ಮಡಿಕೇರಿ ಮೇ 22 : ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಾಮಮಾರ್ಗದಿಂದ ಜಯ ಸಾಧಿಸಿದೆ ಎಂಬುದಾಗಿ ಕೆಲವು ಮಂದಿ ನೀಡುತ್ತಿರುವ ಹೇಳಿಕೆ ಅಚ್ಚರಿಯನ್ನು ಮೂಡಿಸಿದ್ದು, ಪಕ್ಷ ವಿರೋಧಿ ಚಟುವಟಿಕೆ ಯಿಂದಲೇ ಸೋಲಾಗಿದೆ ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ತಿರುಮಲ ಸೋನ ಅಭಿಪ್ರಾಯಪಟ್ಟಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿಜೆಪಿ ಮಂದಿ ನೀಡಿದ ಹಣಕ್ಕೆ ಕೈ ಚಾಚಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ವ್ಯಕ್ತಿಗಳೇ ಬಿಜೆಪಿ ವಿರುದ್ಧ ಹೇಳಿಕೆ ನೀಡಿ ದ್ವಿಪಾತ್ರ ನಿರ್ವಹಣೆ ಮಾಡುತ್ತಿರುವದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಈ ವ್ಯಕ್ತಿಗಳು ಮತ ಎಣಿಕೆ ದಿನ ಮಡಿಕೇರಿಯಿಂದಲೇ ಅದೃಶ್ಯರಾಗಿದ್ದಾರೆ. ಕಾಂಗ್ರೆಸ್ ನಿಂದ ಹೊರ ಬಂದು ಬಿಜೆಪಿಯ ಕದ ತಟ್ಟಿರುವ ವ್ಯಕ್ತಿಗಳು ಬಿಜೆಪಿಯ ನಾಯಕರುಗಳಿಂದ ಹಣ ಪಡೆದು ಅವರ ಸೂಚನೆಯಂತೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷ ವಿರೋಧಿ ಚಟುವಟಿಕೆ ಮೂಲಕ ಪರೋಕ್ಷವಾಗಿ ಬಿಜೆಪಿ ಗೆಲುವಿಗೆ ಶ್ರಮಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವವರÀ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ಕೊಡಗಿನಲ್ಲಿ ಜೆಡಿಎಸ್ ಪಕ್ಷ ಮುಜುಗರಕ್ಕೆ ಒಳಗಾಗುವ ಎಲ್ಲಾ ಸಾಧ್ಯತೆಗಳಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.