ಗೋಣಿಕೊಪ್ಪಲು, ಮೇ 22: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಜೆಡಿಎಸ್‍ನ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಮೊದಲ ಬಾರಿಗೆ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ದೈಯ್ಯದಡ್ಲು ಗಿರಿಜನರ ಹಾಡಿಯಲ್ಲಿ ವಾಸ್ತವ್ಯ ಮಾಡುವ ಮೂಲಕ ಬಡಜನತೆಯ ಸಂಕಷ್ಟಗಳನ್ನು ಬಗೆ ಹರಿಸುವ ಪ್ರಯತ್ನದಲ್ಲಿ ಈ ಭಾಗಕ್ಕೆ ಕುಮಾರಸ್ವಾಮಿಯವರನ್ನು ಗ್ರಾಮ ವಾಸ್ತವ್ಯಕ್ಕೆ ಆಹ್ವಾನಿಸುವದಾಗಿ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಆಶಾಭಾವನೆ ವ್ಯಕ್ತ ಪಡಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನಾ ದಿನ ಅವರು ‘ಶಕ್ತಿ’ಯೊಂದಿಗೆ ಮಾತನಾಡುತ್ತಿದ್ದರು.

ಇದೀಗ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವದರಿಂದ ಜಿಲ್ಲೆಯಲ್ಲಿ ಪಕ್ಷವನ್ನು ಮತ್ತಷ್ಟು ಸಧೃಡಗೊಳಿಸಲಾಗುವದು ಎಂದರು.

ಮಡಿಕೇರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೀವಿಜಯ ಈ ಬಾರಿ ಗೆದ್ದೆ ಗೆಲ್ಲುತ್ತಾರೆ ಎಂಬ ಅಪಾರ ವಿಶ್ವಾಸ ಎಲ್ಲರಲ್ಲಿಯೂ ಮೂಡಿತ್ತು. ಕ್ಷೇತ್ರದಲ್ಲಿ ಚುನಾವಣೆಗೂ ಮುನ್ನಾ ಪಕ್ಷ ಸಂಘಟಿಸಲು ಕಾರ್ಯಕರ್ತರು ಹಗಲು ರಾತ್ರಿ ದುಡಿದಿದ್ದಾರೆ. ಚುನಾವಣೆಗೆ ಎರಡು ದಿನ ಮೊದಲು ಕಾಣದ ಕೈಗಳು ಕೆಲಸ ಮಾಡಿದ ಹಿನ್ನೆಲೆಯಲ್ಲಿ ಇವರ ಗೆಲುವಿಗೆ ಹಿನ್ನಡೆಯಾಯಿತು ಎಂದು ಅಭಿಪ್ರಾಯಪಟ್ಟರು.

ಕುಮಾರಸ್ವಾಮಿ ಅವರು ಚುನಾವಣಾ ಸಂದರ್ಭದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವ ವಿಶ್ವಾಸ ನನ್ನಲ್ಲಿದೆ. ಜಿಲ್ಲೆಯ ಮಟ್ಟಿಗೆ ಆನೆ ಮಾನವ ಸಂಘರ್ಷ ರೈತರ ಕೃಷಿ ಸಾಲ ಮನ್ನಾ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾದ ವಿಚಾರದಲ್ಲಿ ಕುಮಾರಸ್ವಾಮಿಯವರ ಗಮನ ಸೆಳೆಯುತ್ತೇನೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಂಕೇತ್ ನುಡಿದರು.

ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಡುವ ಒಂದೇ ಉದ್ದೇಶದಿಂದ ಜಾತ್ಯತೀತ ಸಿದ್ದಾಂತದ ಮೇಲೆ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆಯಾಗಿದೆ. ಜನರ ನಿರೀಕ್ಷೆಗೂ ಮೀರಿ ಕುಮಾರಸ್ವಾಮಿ ಅಧಿಕಾರ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು. - ಹೆಚ್.ಕೆ. ಜಗದೀಶ್