿದ ದೈವಜ್ಞರನ್ನು ಬರಮಾಡಿಕೊಂಡು ಸ್ವರ್ಣ ತಾಂಬೂಲ ನೀಡಿದ ಶುಭಕಾರಕ ಫಲದಿಂದ, ಕ್ಷೇತ್ರವು ಅಭಿವೃದ್ಧಿಯೊಂದಿಗೆ ಗುರು-ದೈವ ಬಲದಿಂದ ದೋಷಗಳು ಪರಿಹಾರ ಕಾಣುವದರೊಂದಿಗೆ ಭಕ್ತ ಸಮೂಹ ಸಹಿತ ಸರ್ವರಲ್ಲಿ ಒಗ್ಗಟ್ಟು ಮೂಡುವ ಆಶಯವೂ ವ್ಯಕ್ತವಾಯಿತು.

ಒಣಗುವ ಸ್ಥಿತಿ: ಕ್ಷೇತ್ರದಲ್ಲಿ ದೈವಾಪರಾಧ, ಪಾಪಕೃತ್ಯಗಳು, ಪ್ರವಾಸಿಗರಿಂದ ಎದುರಾಗಿರುವ ಖಾಸಗಿ ವ್ಯವಹಾರಗಳು ಸುಂದರ ಪ್ರಾಕೃತಿಕ ತಾಣದ ಹಸಿರು ಸುಡು ಬಿಸಿಲಿನಿಂದ ಒಣಗುವಂತಹ ಸ್ಥಿತಿಯಲ್ಲಿನ ಲಕ್ಷಣ ಗೋಚರಿಸಿತು. ಈ ಬಗ್ಗೆ ಸೂಕ್ತ ದೈವ ಪರಿಹಾರಗಳನ್ನು ವಿಧಿ ವಿಧಾನಗಳಿಂದ ನೆರವೇರಿಸದಿದ್ದರೆ ಜೀವನದಿ ಕಾವೇರಿಯು ಭವಿಷ್ಯದಲ್ಲಿ ಬರಡಾಗುವ ಸನ್ನಿವೇಶ ಎದುರಾಗುವ ಆತಂಕ ಪ್ರಶ್ನೆಯಿಂದ ಅರಿವಿಗೆ ಬಂತು. ಅರ್ಚಕರು ಕೂಡ ತಮ್ಮ ಸರದಿ ಸಂದರ್ಭ ಹೊಸಬರನ್ನು ಕರೆಸಿ ಕ್ಷೇತ್ರದಲ್ಲಿ ಅರ್ಚನೆಗೆ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಅಂತಹವರಿಗೆ ಸೂಕ್ತ ಉಪದೇಶ, ತರಬೇತಿ ನೀಡುವ ಅಗತ್ಯವಿದೆ. ಹೀಗೆ ಮಾಡದಿರುವದರಿಂದ ಅರ್ಚನಾ ದೋಷ ಎದ್ದು ಕಾಣುತ್ತಿದೆ ಎಂದರು.

ಇಂತಹ ಅಪಾಯದಿಂದÀ ಕೊಡಗು ಸೇರಿದಂತೆ ದೇಶಕ್ಕೆ ಗಂಡಾಂತರ ತಪ್ಪಿಸಲು ಕ್ಷೇತ್ರ ತಂತ್ರಿಗಳ ಮಾರ್ಗದರ್ಶನದಂತೆ ಸೂಕ್ತ ದೇವತಾ ಕೈಂಕರ್ಯಗಳನ್ನು ದೋಷ ಪರಿಹಾರಕ್ಕಾಗಿ ಕೈಗೊಂಡು, ಜೀವನದಿ ಕಾವೇರಿ ಮೂಲದೊಂದಿಗೆ ತೀರ್ಥ ಕ್ಷೇತ್ರ ಮತ್ತು ದೇವನೆಲೆಗಳ ಸುರಕ್ಷತಾ ಕ್ರಮಕ್ಕೆ ಮುಂದಾಗುವಂತೆಯೂ ದೈವಜ್ಞರಿಂದ ನಿರ್ದೇಶನ ಲಭಿಸಿತು.

ದೈವಜ್ಞರಾದ ನಾರಾಯಣ ಪೊದುವಾಳ್, ಚೋದ್ಯರಾದ ಉಪನ್ಯಾಸಕ ಶ್ಯಾಂ ಸುಂದರ್ ಶಾಸ್ತ್ರಿ ಸೇರಿದಂತೆ ಅಷ್ಟಮಂಗಲ ವೇಳೆ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಪ್ರಮುಖರುಗಳಾದ ಮಂಡಿರ ದೇವಿ ಪೂಣಚ್ಚ, ಮಣವಟ್ಟಿರ ದೊರೆ ಸೋಮಣ್ಣ, ಸೂರ್ತಲೆ ಸೋಮಣ್ಣ, ನೆರವಂಡ ಉಮೇಶ, ಮಂದಪಂಡ ಮನೋಜ್, ಮಂದಪಂಡ ಸತೀಶ, ಡಾ. ಎಸ್.ಎಂ. ಕಾವೇರಪ್ಪ, ಎಂ.ಬಿ. ದೇವಯ್ಯ, ಕೋಡಿ ಮೋಟಯ್ಯ, ಮನು ಮುತ್ತಪ್ಪ, ಪಿ.ಆರ್. ಪ್ರಮೋದ್, ಸತೀಶ್ ಮಂದಪ್ಪಂಡ, ಮಣವಟ್ಟಿರ ಚಿಣ್ಣಪ್ಪ, ಕಲ್ಮಾಡಂಡ ಸುಬ್ಬಯ್ಯ, ಕೆ.ಎ. ಕಾರ್ಯಪ್ಪ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಸದ್ಭಕ್ತರು, ವ್ಯವಸ್ಥಾಪನಾ ಸಮಿತಿ, ಅರ್ಚಕ ಕುಟುಂಬ ಹಾಗೂ ಅಧಿಕಾರಿಗಳು ಹಾಜರಿದ್ದು ಚರ್ಚೆ ನಡೆಸಿದರು.