ಕೂಡಿಗೆ, ಮೇ 22 : ಕಾವೇರಿ ಜಲಾನಯನ ಪ್ರದೇಶಗಳಿಗೆ ಒಳಪಡುವ ಪ್ರದೇಶಕ್ಕೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ರಾಜ್ಯ ಸರ್ಕಾರದ ಆದೇಶದಂತೆ ಹಾರಂಗಿ ಜಲಾಶಯದಿಂದ ವಿದ್ಯುತ್ ಘಟಕದ ಮೂಲಕ ಮೊದಲು 2500 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿತ್ತು, ದಿನದಿಂದ ದಿನಕ್ಕೆ ಹೆಚ್ಚು ನೀರನ್ನು ಹರಿಯಬಿಡಲಾಗಿದ್ದು, ಇದನ್ನು ರೈತರು ವಿರೋಧಿಸಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಸಾಧಾರಣ ಪ್ರಮಾಣದ ಮಳೆಯಾಗುತ್ತಿರುವ ಪರಿಣಾಮ ಅಲ್ಪ ನೀರು ಅಣೆಕಟ್ಟೆಯಲ್ಲಿ ಸಂಗ್ರಹವಾಗಿದೆ. ಆದರೆ, ಜಲಾಶಯದಲ್ಲೇ ನೀರಿನ ಮಟ್ಟ ಕಡಿಮೆಯಿದ್ದರೂ ಕುಡಿಯುವ ನೀರಿಗಾಗಿ ಹಾರಂಗಿಯಿಂದ ಕೆ.ಆರ್.ನಗರವರೆಗಿನ ಪ್ರದೇಶಗಳಿಗೆ ವಿದ್ಯುತ್ ಘಟಕದ ಮೂಲಕ ಹರಿಸಲಾಗಿದ್ದರೂ, ನಮಗೆ ಬೇಸಿಗೆ ಬೆಳೆ ಬೆಳೆಯಲು ಕೊಡಗಿನ ಗಡಿಭಾಗ ಶಿರಂಗಾಲದವರೆಗೆ ನೀರು ಹರಿಸದ ಅಧಿಕಾರಿಗಳು, ಮೇಲಾಧಿಕಾರಿಗಳ ಆದೇಶ ಬಂದಿದೆ ಎಂದು ಕುಡಿಯುವ ನೀರಿನ ನೆಪವೊಡ್ಡಿ ನದಿಗೆ 5000 ಕ್ಯೂಸೆಕ್ ನೀರು ಹರಿಸುತ್ತಿರುವದು ಸರಿಯಾದ ಕ್ರಮವಲ್ಲ ಎಂದು ಜಲಾನಯನ ವ್ಯಾಪ್ತಿಯ ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ ರೈತರ ಮುಖಂಡ, ಕೊಡಗು ಜಿಲ್ಲಾ ದಲಿತ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಬಿ.ಡಿ.ಅಣ್ಣಯ್ಯ ಆರೋಪಿಸಿದ್ದಾರೆ. -ಕೆ.ಕೆ.ನಾಗರಾಜಶೆಟ್ಟಿ