ಗೋಣಿಕೊಪ್ಪ ವರದಿ, ಮೇ 24: ಮೊದಲ ಬಾರಿಗೆ ಆಚರಿಸುತ್ತಿರುವ ಬಲಿಜ ಕ್ರೀಡಾಕೂಟಕ್ಕೆ ಸರ್ಕಾರದಿಂದ ಅನುದಾನದ ಬೇಡಿಕೆ ನೀಡಲಾಗಿದೆ ಎಂದು ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ತಿಳಿಸಿದ್ದಾರೆ.

ಮೊದಲ ಬಾರಿಗೆ ಬಲಿಜ ಕ್ರೀಡಾಕೂಟ ಆಚರಿಸುತ್ತಿದ್ದು, ಈ ಹಿಂದೆ ಉಸ್ತುವಾರಿ ಸಚಿವ ಸೀತಾರಾಂ ಅವರ ಮುಖಾಂತರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೂ. 5 ಲಕ್ಷ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಅನುದಾನ ದೊರೆಯುವ ಸಾಧ್ಯತೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಬಲಿಜ ಗಣತಿ ನಡೆಸಲಾಗುತ್ತಿದೆ. ಆ ಮೂಲಕ ಕೊಡಗಿನ ಮತಪಟ್ಟಿಯಲ್ಲಿ ವಿಶೇಷವಾಗಿ ಇತರ ಕಲಂನಲ್ಲಿ ನಮೂದಿಸಲ್ಪಡುತ್ತಿರುವ ಬಲಿಜರನ್ನು ಪ್ರತ್ಯೇಕ ಹೆಸರಿನಲ್ಲಿ ಸೂಚಿಸಲು ಅವಕಾಶಕ್ಕೆ ಅನುವು ಮಾಡಿಕೊಡಲಾಗುವದು. ಜಿಲ್ಲಾಡಳಿತಕ್ಕೆ ಬಲಿಜರ ಜನಸಂಖ್ಯೆಯನ್ನು ದಾಖಲೆ ಮೂಲಕ ತಿಳಿಸುವ ಪ್ರಯತ್ನ ಸಾಗುತ್ತಿದೆ ಎಂದರು.

ವೀರಾಜಪೇಟೆ ತಾಲೂಕು ಬಲಿಜ ಸಮಾಜ ಅಧ್ಯಕ್ಷ ಗಣೇಶ್ ನಾಯ್ಡು, ಬಲಿಜ ಗಣತಿ ಹಾಗೂ ಕ್ರೀಡಾಕೂಟಕ್ಕೆ ಸ್ಪಂದಿಸುತ್ತಿಲ್ಲ. ಅಸಹಕಾರ ಧೋರಣೆ ಮಾಡುತ್ತಿದ್ದಾರೆ. ಇದರಿಂದಾಗಿ ಅವರ ಸ್ಥಾನಕ್ಕೆ ಹಂಗಾಮಿ ಅಧ್ಯಕ್ಷರಾಗಿ ಯತಿರಾಜು ನಾಯ್ಡು ಅವರನ್ನು ನೇಮಕ ಮಾಡಲಾಗಿದೆ. ಕ್ರೀಡಾಕೂಟದ ನಂತರ ತುರ್ತು ಸಭೆ ಕರೆದು ಆಯ್ಕೆ ಪ್ರಕ್ರಿಯೆ ನಡೆಸಲಾಗುವದು ಎಂದರು.

ತಾಲೂಕು ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ನಾಯ್ಡು ಮಾತನಾಡಿ, ಕ್ರೀಡಾಕೂಟ ನಡೆಸಲು ಮೊದಲ ಪ್ರಯತ್ನಕ್ಕೆ ಜನಾಂಗದಿಂದ ಹೆಚ್ಚು ಬೆಂಬಲ ವ್ಯಕ್ತವಾಗಿದೆ. ಒಗ್ಗಟ್ಟು ಪ್ರದರ್ಶಿಸುವ ಮೂಲಕ ಮಾದರಿಯಾಗಲಿದ್ದೇವೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಎಸ್. ಕೆ. ಯತಿರಾಜು ನಾಯ್ಡು ಉಪಸ್ಥಿತರಿದ್ದರು.