ಮಡಿಕೇರಿ, ಮೇ 23: ಕೊಡವ ಸಂಸ್ಕøತಿಯ ಮೂಲಬೇರು ಹಾಗೂ ಆಚಾರ- ವಿಚಾರಗಳಲ್ಲಿ ‘ಐನ್‍ಮನೆ’ ಗಳಿಗೆ ವಿಶೇಷವಾದ ಮಹತ್ವವಿದೆ. ಆದರೆ, ಪ್ರಸ್ತುತದ ದಿನಗಳಲ್ಲಿ ಐನ್‍ಮನೆ ಸಂಸ್ಕøತಿಯ ಹೆಗ್ಗುರುತು ಮರೆಯಾಗುತ್ತಿದೆ. ಅಲ್ಲದೆ ಯುವ ಜನಾಂಗದಲ್ಲಿ ಇದಕ್ಕೆ ಇರುವ ಉನ್ನತ ಸ್ಥಾನದ ಕುರಿತು ಅಗತ್ಯ ಮಾಹಿತಿ- ಅರಿವು ಕ್ಷೀಣಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಇದರ ಮಹತ್ವವನ್ನು ಪರಿಚಯಿಸುವ ನಿಟ್ಟಿನಲ್ಲಿ ಮಡಿಕೇರಿಯ ತಿರಿಬೊಳ್‍ಚ ಸಂಘಟನೆ ಹೊಸತೊಂದು ಜನಜಾಗೃತಿ ಕಾರ್ಯಕ್ರಮಕ್ಕೆ ಮುಂದಾಗಿದೆ. ಇದರಂತೆ ತಿರಿಬೊಳ್‍ಚ ಸಂಘಟನೆ ಐನ್‍ಮನೆ ಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸುವ ಯೋಜನೆ ಹಮ್ಮಿಕೊಂಡಿದ್ದು, ಪ್ರಥಮ ಕಾರ್ಯಕ್ರಮ ನಿನ್ನೆ ಅರೆಕಾಡು ಗ್ರಾಮದ ಕುಕ್ಕೆರ ಐನ್‍ಮನೆಯಲ್ಲಿ ನಡೆಯಿತು. ಈ ಕಾರ್ಯಕ್ರಮದ ಮೂಲಕ ಕೊಡವ ಐನ್‍ಮನೆಗಳನ್ನು ಹೆರಿಟೇಜ್ ಸೆಂಟರ್ ಆಗಿ ಮಾಡಬೇಕೆಂಬ ಆಗ್ರಹಪೂರ್ವಕ ನಿರ್ಣಯವನ್ನು ಕೈಗೊಳ್ಳಲಾಯಿತು. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ತಿರಿಬೊಳ್‍ಚ ಸಂಘಟನೆಯ ಪದಾಧಿಕಾರಿಗಳನ್ನು ಕುಕ್ಕೆರ ಕುಟುಂಬದ ಸದಸ್ಯರು ಕುಕ್ಕೆರ ಐನ್‍ಮನೆಯ ಓಣಿ (ದಾರಿ)ಯಲ್ಲಿ ತಳಿಯ ತಕ್ಕಿಬೊಳಕ್‍ನೊಂದಿಗೆ ಸ್ವಾಗತಿಸಿದರು. ಬಳಿಕ ಐನ್‍ಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿ ಸೇರಿ ಸಂಘದ ವತಿಯಿಂದ ಐನ್‍ಮನೆಗೆ ಕಾಣಿಕೆ ರೂಪದಲ್ಲಿ ನೀಡಲಾದ ನೂತನ ತಿರಿಬೊಳ್‍ಚವನ್ನು ಶಾಸ್ತ್ರೋಕ್ತವಾಗಿ ಬೆಳಗಿ ಕುಟುಂಬದ ಪಟ್ಟೆದಾರರು ‘ತಪ್ಪಡ್‍ಕ’ ಕಟ್ಟಿದರು.

ಬಳಿಕ ಸಂಘದ ಅಧ್ಯಕ್ಷ ಉಳ್ಳಿಯಡ ಡಾಟಿಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಕುಕ್ಕೆರ ಪಟ್ಟೆದಾರರಾದ ಕೆ.ಎ. ಚಂಗಪ್ಪ, ಕುಂಞಪ್ಪ, ಕುಟುಂಬದ ಕಾರ್ಯಾಧ್ಯಕ್ಷರಾದ ಕೆ.ಎ. ಉತ್ತಪ್ಪ ಅವರು ಪಾಲ್ಗೊಂಡಿದ್ದರು. ಸಭೆಯನ್ನು ಉದ್ದೇಶಿಸಿ ಕುಕ್ಕೆರ ಚಂಗಪ್ಪ, ಸುಬ್ಬಯ್ಯ, ಕಮಾಂಡರ್ ಉತ್ತಪ್ಪ, ಊರು ತಕ್ಕರಾದ ತೊಂಡ್ಯಂಡ ನಾಣಯ್ಯ ಅನ್ನಾರ್‍ಕಂಡ ಸೋಮಯ್ಯ, ಕುಕ್ಕೆರ ಅಶೋಕ್ ಅಯ್ಯಪ್ಪ, ಬೊಳಿಯಾಡಿರ ಕಾವೇರಪ್ಪ ಅವರುಗಳು ಮಾತನಾಡಿದರು.

ಮಡಿಕೇರಿಯ ಸರಕಾರಿ ಜೂನಿಯರ್ ಕಾಲೇಜಿನ ಉಪನ್ಯಾಸಕಿ ಚೋಕೀರ ಅನಿತ ದೇವಯ್ಯ ಅವರು ಕೊಡವ ಐನ್‍ಮನೆಯ ಹಾಗೂ ಅದರ ಮಹತ್ವದ ಕುರಿತು ವಿಚಾರ ಮಂಡಿಸಿದರು. ಬಳಿಕ ಈ ಕುರಿತು ಸಂವಾದ ನಡೆಯಿತು. ಇದರೊಂದಿಗೆ ಕೊಡವ ಭಾಷೆಯಲ್ಲಿ ಓದುವ ಸ್ಪರ್ಧೆ, ಆಶುಭಾಷಣ, ಮತ್ತಿತರ ಸ್ಪರ್ಧೆಗಳನ್ನು ನಡೆಸಲಾಯಿತು.

ಕೊಡವ ಜನಾಂಗದ ಎಲ್ಲಾ ವಿಧದ ಏಳಿಗೆಗೆ ಮೂಲಾಧಾರ ವಾಗಿರುವ ಐನ್‍ಮನೆ ಸಂಸ್ಕøತಿಯನ್ನು ಮೂಲೆಗುಂಪು ಮಾಡುವದು ಭವಿಷ್ಯದ ದೃಷ್ಟಿಯಲ್ಲಿ ಒಳ್ಳೆಯದಲ್ಲ. ಹೀಗಿರುವಲ್ಲಿ ಐನ್‍ಮನೆ ಮತ್ತು ಐನ್‍ಮನೆ ಸಂಸ್ಕøತಿಯನ್ನು ಪುನರುದ್ಧಾರಗೊಳಿಸಲು ಶೀಘ್ರವೇ ಸೂಕ್ತ ಕ್ರಿಯಾಯೋಜನೆ ರೂಪಿಸ ಬೇಕು. ಈ ನಿಟ್ಟಿನಲ್ಲಿ ಪರಿಣಾಮಕಾರಿ ಜನ ಜಾಗೃತಿಯನ್ನು ಮತ್ತಷ್ಟು ತೀವ್ರಗೊಳಿಸಬೇಕು. ನಶಿಸುತ್ತಿರುವ ಪುರಾತನ ಮೌಲ್ಯಾಧಾರಿತ ಸ್ಮಾರಕ ಕೇಂದ್ರಗಳನ್ನು ಸರ್ಕಾರ, ಸರ್ಕಾರೇತರ ಸಂಸ್ಥೆ, ಯುನೆಸ್ಕೋದಂತಹ ಸಂಸ್ಥೆಗಳು ಅವನ್ನು ‘ಹೆರಿಟೇಜ್ ಸೆಂಟರ್’ ಎಂದು ಗುರುತಿಸಿ, ಮಾನ್ಯ ಮಾಡಿ, ಪುನರುದ್ಧಾರ ಮಾಡುವ ಯೋಜನೆಯಂತೆ ಕೊಡವ ಐನ್‍ಮನೆಗಳನ್ನು ‘ಹೆರಿಟೇಜ್ ಸೆಂಟರ್’ಗಳನ್ನಾಗಿ ಪರಿಗಣಿಸಲು ಸಂಬಂಧಿಸಿದವರು ಗಮನ ಹರಿಸಬೇಕು. ಈ ವಿಷಯದಲ್ಲಿ ‘ತಿರಿಬೊಳ್‍ಚ ಕೊಡವ ಸಂಘ’ದ ವಿಶೇಷ ಕಾರ್ಯಯೋಜನೆಗೆ ಇತರೆ ಸಂಘ- ಸಂಸ್ಥೆ, ಸಮಾಜಗಳು ಸಕ್ರಿಯವಾಗಿ ಕೈ ಜೋಡಿಸುವಂತಾಗಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಗೊಂಡಿತು.

ಸಂಘದ ಸಲಹೆಗಾರರಾದ ಉಳ್ಳಿಯಡ ಎಂ. ಪೂವಯ್ಯ ಅವರು ಸಮಾರೋಪ ಭಾಷಣ ಮಾಡಿದರು. ಮತ್ತೊಬ್ಬ ಸಲಹೆಗಾರರಾದ ಕಾಳೇಂಗಡ ಮುತ್ತಪ್ಪ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು. ಸಂಘದ ಸಂಚಾಲಕ ಚೆಯ್ಯಂಡ ಸತ್ಯ ಗಣಪತಿ ಅವರು ಕಾರ್ಯಕ್ರಮ ನಿರೂಪಿಸಿದರು. ಬೊಟ್ಟೋಳಂಡ ದಿವ್ಯ ದೇವಯ್ಯ ಪ್ರಾರ್ಥಿಸಿ, ಕುಕ್ಕೆರ ಜಯಾ ಚಿಣ್ಣಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಕಾಳೇಂಗಡ ಸಾವಿತ್ರಿ ಮುತ್ತಪ್ಪ ಅತಿಥಿ ಪರಿಚಯ ಮಾಡಿದರು. ತೆನ್ನೀರ ರಾಧ ಪೊನ್ನಪ್ಪ ವಂದಿಸಿದರು.