ಮಡಿಕೇರಿ, ಮೇ 23: ನಿಪಾ ವೈರಸ್ ಜ್ವರ ಹರಡದಂತೆ ನೋಡಿಕೊಳ್ಳಲು ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಹಾಗೂ ಪಶುಪಾಲನಾ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿಪಾ ವೈರಸ್ ಕಾಯಿಲೆ ಹಾಗೂ ಇತರ ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಕುರಿತು ನಡೆದ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೆರೆಯ ರಾಜ್ಯ ಕೇರಳದಲ್ಲಿ ನಿಪಾ ವೈರಾಣುವಿನಿಂದ 10 ಮಂದಿ ಬಲಿಯಾಗಿರುವ ಬಗ್ಗೆ ವರದಿಯಾಗಿದೆ. ಜಿಲ್ಲೆಯಲ್ಲಿಯೂ ಈ ಬಗ್ಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು. ನಿಪಾ ವೈರಾಣು ಜ್ವರದ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ತುರ್ತು ಆರೋಗ್ಯ ಸೇವೆ ಕಲ್ಪಿಸುವದು. ಜೊತೆಗೆ ಈ ಬಗ್ಗೆ ಮಾಹಿತಿ ನೀಡುವಂತಾಗಬೇಕು. ಹಾಗೆಯೇ ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ದೊಡ್ಡ ನಾಮಫಲಕ ಅಳವಡಿಸಿ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದರು. ಸದ್ಯದಲ್ಲಿಯೇ ಶಾಲೆಗಳು ಆರಂಭವಾಗಲಿದ್ದು,
(ಮೊದಲ ಪುಟದಿಂದ) ಮಕ್ಕಳಿಗೆ ಈ ವೈರಾಣು ಬಗ್ಗೆ ಮಾಹಿತಿ ನೀಡಬೇಕು. ಸರ್ಕಾರಿ ಮತ್ತು ಖಾಸಗಿ ಬಸ್‍ಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವಂತಾಗಬೇಕು. ವೈಯಕ್ತಿಕ ಶುಚಿತ್ವ ಕಡೆ ವಿಶೇಷ ಗಮನಹರಿಸಲು ಜಾಗೃತಿ ಮೂಡಿಸಬೇಕಿದೆ ಎಂದು ಸಲಹೆ ಮಾಡಿದರು.
ನಗರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‍ಗಳಲ್ಲಿ ಕಸವನ್ನು ಸಂಗ್ರಹಿಸಿ ತ್ಯಾಜ್ಯ ಘಟಕಕ್ಕೆ ವಿಲೇವಾರಿ ಮಾಡಬೇಕು. ಹಾಡಿಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ನಿಪಾ ವೈರಾಣು ಬಗ್ಗೆ ಎಚ್ಚರಿಕೆಯಿಂದಿರಲು ಮಾಹಿತಿ ನೀಡುವಂತೆ ಅವರು ಸೂಚನೆ ನೀಡಿದರು.
ಮಾಹಿತಿ, ಶಿಕ್ಷಣ ಮತ್ತು ಸಹಭಾಗಿತ್ವದಡಿ(ಐಇಸಿ) ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಕರಪತ್ರ, ಬಿತ್ತಿಪತ್ರ, ಬ್ಯಾನರ್‍ಗಳನ್ನು ಮುದ್ರಿಸಿ ಶಾಲಾ-ಕಾಲೇಜು, ಪ್ರವಾಸಿ ಸ್ಥಳಗಳು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಬೇಕು ಎಂದು ಸಲಹೆ ಮಾಡಿದರು.
ಹಂದಿ ಘಟಕಗಳಲ್ಲಿ ಸ್ವಚ್ಚತೆಗೆ ಗಮನಹರಿಸುವದು, ಹಂದಿ ಹಾಗೂ ಇತರ ಪ್ರಾಣಿಗಳಿಗೆ ಜ್ವರ ಬಂದಲ್ಲಿ ತಕ್ಷಣವೇ ಪಶು ವೈದ್ಯರನ್ನು ಭೇಟಿ ಮಾಡುವಂತಾಗಲು ಜಾಗೃತಿ ಮೂಡಿಸುವದು. ಆ ನಿಟ್ಟಿನಲ್ಲಿ ಪಶುಪಾಲನಾ ಇಲಾಖೆಯ ನಿರ್ದೇಶನಗಳನ್ನು ಚಾಚು ತಪ್ಪದೆ ಪಾಲಿಸುವಂತೆ ಪಶುಪಾಲನಾ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಅವರು ‘ನಿಪಾ’ ವೈರಸ್ ಖಾಯಿಲೆಯು 1998 ಮತ್ತು 1999 ನೇ ಇಸವಿಯಲ್ಲಿ, ಮಲೇಷಿಯಾ ಮತ್ತು ಸಿಂUಪುರ ದೇಶಗಳಲ್ಲಿನ ಮನೆಯಲ್ಲಿ ಸಾಕಿರುವ ಹಂದಿಗಳಲ್ಲಿ ಪತ್ತೆಯಾಗಿದೆ. ಮಲೇಷಿಯಾ ದೇಶದ ನಿಪಾ ಗ್ರಾಮದಲ್ಲಿ ಈ ವೈರಸ್ ಪ್ರಭೇದವನ್ನು ಪ್ರಪ್ರಥಮವಾಗಿ ಕಂಡುಹಿಡಿಯಲಾಗಿದೆ. ಮನೆಯಲ್ಲಿ ಸಾಕುವ ನಾಯಿ, ಬೆಕ್ಕು, ಮೇಕೆ, ಕುದುರೆ ಮತ್ತು ಕೆಲವು ಸಂದರ್ಭದಲ್ಲಿ ಕುರಿಗಳೂ ಸಹ ಸೋಂಕಿಗೆ ತುತ್ತಾಗುವ ಸಂಭವವಿರುತ್ತದೆ ಎಂದರು.
ಈ ಕಾಯಿಲೆಯು 2001 ರಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿ ಗ್ರಾಮದಲ್ಲಿ ಈ ಮೊದಲು ಕಾಣಿಸಿಕೊಂಡಿತ್ತು ಅಲ್ಲದೆ ನೆರೆಯ ಬಾಂಗ್ಲಾ ದೇಶದಲ್ಲಿ 2003, 2004, 2005, 2007 ಹಾಗೂ 2008 ರಲ್ಲಿ ಕಾಣಿಸಿಕೊಂಡಿದೆ. ಒಟ್ಟಾರೆ ಮಲೇಷಿಯಾ, ಸಿಂಗಪುರ, ಬಾಂಗ್ಲಾದೇಶ ಮತ್ತು ಭಾರತದಲ್ಲಿ ಈವರೆಗೆ 477 ಖಚಿತ ಪ್ರಕರಣಗಳು ವರದಿಯಾಗಿದೆ ಎಂದು ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ಕೇರಳ ರಾಜ್ಯದ ಕೋಝಿಕೋಡ್‍ನ ಪೆರಂಬ್ರಗ್ರಾಮ ಹಾಗೂ ಮಲಪ್ಪೂರಮ್‍ನಲ್ಲಿ 96 ಸಂಶಯಾಸ್ಪದ ಪ್ರಕರಣಗಳು ವರದಿಯಾಗಿದೆ. ಈ ಜ್ವರ ಪ್ರಕರಣಕ್ಕೆ ನಿಪಾ ವೈರಸ್ ಕಾರಣವೆಂದು ರಾಷ್ಟ್ರೀಯ ವೈರಾಣು ಸಂಸ್ಥೆ ಪುಣೆ ಅವರು ದೃಢಪಡಿಸಿರುತ್ತಾರೆ. ಈ ನಿಪಾ ವೈರಸ್ ಜ್ವರಕ್ಕೆ ನಿರ್ಧಿಷ್ಟವಾದ ಔಷಧಿ ಕಂಡುಹಿಡಿದಿರುವದಿಲ್ಲ ಎಂದರು.
ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ ಬರುವದು. ಪ್ರಜ್ಞಾಹೀನತೆಗೆ ಒಳಗಾಗುವದು. ಅತಿಯಾದ ಜ್ವರ ಮೆದುಳಿಗೆ ವ್ಯಾಪಿಸುವದು. ಮಾತುಗಳಲ್ಲಿ ತೊದಲುವಿಕೆ ಹಾಗೂ ಅಪಸ್ವರದ ಲಕ್ಷಣಗಳು ಕಾಣಿಸಿಕೊಳ್ಳುವದು. ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸಬಹುದು. ಸೊಂಕಿತ ದಿನದಿಂದ 4 ರಿಂದ 18 ದಿನಗಳಲ್ಲಿ ನಿಪಾ ವೈರಸ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಅವರು ತಿಳಿಸಿದರು.
ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಜಗದೀಶ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ವಿ.ಆರ್. ಸುರೇಶ್, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಶಿವಕುಮಾರ್, ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಕಾರ್ಯಪ್ಪ, ಡಾ.ರಾಮಚಂದ್ರ ಕಾಮತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಆನಂದ್, ಡಾ.ಶಿವಕುಮಾರ್, ತಾಲೂಕು ವೈದ್ಯಾಧಿಕಾರಿಗಳಾದ ಯತಿರಾಜು, ಪೌರಾಯುಕ್ತರಾದ ಬಿ.ಶುಭಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ, ಮೀನುಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಟಿ.ದರ್ಶನ್, ಪಟ್ಟಣ ಪಂಚಾಯತ್ ಮುಖ್ಯಧಿಕಾರಿಗಳಾದ ಶ್ರೀಧರ ಇತರರು ಇದ್ದರು.
ಆತಂಕ ಪಡಬೇಕಿಲ್ಲ :ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ನಿಪಾ ವೈರಸ್ ಸಂಬಂಧಿಸಿದಂತೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ ಆರೋಗ್ಯ ಸೇವೆ ಪಡೆಯಲು ಸಾರ್ವಜನಿಕರು ಮುಂದಾಗಬೇಕಿದೆ ಎಂದು ತಿಳಿಸಿದರು.
ನಿಪಾ ವೈರಸ್ ಸಂಬಂಧಿಸಿದಂತೆ ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಕರಪತ್ರ, ಭಿತ್ತಿಪತ್ರ ಮುದ್ರಣ ಮಾಡಿ ಮಾಹಿತಿ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ತರಕಾರಿ ಮತ್ತು ಮಾಂಸವನ್ನು ಚೆನ್ನಾಗಿ ತೊಳೆದು, ಬೇಯಿಸಿ ಉಪಯೋಗಿಸಬೇಕು. ಹಾಗೆಯೇ ಹಣ್ಣುಗಳನ್ನು ತೊಳೆದು ಉಪಯೋಗಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಅವರು ಬಾವಲಿಗಳಿಂದ ಪ್ರಾಣಿಗಳಿಗೆ, ಪ್ರಾಣಿಗಳಿಂದ ಪ್ರಾಣಿಗಳಿಗೆ ಹಾಗೂ ಬಾವಲಿಗಳಿಂದ ಮನುಷ್ಯನಿಗೆ ಹರಡುತ್ತದೆ. ಸೊಂಕಿತ ಬಾವಲಿ ಮತ್ತು ಪ್ರಾಣಿಗಳಿಂದ ಸ್ರವಿಸುವ ದ್ರವಗಳ ನೇರ ಸಂಪರ್ಕ ಹೊಂದುವದರಿಂದ ಹರಡುತ್ತದೆ. ಸೊಂಕಿತ ಬಾವಲಿ ಮತ್ತು ಪ್ರಾಣಿಗಳ ಸೊಂಕಿತ ಪದಾರ್ಥಗಳನ್ನು ಉಪಯೋಗಿಸುವದರಿಂದ ಹರಡುತ್ತದೆ ಎಂದು ಮಾಹಿತಿ ನೀಡಿದರು. ನದಿ ಪಾತ್ರದಲ್ಲಿ ನೀರು ಉಪಯೋಗಿಸುವಾಗ ಮುನ್ನೆಚ್ಚರಿಕೆ ವಹಿಸಬೇಕಿದೆ. ನೀರನ್ನು ಕುದಿಸಿ ಬಳಸಬೇಕಿದೆ ಎಂದರು.
ಸೋಂಕಿತ ವ್ಯಕ್ತಿಯ ಗಂಟಲಿನ ಮತ್ತು ಮೂಗಿನ ದ್ರವಗಳ ಮಾದರಿಯನ್ನು ಪಡೆದು, ಪ್ರಯೋಗಾಲಯದಲ್ಲಿ ಪರೀಕ್ಷಿಸಿ ದೃಢಪಡಿಸಬಹುದು. ಅಲ್ಲದೆ ಸೊಂಕಿತ ವ್ಯಕ್ತಿಯ ನರ ಮಂಡಲದ ದ್ರವ, ಮೂತ್ರ ಮತ್ತು ರಕ್ತ ಪರೀಕ್ಷೆಯ ಮೂಲಕ ಖಚಿತಪಡಿಸಿಕೊಳ್ಳಬಹುದು. ಪ್ರಸ್ತುತ ಈ ಪರೀಕ್ಷೆ ರಾಷ್ಟ್ರೀಯ ವೈರಾಣು ಸಂಸ್ಥೆ ಪುಣೆ ಇಲ್ಲಿ ನಡೆಸಲಾಗುವದು ಎಂದರು.
ಮುಂಜಾಗ್ರತಾ ಕ್ರಮಗಳು
ಯಾವದೇ ರೀತಿಯ ಜ್ವರ ಕಂಡುಬಂದಲ್ಲಿ ಉದಾಸೀನ ಮಾಡದೇ ಹಾಗೂ ನಿಪಾ ವೈರಸ್ ಲಕ್ಷಣಗಳಿರುವ ಜ್ವರಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವದು ಅಗತ್ಯ ಎಂದರು.
ರೋಗಿಗಳ ಜೊತೆ ಕಾರ್ಯನಿರ್ವಹಿಸುವ ಸಿಬ್ಬಂದಿ ಮಾಸ್ಕ್, ಕೈಕವಚ ಧರಿಸುವದು ಮುಂತಾದ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಗಮನ ಕೊಡುವದು. ಯಾವದೇ ಪ್ರಾಣಿ ಪಕ್ಷಿಗಳು ಕಚ್ಚಿದ ಹಾಗೂ ಮಳೆಗಾಳಿಯಿಂದ ಬಿದ್ದಿರುವ ಹಣ್ಣುಗಳನ್ನು ಸೇವಿಸಬಾರದು. ಬೀದಿ ಬದಿಗಳಲ್ಲಿ ಕತ್ತರಿಸಿ ಮಾರುವ ಹಣ್ಣು ಹಂಪಲಗಳನ್ನು ಸೇವಿಸಬಾರದು ಎಂದರು.
ನೀರಾ ಇಳಿಸುವವರು ವೈಯಕ್ತಿಕ ಸ್ವಚ್ಛತೆ ಕಾಪಾಡುವದು ಹಾಗೂ ಸರಿಯಾಗಿ ಕೈ ಕಾಲುಗಳನ್ನು ಸೋಪಿನಿಂದ ತೊಳೆಯುವದು. ಶುಚಿಗೊಳಿಸದ ಕೈಗಳಿಂದ ಕಣ್ಣು ಮತ್ತು ಮೂಗುಗಳನ್ನು ಉಜ್ಜಬಾರದು. ಕಚ್ಚಾ ಖರ್ಜೂರಗಳನ್ನು ಸೇವಿಸದಿರುವದು. ಸಂಸ್ಕರಿಸಿಲ್ಲದೇ ಯಾವದೇ ‘ಡ್ರೈ ಪ್ರೂಟ್’ಗಳನ್ನು ಉಪಯೋಗಿಸದಿರುವದು. ಸಂಸ್ಕರಿಸಿಲ್ಲದ ತಂಪು ಪಾನಿಯಾ (ಜ್ಯೂಸ್) ಉಪಯೋಗಿಸದಿರುವದು. ಹಂದಿ ಸಾಕಾಣಿಕಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಯಾವದೇ ರೀತಿಯ ಗಾಯ ಅಥವಾ ಸೊಂಕಿಗೆ ಒಳಗಾಗಿದ್ದಲ್ಲಿ ಸೂಕ್ತ ಚಿಕಿತ್ಸೆಗೆ ಒಳಪಡುವದು. ಸೋಂಕಿತ ಮತ್ತು ಕಾಯಿಲೆಯ ಹಂದಿಗಳನ್ನು ನೇರ ಸಂಪರ್ಕಿಸದಿರುವದು. ಬಾವಲಿಗಳ ಹೆಚ್ಚಿರುವ ಪ್ರದೇಶಗಳಲ್ಲಿ ಸಂಗ್ರಹಣೆ ಮಾಡುವ ಶೇಂದಿ ಮತ್ತು ಪಾನೀಯಗಳನ್ನು ಸೇವಿಸದಿರುವದು. ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ತೆರೆದ ಬಾವಿಯ ನೀರನ್ನು ಶುದ್ದೀಕರಿಸಿ ಸೇವಿಸುವದು ಹಾಗೂ ಬಾವಿಗಳನ್ನು ಬಲೆಗಳಿಂದ ಮುಚ್ಚಿ ಬಾವಲಿಗಳು ಒಳ ಪ್ರವೇಶಿಸದಂತೆ ನೋಡಿಕೊಳ್ಳುವಂತೆ ಡಾ.ರಾಜೇಶ್ ಕೋರಿದರು.
ನೆರೆರಾಜ್ಯ ಕೇರಳಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ತೀವ್ರಾ ನಿಗಾವಣೆ ಮತ್ತು ಸಕ್ರಿಯ ಸರ್ವಲೆನ್ಸ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈಗಾಗಲೇ ತಿಳಿಸಲಾಗಿದೆ. ವೈರಸ್ ಜ್ವರವು ನೇರ ಸಂಪರ್ಕದಿಂದ ಹರಡುವದರಿಂದ ಸೋಂಕಿತ ವ್ಯಕ್ತಿ ಮತ್ತು ಪ್ರಾಣಿಗಳಿಂದ (ನಾಯಿ, ಬೆಕ್ಕು, ಮೇಕೆ, ಕುದುರೆ ಮತ್ತು ಕೆಲವು ಸಂದರ್ಭದಲ್ಲಿ ಕುರಿಗಳು) ದೂರವಿರುವದು ಸೂಕ್ತವಾಗಿದೆ. ಹೆಚ್ಚಿನ ಮಾಹಿತಿಗೆ ಆರೋಗ್ಯ ಸಹಾಯವಾಣಿ 104 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಜಗದೀಶ್ ಮಾತನಾಡಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.