ಮಡಿಕೇರಿ, ಮೇ 22: ಋಷಿಗಳಾದ ಅಗಸ್ತ್ಯರು ಹಾಗೂ ಭಗಂಡ ಮಹರ್ಷಿಗಳ ತಪೋನೆಲ ಮತ್ತು ತಾಯಿ ಕಾವೇರಿಯ ಉಗಮ ಸ್ಥಳ ತಲಕಾವೇರಿ - ಭಾಗಮಂಡಲ ಕ್ಷೇತ್ರಗಳನ್ನು ತೀರ್ಥಕ್ಷೇತ್ರಗಳ ಪಾವಿತ್ರ್ಯದಿಂದಲೇ ಉಳಿಸಿ ಕೊಳ್ಳಬೇಕಿದ್ದು, ಯಾವದೇ ರೀತಿಯಲ್ಲಿ ಪ್ರವಾಸಿ ತಾಣವೆಂದು ಪರಿಗಣಿಸದಂತೆ, ದ್ವಿತೀಯ ದಿನದಲ್ಲಿ ದೈವಜ್ಞರು ಅಷ್ಟಮಂಗಲ ಪ್ರಶ್ನೆ ವೇಳೆ ಸ್ಪಷ್ಟವಾಗಿ ನುಡಿದಿದ್ದಾರೆ.ಕ್ಷೇತ್ರ ಅಭಿವೃದ್ಧಿ ಹಾಗೂ ದೋಷ ನಿವಾರಣೆ ಸಂಬಂಧ ನಿನ್ನೆಯಿಂದ ಆರಂಭಗೊಂಡಿರುವ ಪ್ರಶ್ನೆಯಲ್ಲಿ, ದೇವಾಲಯ ಸಮಿತಿ ಪ್ರಮುಖರು ದೈವಜ್ಞರುಗಳನ್ನು ಅಷ್ಟಮಂಗಲಕ್ಕೆ ಆಹ್ವಾನಿಸಿದ ಘಳಿಗೆ ಫಲದಿಂದ ವಿಮರ್ಶಿಸಿದ ವೇಳೆ ಹಲವು ದೋಷಗಳು ಗೋಚರಿಸಿತು. ಮುಖ್ಯವಾಗಿ ಆಶ್ಲೇಷ ನಕ್ಷತ್ರ ಫಲದೊಂದಿಗೆ ರಾಹುಕಾರಕ ಅಂಶದಿಂದ ನಾಗದೋಷ ಮತ್ತು ಚಾಮುಂಡಿ ನೆಲೆಯಲ್ಲಿ ತೃಪ್ತಿದಾಯP Àವಿಲ್ಲದೆ ಭಕ್ತಾದಿಗಳೊಂದಿಗೆ ಸಂಘರ್ಷ ನಡೆಯುವಂತಾಗಿದೆ ಎಂದು ವಿಶ್ಲೇಷಿಸಲಾಯಿತು.ಹುತ್ತ ನಾಶ - ವೃಕ್ಷನಾಶ : ಕ್ಷೇತ್ರದ ಅಭಿವೃದ್ಧಿ ಸಂದರ್ಭ ನಾಗನೆಲೆಯ ಸ್ಥಾನಪಲ್ಲಟದೊಂದಿಗೆ ಹುತ್ತ ನಾಶಗೊಂಡಿದ್ದು, ಮುಖ್ಯವಾಗಿ ಸನ್ನಿಧಿಯ ಪಾವಿತ್ರ್ಯ ನೆಲೆಯಾಗಿದ್ದ ಸ್ಥಳದಿಂದ ಐದು ವೃಕ್ಷಗಳನ್ನು ನಾಶಗೊಳಿಸಲಾಗಿದೆ ಎಂಬ ದೋಷಫಲ ಗೋಚರಿಸಿತು. ಪರಿಣಾಮ ಸನ್ನಿಧಿಯ ಅರ್ಚಕ ಕುಟುಂಬದಲ್ಲಿ ಆಪತ್ತುಗಳು, ಅವಘಡಗಳು ಅನುಭವಿಸಿದ್ದು, ಜೀವಹಾನಿಯೂ ಎದುರಾಗಿದೆ ಎಂದು ಕಂಡು ಬಂತು. ಪರಿಣಾಮ ಸ್ವಜನ ಸಂಘರ್ಷ, ಕಲಹ ಇತ್ಯಾದಿ ನಿತ್ಯ ನಿರಂತರ ಕಾರಣವಿಲ್ಲದೆ ಸಂಭವಿಸುತ್ತಿದೆ ಎಂದು ದೈವಜ್ಞರು ಅಭಿಪ್ರಾಯಪಟ್ಟರು.
ಹತ್ಯೆಯ ಪ್ರಸ್ತಾಪ : ಹಲವು ವರ್ಷಗಳ ಹಿಂದೆ ದೂರದಿಂದ ಬಂದಿದ್ದ ಸಾಧಕರೊಬ್ಬರ ನಿಗೂಢ ಹತ್ಯೆ ನಡೆದಿದ್ದರೂ, ಆ ಸಂಬಂಧ ಯಾವದೇ ಪರಿಹಾರ ಕೈಗೊಂಡಿದ್ದರೂ ಸಫಲ ಆಗದೆ ಇನ್ನಷ್ಟು ಕೃತಿಮಗಳಿಗೆ ಕಾರಣವಾಗಿದ್ದು,
(ಮೊದಲ ಪುಟದಿಂದ) ಪ್ರೇತಕಾರಕ ಶಕ್ತಿಗಳ ಮೇಲಾಟ ದೊಂದಿಗೆ ಈಚೆಗೆ ಹೊರಗಿನ ಮಹಿಳೆಯೊಬ್ಬಳು ಪತಿಯನ್ನು ಕಟ್ಟಿಹಾಕಿ ಕೊಲೆಗೈಯ್ಯಲು ಪ್ರಚೋದಿಸುವಂತಾಗಿದೆ ಎಂದು ಮೇಲಿನ ಕೃತ್ಯವನ್ನು ವಿಶ್ಲೇಷಿಸಿದರು.
ಪ್ರಶ್ನೆ ಫಲದಲ್ಲಿ ಶನಿಯು ಮೌಢ್ಯಕಾರಕನಾಗಿರುವ ಕಾರಣದಿಂದ ಕ್ಷೇತ್ರದಲ್ಲಿ ತೀರ್ಥ ಸನ್ನಿಧಿಯ ಪಾವಿತ್ರ್ಯ ಭಾವ ಮರೆತು ವ್ಯಭಿಚಾರದ ಸಂಗತಿಗಳಿಗೆ ಹೇತುವಾಗುತ್ತಿದ್ದು, ಅನೇಕರು ಯಾತ್ರೆಗೆ ಬರುವ ವೇಳೆ ಅಪರ ಕ್ರಿಯೆಗಳನ್ನು ಮುಗಿಸಿದ ವಸ್ತುಗಳನ್ನು ತಂದು ದೈವವನ ಹಾಗೂ ಕಾವೇರಿಗೆ ಎಸೆಯುವ ಪರಿಣಾಮ ಪ್ರೇತಬಾಧೆ ಕಾಣುವಂತಾಗಿದೆ ಎಂದು ಮಾರ್ನುಡಿದರು. ಅಲ್ಲದೆ ದೇವಾಲಯ ಗರ್ಭ ಗೃಹದೊಳಗೆ ಅನ್ಯರು ಪ್ರವೇಶಿಸಿ ಸಿದ್ಧಿಗಾಗಿ ಧ್ಯಾನ ಮಾಡಿರುವ ಘಟನೆಗಳು ಸೇರಿದಂತೆ ಅನೇಕ ದೈವ ಅಪರಾಧಗಳು ನಡೆದಿದ್ದು, ರಕ್ತದೋಷ ಎದುರಾಗಿದೆ ಎಂದು ಪ್ರಶ್ನೆಯಲ್ಲಿ ಕಂಡು ಬಂತು.
ಅಷ್ಟಮಂಗಲ ಪ್ರಶ್ನೆ ವೇಳೆ ಆರೂಢರಾಶಿ ತುಲಾವಾಗಿದ್ದು, ತಲಕಾವೇರಿ ಕ್ಷೇತ್ರದ ಮೂಲ ಸ್ವರೂಪದ ಮಾರ್ಪಾಡುವಿನೊಂದಿಗೆ, ಏಕೆ ಹೀಗೆಲ್ಲ ಆಯಿತು ಎಂಬ ತರ್ಕ ಹುಟ್ಟಿಕೊಂಡಿದೆಯಲ್ಲದೆ, ಕುಜಕಾರಕ ಫಲದಿಂದ ಕ್ಷೇತ್ರವು ಕಳ್ಳತನದೊಂದಿಗೆ ಮೋಸದ ತಾಣದಂತೆ ಭಾಸಗೊಂಡು, ದೈವ ಸನ್ನಿಧಿ ಚೈತನ್ಯ ಕ್ಷೀಣಗೊಳ್ಳ ತೊಡಗಿದೆ ಎಂಬ ಅಂಶ ಬೆಳಕಿಗೆ ಬಂತು.
ಪಾವಿತ್ರ್ಯಕ್ಕೆ ಒತ್ತು ಅವಶ್ಯಕ : ಪ್ರವಾಸಿಗರು ಅಸಭ್ಯರಾಗಿ, ಅಶ್ಲೀಲ ಉಡುಗೆಗಳಿಂದ ಬರುತ್ತಿರುವ ಹಿನ್ನೆಲೆ ನೈಜ ಭಕ್ತ ಭಾವನೆಗೂ ಧಕ್ಕೆ ಉಂಟಾಗುತ್ತಿದ್ದು, ಕ್ಷೇತ್ರದ ಪಾವಿತ್ರ್ಯ ಕಾಪಾಡಲು ಆಡಳಿತ ವ್ಯವಸ್ಥೆ ಅಗತ್ಯ ಗಮನಹರಿಸಬೇಕೆಂದು ಪ್ರಶ್ನೆಯಲ್ಲಿ ಗೋಚರಿಸಿತು.
ಕ್ಷೇತ್ರದಲ್ಲಿ ವಾಸ್ತು ವ್ಯತ್ಯಾಸ : ತಲಕಾವೇರಿ ಕ್ಷೇತ್ರ ಅಭಿವೃದ್ಧಿ ವೇಳೆ ರೂಪಿಸಿರುವ ನಕಾಶೆಯ ವಾಸ್ತು ವಿನ್ಯಾಸದಲ್ಲಿ ವ್ಯತ್ಯಾಸ ಗೋಚರಿಸಿದ್ದು, ಒಂದು ರೀತಿಯಲ್ಲಿ ಕಾವೇರಿ ಕ್ಷೇತ್ರ ಸಂಕಟಗಳ ಆಗರವಾಗಿದೆ ಎಂದು ದೈವಜ್ಞರು ಅಭಿಪ್ರಾಯಪಟ್ಟರು. ಈ ಎಲ್ಲಾ ಹಿನ್ನೆಲೆ ತಾ. 24ರ ತನಕ ಪ್ರಶ್ನೆ ಮುಂದುವರಿಸುವ ಮೂಲಕ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಲಾಗುವದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಪ್ರತಿಕ್ರಿಯಿಸಿದರು.
ಇಂದು ಕ್ಷೇತ್ರದಲ್ಲಿ ಈ ಸಂಬಂಧ ವಿವಿಧ ಪ್ರಮುಖರುಗಳಾದ ಎಸ್.ಎಸ್. ಸಂಪತ್‍ಕುಮಾರ್, ಎಂ.ಬಿ. ದೇವಯ್ಯ, ಎಸ್.ಎಂ. ಕಾವೇರಪ್ಪ, ಕೊಕ್ಕಲೇರ ಕಾರ್ಯಪ್ಪ, ಕೋಡಿ ಪೊನ್ನಪ್ಪ, ರವೀಂದ್ರ ಹೆಬ್ಬಾರ್, ನೆರವಂಡ ಉಮೇಶ್, ಮೀನಾಕ್ಷಿ, ದೊರೆ ಸೋಮಣ್ಣ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ದೇವಾಲಯ ಸಮಿತಿ ಪ್ರಮುಖರು ಪಾಲ್ಗೊಂಡಿದ್ದರು. ದೈವಜ್ಞರೊಂದಿಗೆ, ಅರ್ಚಕ ಕುಟುಂಬ ಹಾಗೂ ಇತರರು, ಭಕ್ತ ಸಮೂಹ ಹಾಜರಿದ್ದರು.