ವೀರಾಜಪೇಟೆ, ಮೇ 24: ವೀರಾಜಪೇಟೆ ಬಳಿಯ ಹಾತೂರು ಗ್ರಾಮದ ಕೆ. ಜೋಯಪ್ಪ ಎಂಬವರ ಮಗ ಕೆ.ಜೆ. ಭರತ್ (30) ಎಂಬಾತನನ್ನು ಬಿಟ್ಟಂಗಾಲದಲ್ಲಿ ಕೊಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ಎರಡನೇ ಅಪರ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ್ ಪ್ರಭು ಅವರು ಆರೋಪಿ ಹೊದವಾಡ ಗ್ರಾಮದ ಎ.ಎನ್. ಅಶೋಕ್ ದೋಷಮುಕ್ತನೆಂದು ತೀರ್ಪು ನೀಡಿ ಆರೋಪದಿಂದ ಬಿಡುಗಡೆಗೊಳಿಸಿದ್ದಾರೆ.
ತಾ: 9.5.2015 ರಂದು ಬಿಟ್ಟಂಗಾಲದ ಬಾಳುಗೋಡಿನಲ್ಲಿರುವ ಹೆಗ್ಗಡೆ ಸಮಾಜ ಬಳಿಯ ಚರಂಡಿಯಲ್ಲಿ ಹಾತೂರು ಗ್ರಾಮದ ಭರತ್ ಎಂಬಾತನ ಮೃತದೇಹ ಕೊಲೆ ಮಾಡಲಾದ ಸ್ಥಿತಿಯಲ್ಲಿ ದೊರೆತಿತ್ತು. ವೀರಾಜಪೇಟೆ ಗ್ರಾಮಾಂತರ ಪೊಲೀಸರು ಮೊದಲು ಮೃತದೇಹವನ್ನು ಅಸ್ವಾಭಾವಿಕ ಸಾವು ಎಂದು ತೀರ್ಮಾನಿಸಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಒಂದು ವರ್ಷದ ಬಳಿಕ ಪೊಲೀಸರ ತನಿಖೆಯಂತೆ ಮೃತ ಭರತ್ ಮದುವೆಯಾಗಬೇಕಾಗಿದ್ದ ಬೆಟ್ಟಗೇರಿ ಗ್ರಾಮದ ಸ್ವಾತಿ ಎಂಬ ವಧುವನ್ನು ಹೊದವಾಡ ಗ್ರಾಮದ ಅಶೋಕ್ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದು, ಭರತ್ ನಿಶ್ಚಯಿಸಿದ್ದ ವಧು ಸ್ವಾತಿಯ ವ್ಯಾಮೋಹದ ಮೇರೆಗೆ, ಸಮಯ ಸಾಧಿಸಿ ಹೆಗ್ಗಡೆ ಸಮಾಜಕ್ಕೆ ಮದುವೆಗೆ ಬಂದಿದ್ದ ಭರತ್ನಿಗೆ ತಂಪು ಪಾನೀಯದಲ್ಲಿ ಸೈನೆಡ್ ದ್ರಾವಣ ಮಿಶ್ರ ಮಾಡಿ ಅಶೋಕ್ ಕುಡಿಸಿದ್ದರಿಂದ ಭರತ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಾ. 13.5.2016 ರಂದು ಹೊದವಾಡ ಗ್ರಾಮದ ನಿವಾಸಿ ಹಾಗೂ ಬೆಟ್ಟಗೇರಿ ಗ್ರಾಮ ಪಂಚಾಯಿತಿ ಕಚೇರಿ ಗುಮಾಸ್ತ ಎ.ಎನ್. ಅಶೋಕ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವೀರಾಜಪೇಟೆ ಗ್ರಾಮಾಂತರ ಪೊಲೀಸರ ತನಿಖೆಯ ಪ್ರಕಾರ ಭರತ್ 2015ರ ಮೇ ಕೊನೆ ವಾರದಲ್ಲಿ ಮದುವೆ ನಿಶ್ಚಯವಾಗಿತ್ತು.
ಚರಂಡಿಯಲ್ಲಿ ದೊರೆತ ಭರತ್ನ ಮೃತದೇಹ ಪ್ರಕರಣ ಜಿಲ್ಲೆಯ ಜನತೆಯ ಕುತೂಹಲವನ್ನು ಕೆರಳಿಸಿತ್ತು. ಕೊಲೆ ಪ್ರಕರಣದಲ್ಲಿ ನ್ಯಾಯಾಧೀಶರು 32 ಸಾಕ್ಷಿದಾರರನ್ನು ವಿಚಾರಣೆ ನಡೆಸಿದರು. ಸಾಕ್ಷಿಗಳಿಂದ ಆರೋಪ ಸಾಬೀತಾಗದ್ದರಿಂದ ನ್ಯಾಯಾಧೀಶರು ಆರೋಪಿಯನ್ನು ಬಿಡುಗಡೆಗೊಳಿಸಿದ್ದಾರೆ. ಆರೋಪಿ ಪರ ವಕೀಲ ಎನ್.ಎಸ್. ಪ್ರಶಾಂತ್ ವಾದಿಸಿದರು. ಸರಕಾರದ ಪರವಾಗಿ ಅಭಿಯೋಜಕರಾದ ನಾರಾಯಣ ವಾದ ಮಂಡಿಸಿದರು.