ಮಡಿಕೇರಿ, ಮೇ 22: ಇಲ್ಲಿನ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಕೊಡವ ಕುಟುಂಬಗಳ ಮಧ್ಯೆ ನಡೆಯುತ್ತಿರುವ ಮಡ್ಲಂಡ ಕ್ರಿಕೆಟ್ ಕಪ್ ಪಂದ್ಯಾವಳಿ ಯಲ್ಲಿ ಆತಿಥೇಯ ಮಡ್ಲಂಡ ತಂಡ ಪ್ರಿಕ್ವಾರ್ಟರ್ ಹಂತದಲ್ಲಿ ಪಂದ್ಯಾವಳಿ ಯಿಂದ ಹೊರ ಬಿದ್ದಿದೆ.

ಇಂದು ನಡೆದ ಪಂದ್ಯಾವಳಿಯಲ್ಲಿ ಟಾಸ್‍ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಡ್ಲಂಡ ತಂಡ 8 ಓವರ್‍ನಲ್ಲಿ 8 ವಿಕೆಟ್‍ಗಳನ್ನು ಕಳೆದುಕೊಂಡು 27 ರನ್ ಮಾತ್ರ ಗಳಿಸಲು ಶಕ್ತವಾಯಿತು. ತಂಡದ ಏಕೈಕ ಭರವಸೆಯ ಆಟಗಾರ ದರ್ಶನ್ ಆರಂಭದಲ್ಲೇ ಇಲ್ಲದ ರನ್ ಕಸಿಯಲು ಹೋಗಿ ರನ್‍ಔಟ್ ಆದ್ದರಿಂದ ತಂಡ ರನ್ ಗಳಿಸಲು ಅಶಕ್ತವಾಯಿತು.

ಮೊನಿಶ್ ಆಸರೆಯಾಗಿ ಆಡಿದರಾದರೂ ರನ್ ಪೇರಿಸಲು ಮುಂದಾಗಿ ವಿಕೆಟ್ ಕಳೆದುಕೊಂಡರು. ನಂತರದಲ್ಲಿ ಬ್ಯಾಟ್ಸ್‍ಮನ್‍ಗಳಿಲ್ಲದೆ ಪರದಾಡಿದ ತಂಡದ ಪುಟಾಣಿ ಬಾಲಕ- ಬಾಲಕಿಯರು ಕೂಡ ಬ್ಯಾಟ್ ಮಾಡಿದರು. ಅಲ್ಪಮೊತ್ತವನ್ನೆದುರಿಸಿದ ಕುಟ್ಟಂಡ ತಂಡ ಕೇವಲ 1.3 ಓವರ್‍ನಲ್ಲಿ ಒಂದು ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಕುಟ್ಟಂಡ ಕುಟ್ಟಪ್ಪ 8 ಎಸೆತಗಳಲ್ಲಿ 17 ರನ್ ಗಳಿಸಿ ಗಮನ ಸೆಳೆದರೆ, 12 ರನ್ ಗಳಿಸಿದ ಮಡ್ಲಂಡ ಮೊನಿಶ್ ಪಂದ್ಯಪುರುಷ ಪ್ರಶಸ್ತಿ ಪಡೆದರು.

ಕರಿನೆರವಂಡ ತಂಡ 5 ವಿಕೆಟ್‍ಗೆ 62 ರನ್ ಗಳಿಸಿದರೆ, ಅಳಮೇಂಗಡ ತಂಡ 3 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ರೋಚಕತೆಯಿಂದ ಕೂಡಿದ್ದ ಪಂದ್ಯಾಟದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಅಳಮೇಂಗಡ ಸೋಮಯ್ಯ 27 ರನ್ ಗಳಿಸಿ ತಂಡವನ್ನು ಗೆಲುವಿನ ಗೆರೆ ದಾಟಿಸಿದರು. 13 ರನ್ ಗಳಿಸಿದ ಕರಿನೆರವಂಡ ರಚನ್ ಪಂದ್ಯ ಪುರುಷ ಪ್ರಶಸ್ತಿ ಗಳಿಸಿದರು.

ಕಾಡ್ಯಮಾಡ ತಂಡ 6 ವಿಕೆಟ್ ಕಳೆದುಕೊಂಡು 78 ರನ್‍ಗಳನ್ನು ಕಲೆ ಹಾಕಿತು. ಉತ್ತರವಾಗಿ ಅಮ್ಮಾಟಂಡ ತಂಡ 2 ವಿಕೆಟ್ ನಷ್ಟದಲ್ಲಿ 82 ರನ್ ಗಳಿಸಿ ಗುರಿ ಸಾಧಿಸಿತು. ಅಮ್ಮಾಟಂಡ ದಿಲೀಪ್ 18 ಎಸೆತಗಳಲ್ಲಿ 38 ರನ್ ಗಳಿಸಿ ಗಮನ ಸೆಳೆದರೆ, ಕಾಡ್ಯಮಾಡ ತಂಡ ಪರ ವಯಸ್ಸನ್ನು ಲೆಕ್ಕಿಸದರೆ ಉತ್ತಮ ಆಟ ಪ್ರದರ್ಶಿಸಿದ 10 ಎಸೆತಗಳಲ್ಲಿ 20 ರನ್ ಗಳಿಸಿದ ಮಧು ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಲ್ಲಮಾಡ ತಂಡ 6 ವಿಕೆಟ್‍ಗೆ 63 ರನ್ ಗಳಿಸಿದರೆ, ಕಳಕಂಡ ತಂಡ 4 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಕಳಕಂಡ ಮಧು 13 ರನ್ ಗಳಿಸಿದರೆ, 19 ರನ್ ಗಳಿಸಿದ ಬಲ್ಲಿಮಾಡ ಸತೀಶ್ ಪಂದ್ಯಪುರುಷ ಪ್ರಶಸ್ತಿ ಪಡೆದರು.