ಆಲೂರುಸಿದ್ದಾಪುರ/ಒಡೆಯನಪುರ, ಮೇ 23: ಆರೋಗ್ಯ ಇಲಾಖೆಗೆ ಸೇರಿದ ಜೀಪು ಮತ್ತು ಎದುರಿಗೆ ಬರುತ್ತಿದ್ದ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ತಾಲೂಕು ಆರೋಗ್ಯ ಅಧಿಕಾರಿ ಮತ್ತು ಜೀಪಿನಲ್ಲಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ ಬುಧವಾರ ಮಧ್ಯಾಹ್ನ ಗೋಪಾಲಪುರದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೂಕು ಆರೋಗ್ಯ ಅಧಿಕಾರಿ ಡಾ.ರವಿಕುಮಾರ್ ಮತ್ತು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ದಮಯಂತಿ ಅವರು ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿನೀಡಿ ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿನೀಡಲು ಆರೋಗ್ಯ ಇಲಾಖೆಗೆ ಸೇರಿದ ಜೀಪಿನಲ್ಲಿ ಸಂಚರಿಸುತ್ತಿದ್ದ ವೇಳೆಯಲ್ಲಿ ಗೋಪಾಲಪುರ- ಹಿತ್ತಲಕೇರಿ ಜಂಕ್ಷನ್‍ನಲ್ಲಿ ಗೋಣಿಮರೂರು ಸಮೀಪದ ಎರಪಾರೆ ಗ್ರಾಮದ ವ್ಯಕ್ತಿಗೆ ಸೇರಿದ ಇಂಡಿಕಾ ಕಾರೊಂದು ವೇಗವಾಗಿ ಎದುರಿಗೆ ಬಂದು ಜೀಪಿಗೆ ಡಿಕ್ಕಿ ಹೊಡೆದಿದೆ. ಜೀಪು ಪಲ್ಟಿಯಾಗಿದೆ, ಜೀಪಿನಲ್ಲಿದ್ದ ಆರೋಗ್ಯ ಅಧಿಕಾರಿ ರವಿಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಆರೋಗ್ಯ ಶಿಕ್ಷಣಾಧಿಕಾರಿ ದಮಯಂತಿ ಅವರ ಕಾಲು, ಕೈ ಮತ್ತು ತಲೆ ಭಾಗಕ್ಕೆ ಸಣ್ಣಪುಟ್ಟ ಗಾಯವಾಗಿದ್ದು ಅವರನ್ನು ಸೋಮವಾರಪೇಟೆ ಆಸ್ಪತ್ರೆಗೆ ಸಾಗಿಸಲಾಯಿತು. ಜೀಪು ಚಾಲಕ ಚಂದ್ರಯ್ಯ ಹಾಗೂ ಜೀಪಿನಲ್ಲಿದ್ದ ಆಶಾ ಕಾರ್ಯಕರ್ತೆಗೂ ಸಣ್ಣಪುಟ್ಟ ಗಾಯವಾಗಿದೆ. ಸ್ಥಳಕ್ಕೆ ಶನಿವಾರಸಂತೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.