ಒಡೆಯನಪುರ, ಮೇ 23: ಗ್ರಾಮೀಣ ಅಂಚೆ ನೌಕರರಿಗೆ ಕಮಲೇಶ್ ಚಂದ್ರ ವರದಿಯನ್ನು ಕೇಂದ್ರ ಸರಕಾರ ಜಾರಿಗೊಳಿಸುವಂತೆ ಒತ್ತಾಯಿಸಿ ಬುಧವಾರ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರು ಶನಿವಾರಸಂತೆ ಅಂಚೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಗ್ರಾಮೀಣ ಅಂಚೆ ನೌಕರರ ಸಮಸ್ಯೆಗಳ ಕುರಿತಾಗಿ ಕಮಲೇಶ್‍ಚಂದ್ರ ಅವರು ರೂಪಿಸಿರುವ ವರದಿಯನ್ನು ಕೇಂದ್ರ ಸರಕಾರ ಅನುಷ್ಠಾನಗೊಳಿಸದಿರುವ ಹಿನ್ನಲೆಯಲ್ಲಿ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮೀಣ ಅಂಚೆ ನೌಕರರು ಶನಿವಾರಸಂತೆ ಅಂಚೆ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಠಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ನಿಡ್ತ ಗ್ರಾಮೀಣ ಅಂಚೆ ನೌಕರ ಕೆ.ಎನ್. ನಾಗೇಶ್ ಕೇಂದ್ರ ಸರಕಾರ ಗ್ರಾಮೀಣ ಭಾಗದ ಅಂಚೆ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಗ್ರಾಮೀಣ ನೌಕರರ ಸೇವೆಯನ್ನು ಖಾಯಂಗೊಳಿಸಲು ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮೀಣ ಅಂಚೆ ನೌಕರರಾದ ನಂದಿಗುಂದದ ಪುಟ್ಟಸ್ವಾಮಿ, ಮೂದರವಳ್ಳಿಯ ತಮ್ಮೇಗೌಡ, ಆಲೂರುಸಿದ್ದಾಪುರದ ಶಿವಣ್ಣ, ಗೋಪಾಲಪುರದ ಹೇಮಂತ್ ಮುಂತಾದವರು ಭಾಗವಹಿಸಿದ್ದರು.