ಪೊನ್ನಂಪೇಟೆ, ಮೇ 22 : ಇದೀಗ ಮೇ ತಿಂಗಳಿನಲ್ಲಿ ಜಿಲ್ಲಾದ್ಯಂತ ಕುಡಿಯುವ ನೀರಿಗಾಗಿ ಸವiಸ್ಯೆ ಎದುರಾಗತೊಡಗಿದೆ. ಅದರಲ್ಲೂ ವೀರಾಜಪೇಟೆ ತಾಲೂಕಿನ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಆದ್ದರಿಂದ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿರುವ ಬಾಳೆಲೆ ಕ್ಷೇತ್ರದ ಜಿ.ಪಂ. ಸದಸ್ಯ ಬಿ.ಎನ್.ಪ್ರಥ್ಯು ಅವರು, ಕೂಡಲೆ ಈ ಕುರಿತು ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿ.ಇ.ಓ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳ ವಿಶೇಷ ತುರ್ತು ಸಭೆ ನಡೆಸಿ ಪರಿಹಾರ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಸಿಗೆಯಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ವೇಳೆ ಅಧಿಕಾರಿಗಳು ಕಳೆದ ಚುನಾವಣೆಯ ಕಾರ್ಯಚಟುವಟಿಕೆಗಳ ನೆಪ ಹೇಳಿ ಜವಾಬ್ದಾರಿಯಿಂದ ನುಣುಚಿಕೊಂಡಿದ್ದರು. ಚುನಾವಣೆಯ ಯಾವದೇ ಕೆಲಸಗಳಿದ್ದರೂ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಮೊದಲ ಆದ್ಯತೆ ನೀಡಬೇಕು ಎಂಬ ಸರಕಾರದ ಆದೇಶವನ್ನು ಅಧಿಕಾರಿಗಳು ಪಾಲಿಸಿಲ್ಲ. ಕುಡಿಯುವ ನೀರಿನ ಯಾವದೇ ಕಾಮಗಾರಿಗೆ ಚುನಾವಣೆಯ ನೀತಿ ಸಂಹಿತೆ ಅಡ್ಡಿಯಾಗುವದಿಲ್ಲ ಎಂಬ ಕಾನೂನಿದ್ದರೂ ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿ.ಇ.ಓ ಅವರು ಸರಿಯಾಗಿ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ವಿಫಲರಾದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಸಿದ್ದಾರೆ.

ಬಾಳೆಲೆ ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಕಾನೂರು, ನಾಲ್ಕೇರಿ ಭಾಗಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಿದೆ. ಅಲ್ಲದೆ ದ. ಕೊಡಗಿನ ಬಹುತೇಕ ಗಿರಿಜನ ಹಾಡಿಗಳಲ್ಲಿ ಜನರಿಗೆ ಕುಡಿಯುವ ನೀರಿಲ್ಲ. ಕಾನೂರು ಸಮೀಪದ ಮಲ್ಲಂಗೆರೆ ಗಿರಿಜನ ಹಾಡಿಯಲ್ಲಿ ಕುಡಿಯುವ ನೀರಿಗೆ ತೀವ್ರ ಕೊರತೆಯಿದ್ದರೂ ಇದುವರೆಗೂ ಅಲ್ಲಿಗೆ ಐ.ಟಿ.ಡಿ.ಪಿ. ಅಧಿಕಾರಿಗಳಾಗಲಿ, ಕಾನೂರು ಗ್ರಾ.ಪಂ. ಪಿ.ಡಿ.ಓ ಅವರಾಗಲಿ ಭೇಟಿ ನೀಡಿ ಪರಿಶೀಲಿಸಿಲ್ಲ. ಅಲ್ಲದೆ ನೀರಿಲ್ಲದ ಸಾರ್ವಜನಿಕ ಬಾವಿಗಳಿಗೆ ಗ್ರಾ.ಪಂ. ವತಿಯಿಂದ ಬುಶ್ ಹಾಕಿಸಲು ಅಗತ್ಯ ಕ್ರಮ ಕೈಗೊಂಡಿದ್ದರೆ ಕುಡಿಯುವ ನೀರಿನ ಅಭಾವ ಹೆಚ್ಚುತ್ತಿರಲಿಲ್ಲ ಎಂದು ದೂರಿರುವ ಜಿ.ಪಂ. ಸದಸ್ಯ ಬಿ.ಎನ್.ಪ್ರಥ್ಯು ಅವರು, ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯೇ ನೀರಿನ ಸಮಸ್ಯೆ ಬಗೆಹರಿಯದಿರಲು ಪ್ರಮುಖ ಕಾರಣ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕೆಂದು ತಾನು ಕಳೆದ 2 ವರ್ಷಗಳಿಂದ ಜಿ.ಪಂ. ಸಭೆಗಳಲ್ಲಿ ನಿರಂತರವಾಗಿ ಪ್ರಸ್ತಾಪಿಸುತ್ತಾ ಬಂದರೂ ಇದುವರೆಗೂ ಯಾವದೇ ಪ್ರಯೋಜನವಾಗಲಿಲ್ಲ ಎಂದು ಹೇಳಿದರು.