ಗೋಣಿಕೊಪ್ಪ ವರದಿ, ಮೇ 22 : ಬೈಗುಳಗಳ ಹಬ್ಬ ಎಂದೇ ಪ್ರಖ್ಯಾತಿ ಹೊಂದಿರುವ ಹೆಬ್ಬಾಲೆ ಬೋಡ್ ನಮ್ಮೆ ತಾ. 23, 24 ರಂದು ನಡೆಯಲಿದೆ. ತಾ. 23 ರಂದು (ಇಂದು) ಸಂಜೆಯಿಂದ ಗುರುವಾರ ಮಧ್ಯಾಹ್ನದವರೆಗೆ ಸಾವಿರಾರು ವೇಷಧಾರಿಗಳು ಮನೆ ಮನೆಗೆ ತೆರಳಿ ಸಂಭ್ರಮಿಸುವದು ಈ ಹಬ್ಬದ ವಿಶೇಷತೆಯಾಗಿದೆ.

ಅಯ್ಯಪ್ಪ, ಭದ್ರಕಾಳಿ ಹಾಗೂ ಬೇಟೆ ಕರುಂಬ ದೇವರುಗಳಿಗೆ ಹರಕೆ ಹೊತ್ತ ವೇಷಧಾರಿ ಭಕ್ತರು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ದೇವರಿಗೆ ಕಾಣಿಕೆ ಬೇಡುತ್ತಾರೆ. ದೇವರಕಾಡುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಯ್ಯಪ್ಪ, ಭದ್ರಕಾಳಿ ಮತ್ತು ಬೇಟೆ ಕರುಂಬ ದೇವರನ್ನು ಪೂಜಿಸುತ್ತಾ ಅರಣ್ಯ ಸಂರಕ್ಷಿಸುವ ಕಾಳಜಿಯಿಂದ ಹಬ್ಬವನ್ನು ಆಚರಿಸುತ್ತಾರೆ. ಬೋಡ್‍ನಮ್ಮೆಯನ್ನು ಬುಧವಾರ ಪಟ್ಟಣಿ, ಗುರುವಾರ ಕುದುರೆ ತೆಗೆಯುವದು ಹಾಗೂ ವೇಷಧಾರಿಗಳಿಂದ ಮನೆಮನೆ ಬೇಡುವ ಮೂಲಕ ಆಚರಿಸುತ್ತಾರೆ.ಪಟ್ಟಣಿಯಂದು ಹಬ್ಬದ ಕುಟ್ಟುಪಾಡಿಗೆ ಒಳಪಡುವ ಊರಿನವರು ಅನ್ನವನ್ನು ಬಿಟ್ಟು ಫಲಹಾರ ಸೇವಿಸುತ್ತಾರೆ. ಹಾಗೆ ಪಟ್ಟಣಿಗೆ ಪೂರ್ವ ಸರಿಯಾಗಿ ಎಂಟು ದಿನದಿಂದ ಅನ್ವಯವಾಗುವಂತೆ ಪ್ರಾಣಿ ಹಕ್ಕಿಗಳನ್ನು ಸಂಹಾರ ಮಾಡದೆ ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಗಳಾಗಿ ದೇವರ ಕಟ್ಟು ಪಾಲಿಸುತ್ತಾರೆ.

ಹಿಂದಿನ ಕಾಲದಲ್ಲಿ ಬೇಟೆಗೆ ತೆರಳುವಾಗ ಬೇಟೆಯಲ್ಲಿ ಸಾಕು ನಾಯಿಯು ಕಾಡು ಪ್ರಾಣಿಗಳ ಇರುವಿಕೆಯನ್ನು ಗ್ರಹಿಸಿ ಬೇಟೆಗಾರನಿಗೆ ಸಹಾಯ ಮಾಡುತ್ತಿತ್ತು ಎಂಬ ಕಾರಣಕ್ಕೆ ಇಲ್ಲಿ ಮಣ್ಣಿನಿಂದ ತಯಾರಿಸಿದ

(ಮೊದಲ ಪುಟದಿಂದ) ನಾಯಿಗೆ ಭಾರಿ ಬೇಡಿಕೆ. ಬೇಟೆ ಕರುಬ ದೇವರಿಗೆ ಬೇಟೆಕಾರನಾಗಿ ಮಣ್ಣಿನಿಂದ ತಯಾರಿಸಿದ ನಾಯಿಯನ್ನು ಅರ್ಪಿಸಲಾಗುತ್ತದೆ.

ಗುರುವಾರ ವೇಷಧಾರಿ ಭಕ್ತರು ಅಂಬಲಕ್ಕೆ ಬರುತ್ತಾರೆ. ಅಲ್ಲಿ ಭಂಡಾರ ಪೆಟ್ಟಿಗೆ, ಪಣಿಕರ ತೆಗೆಯುವ ಮೊಗದೊಂದಿಗೆ ಅಯ್ಯಪ್ಪ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಭದ್ರಕಾಳಿ ದೇವರ ಮೊಗಕ್ಕೆ ಮೊಗ ಪೂಜೆ ಸಲ್ಲಿಸುವದರೊಂದಿಗೆ ಮೊಗ ಪಾಟ್ ಅಯ್ಯಪ್ಪ ದೇವರ ಬೇಟೆಯ ವಾಹನವಾದ ಕುದುರೆಯನ್ನು ಅಯ್ಯಪ್ಪ ದೇವರಿಗೆ ಅರ್ಪಣೆ ಮಾಡುತ್ತಾರೆ.

ಭದ್ರಕಾಳಿ, ಚಾಮುಂಡಿ ಮಾತೆಗೆ ಸಂಹಾರ ಪ್ರತೀಕವಾಗಿ ಆಹಾರ ಅರ್ಪಣೆ, ಬೇಟೆ ಕುರುಬ ದೇವರಿಗೆ ಬೇಟೆ ನಾಯಿ ಅರ್ಪಣೆ ಬೋಡ್‍ನಮ್ಮೆ ಆಚರಣೆಯ ಮೂಲ. ದೇವರ ಕಾಡಿನಲ್ಲಿ ಅಯ್ಯಪ್ಪ, ಭದ್ರಕಾಳಿ ಮತ್ತು ಬೇಟೆ ಕರುಬ ದೇವರುಗಳು ಈಗಲೂ ಶಕ್ತಿಯಾಗಿ ಮರ ಸಂಪತ್ತನ್ನು ಕಾಪಾಡುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಹಬ್ಬವನ್ನು ಸಣ್ಣುವಂಡ ಕುಟುಂಬಸ್ಥರು ತಕ್ಕ ಮುಖ್ಯಸ್ಥರಾಗಿ ನಡೆಸುತ್ತಾ ಬರುತ್ತಿದ್ದಾರೆ. ಊರಿನ ಇತರ ಕುಟುಂಬಸ್ಥರಾದ ಕಳ್ಳಿಚಂಡ, ಮನೆಯಪಂಡ, ಚೆಕ್ಕೇರ, ಅಜ್ಜಿನಿಕಂಡ, ಕಂಜಿತಂಡ ಹಾಗೂ ಸ್ಥಳೀಯರು ಸಹಕಾರ ನೀಡುತ್ತಿದ್ದು, ಊರಿನ ಸಹಬಾಳ್ವೆಗೆ ಸಾಕ್ಷಿಯಾಗಿರುತ್ತದೆ.

-ವರದಿ : ಸುದ್ದಿಪುತ್ರ, ದಿನೇಶ್