ತೂತುಕುಡಿ ಮೇ 22 : ತಮಿಳುನಾಡಿನ ತೂತುಕುಡಿಯಲ್ಲಿ ತಾಮ್ರ ಮಿಶ್ರಣ ಘಟಕ ಸ್ಟೆರ್ಲೈಟ್ ಕಂಪನಿ ಕಾರ್ಯಾಚರಣೆ ನಿಲ್ಲಿಸುವಂತೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ಶತದಿನಕ್ಕೆ ಕಾಲಿಡುತ್ತಿದ್ದಂತೆ ಹಿಂಸಾರೂಪಕ್ಕೆ ಕಾರಣವಾಯಿತು. ಪ್ರತಿಭಟನಾಕಾರರ ಮೇಲೆ ಪೆÇಲೀಸರು ನಡೆಸಿದ ಗೋಲಿಬಾರ್ ನಿಂದಾಗಿ 10 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಉದ್ರಿಕ್ತ ಪ್ರತಿಭಟನಾಕಾರರು, ಜಿಲ್ಲಾಡಳಿತ ಕಚೇರಿ ಹಾಗೂ ಸ್ಟರ್ಲೈಟ್ ನೌಕರರ ವಸತಿ ಗೃಹಗಳಿಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪೆÇಲೀಸರು ಗುಂಡಿನ ದಾಳಿ ನಡೆಸಿದ್ದು, ಮಹಿಳೆಯರು ಸೇರಿದಂತೆ ಸುಮಾರು 8 ಮಂದಿ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಮಧ್ಯಾಹ್ನ 12-50ರ ಸುಮಾರಿಗೆ ಈ ಹಿಂಸಾಚಾರ ಭುಗಿಲೆದಿದ್ದು, ಕಾನೂನು ವಿಭಾಗದ ಎಡಿಜಿಪಿ ಹೆಚ್ಚುವರಿ ಬೆಟಲಿಯನ್ ನೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸಪಡುವಂತಾಯಿತು. ವಿಷಯುಕ್ತ ಅನಿಲ ಹೊರಸೂಸುವಿಕೆಯಿಂದ ನಾನಾ ಬಗೆಯ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗಿರುವ ತಾಮ್ರ ಮಿಶ್ರಿತ ಘಟಕ ಸ್ಟೆರ್ಲೈಟ್ ಕಂಪನಿ ಮುಚ್ಚುವಂತೆ ಆಗ್ರಹಿಸಿ ನೂರಾರು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಇಡೀ ತೂತುಕುಡಿ ಪಟ್ಟಣ ಸ್ತಬ್ದಗೊಂಡಿತ್ತು. ಕಲಂ 144 ರ ಅನ್ವಯ ಜಿಲ್ಲಾಧಿಕಾರಿ ಎನ್. ವೆಂಕಟೇಶ್ ನಿಷೇಧಾಜ್ಞೆ ಜಾರಿಗೊಳಿಸಿದ್ದರು. 4 ಸಾವಿರ ಪೆÇಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಆದರೆ, ಪ್ರತಿಭಟನಾಕಾರರು ಬ್ಯಾರಿಕೇಡ್ ಗಳನ್ನು ಮುರಿದು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೆÇಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ.
ಬಿಜೆಪಿಯಿಂದ ಜನಮತ ವಿರೋಧಿ ದಿನ
ಬೆಂಗಳೂರು ಮೇ 22 : ಅಪವಿತ್ರ ಮೈತ್ರಿ ಸರ್ಕಾರ ರಚನೆಯನ್ನು ಖಂಡಿಸಿ ಬಿಜೆಪಿಯು ತಾ. 23ರಂದು (ಇಂದು) ಬೆಳಿಗ್ಗೆ ರಾಜ್ಯಾದ್ಯಂತ ಜನಮತ ವಿರೋಧಿ ದಿನ ಆಚರಿಸಲಿದೆ. ಬೆಂಗಳೂರಿನಲ್ಲಿ ಬೆಳಿಗ್ಗೆ 11.15ಕ್ಕೆ ನಗರದ ಆನಂದರಾವ್ ವೃತ್ತದ ಮೌರ್ಯ ಹೋಟೆಲ್ ಬಳಿಯ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಯಲಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರತಿಭಟನೆ ನೇತೃತ್ವ ವಹಿಸುವರು. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ಎನ್.ರವಿಕುಮಾರ್, ಸಂಸದರಾದ ಪಿ.ಸಿ. ಮೋಹನ್, ಬೆಂಗಳೂರು ಮಹಾನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ, ಪದಾಧಿಕಾರಿಗಳು, ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಭಾಗವಹಿಸುವರು ಎಂದು ಪಕ್ಷದ ರಾಜ್ಯ ಘಟಕದ ಮಾಧ್ಯಮ ಸಂಚಾಲಕ ಎಸ್.ಶಾಂತಾರಾಮ್ ತಿಳಿಸಿದ್ದಾರೆ.
ಡಾ.ಜಿ. ಪರಮೇಶ್ವರ್‍ಗೆ ಡಿಸಿಎಂ ಹುದ್ದೆ
ಬೆಂಗಳೂರು ಮೇ 22 : ಕಾಂಗ್ರೆಸ್‍ನ ಹಿರಿಯ ನಾಯಕ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಜಿ. ಪರಮೇಶ್ವರ ಅವರು ಉಪ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ ಸಮಾರಂಭ ಸಂಜೆ 4.30ಕ್ಕೆ ನಡೆಯಲಿದೆ. ಇದೇ ವೇಳೆ, ಪರಮೇಶ್ವರ ಅವರೂ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಯಾದಿಯಲ್ಲಿ ಕಾಂಗ್ರೆಸ್ನ ಡಿ.ಕೆ. ಶಿವಕುಮಾರ್, ಮಧ್ಯಕರ್ನಾಟಕದಿಂದ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ, ಎಂ.ಬಿ. ಪಾಟೀಲ್ ಮತ್ತಿತರರ ಹೆಸರೂ ಕೇಳಿಬಂದಿತ್ತು. ಡಿ.ಕೆ. ಶಿವಕುಮಾರ್‍ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಆಗ್ರಹವೂ ವ್ಯಕ್ತವಾಗಿತ್ತು. ಮತ್ತೊಂದೆಡೆ, ಉತ್ತರ ಕರ್ನಾಟಕ ಭಾಗದ ನಾಯಕರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು ಎಂಬ ಕೂಗೂ ಕೇಳಿ ಬಂದಿತ್ತು.
ಕಾಂಗ್ರೆಸ್‍ಗೆ 22, ಜೆಡಿಎಸ್‍ಗೆ 12 ಸಚಿವ ಸ್ಥಾನ
ಬೆಂಗಳೂರು ಮೇ 22 : ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ಕಸರತ್ತು ಮುಂದುವರೆದಿದ್ದು, ಕಾಂಗ್ರೆಸ್ 22, ಜೆಡಿಎಸ್ 12 ಸಚಿವರನ್ನು ಹೊಂದಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ನಾಳೆ ಕುಮಾರಸ್ವಾಮಿ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ರಮೇಶ್ ಕುಮಾರ್ ಸ್ಪೀಕರ್ ಆಗಲಿದ್ದಾರೆ. ಉಪ ಸ್ಪೀಕರ್ ಸ್ಥಾನವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ ಎಂದು ಅವರು ಹೇಳಿದರು. ಸಂಪುಟ ರಚನೆ ಸಂಬಂಧ ಬೆಂಗಳೂರಿನಲ್ಲಿಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೇಣುಗೋಪಾಲ್, ಲಿಂಗಾಯಿತರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆ ಇದೆ. ಆದರೆ, ಈ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು. ಮೇ 25 ರಂದು ಸ್ಪೀಕರ್ ಹಾಗೂ ಉಪ ಸ್ಪೀಕರ್ ಚುನಾವಣೆ ನಡೆಯಲಿದ್ದು, ನಾಡಿದ್ದು, ಖಾತೆಗಳನ್ನು ಅಂತಿಮಗೊಳಿಸಲಾಗುವದು ಎಂದು ಅವರು ಹೇಳಿದರು.
ಚರ್ಚಿಸಿ ಸಾಲಮನ್ನಾ : ಹೆಚ್‍ಡಿಕೆ ಭರವಸೆ
ಚಿಕ್ಕಮಗಳೂರು ಮೇ 22 : ರೈತರ ಸಂಪೂರ್ಣ ಸಾಲಮನ್ನಾ ನಿಟ್ಟಿನಲ್ಲಿ ಸಚಿವ ಸಂಪುಟ ರಚನೆಯಾದ ನಂತರ ಮೈತ್ರಿ ಪಕ್ಷದವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಜೆಡಿಎಸ್‍ಗೆ ಬಹುಮತ ನೀಡಿದ್ದರೆ ಪ್ರಮಾಣವಚನ ಸ್ವೀಕರಿಸಿದ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತಿದ್ದೆ. ಈಗ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚನೆ ಮಾಡುತ್ತಿದ್ದೇವೆ. ಎರಡು ಪಕ್ಷಗಳು ಜೊತೆಯಾಗಿ ಸಾಗಬೇಕಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷವನ್ನು ವಿಶ್ವಾಸ ತೆಗೆದುಕೊಂಡು ತೀರ್ಮಾನ ಕೈಗೊಳ್ಳಬೇಕಿದೆ' ಎಂದು ಪ್ರತಿಕ್ರಿಯಿಸಿದರು. ಪೂರ್ಣ ಬಹುಮತ ನೀಡಿದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ಜನರನ್ನು ಪರಿಪರಿಯಾಗಿ ಬೇಡಿಕೊಂಡಿದ್ದೆ. ಜನತೆ ನಮ್ಮನ್ನು ತಿರಸ್ಕರಿಸಿರುವುದನ್ನು ಗಮನಿಸಿದರೆ ಜನರಿಗೆ ಸಾಲಮನ್ನಾ ಬೇಕಿಲ್ಲವೇನೋ ಎಂದೆನಿಸಿದೆ. ಜನತೆ ನಮಗೆ ಅಧಿಕಾರ ಕೊಟ್ಟಲ್ಲ' ಎಂದು ಉತ್ತರಿಸಿದರು. `ಎರಡೂ ಪಕ್ಷಗಳೂ ಪ್ರಣಾಳಿಕೆಯಲ್ಲಿ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕಾದ ಕರ್ತವ್ಯ, ಬದ್ಧತೆ ನಮ್ಮ ಮೇಲಿದೆ. ರೈತರು ನೆಮ್ಮದಿಯಿಂದ ಬದುಕಬೇಕು. ಅವರು ಸುಖ ಮುಖ್ಯ. ಮೈತ್ರಿ ಪಕ್ಷದ ಸಹಕಾರ ಪಡೆದು ಪ್ರಣಾಳಿಕೆಯಲ್ಲಿನ ಅಂಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ತೀರ್ಮಾನ ಕೈಗೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ' ಎಂದು ಹೇಳಿದರು.
ಮಂಗಳೂರಿನ ರೋಗಿಯಲ್ಲಿ ನಿಫಾ ಶಂಕೆ
ಮಂಗಳೂರು ಮೇ 22 : ನಗರದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ತಲಾ ಒಬ್ಬ ರೋಗಿಯ ಗಂಟಲು ದ್ರವದ ಮಾದರಿಯನ್ನು ಮಣಿಪಾಲ ಪ್ರಯೋಗಾಲಕ್ಕೆ ಕಳುಹಿಸಲಾಗಿದ್ದು ನಿಫಾ ಶಂಕೆ ವ್ಯಕ್ತವಾಗಿದೆ. ಇದು ನಿಫಾ ಸೋಂಕು ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದರಿಂದ ಇಬ್ಬರು ರೋಗಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ, ಇದುವರೆಗೆ ಪ್ರಯೋಗಾಲಯದ ವರದಿ ಬಂದಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣರಾವ್ ತಿಳಿಸಿದ್ದಾರೆ.
ಬಿ.ಎನ್.ಪ್ರಹ್ಲಾದ್‍ಗೆ ಟಿಕೆಟ್
ಬೆಂಗಳೂರು ಮೇ 22 : ಬಿಜೆಪಿ ಅಭ್ಯರ್ಥಿ ವಿಜಯ ಕುಮಾರ್ ನಿಧನದಿಂದ ಮುಂದೂಡಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು ವಿಜಯ್ ಸಹೋದರ ಬಿ.ಎನ್.ಪ್ರಹ್ಲಾದ್ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಮಂಗಳವಾರ ಬಿ.ಎನ್ ಪ್ರಹ್ಲಾದ್ ಅವರಿಗೆ ಟಿಕೇಟ್ ಘೋಷಣೆ ಮಾಡಿದೆ. ಜೂನ್ 11ರ ಸೋಮವಾರ ಮತದಾನ ನಡೆಯಲಿದೆ.