ಮಡಿಕೇರಿ, ಮೇ 22: ನಿನ್ನೆ ಅಪರಾಹ್ನ ವೀರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಎರಡು ದ್ವಿಚಕ್ರ ವಾಹನಗಳಲ್ಲಿ ಆಗಮಿಸಿ, ಅಡ್ಟಗಟ್ಟಿರುವ ನಾಲ್ವರು ಇಲವಾಲ ಬಳಿ ನಗದು ಸಹಿತ ಮೊಬೈಲ್ ದೋಚಿಕೊಂಡು ಪರಾರಿಯಾಗಿರುವ ಕೃತ್ಯ ಹಾಡ ಹಗಲು ಸಂಭವಿಸಿದೆ.ಮೂಲತಃ ವೀರಾಜಪೇಟೆ ಸಮೀಪದ ಚೆಂಬೆಬೆಳ್ಳೂರು ಗ್ರಾಮದ ನಿವಾಸಿ, ಕೆ.ಎ. ಪ್ರವೀಣ್ ಎಂಬವರು ಬೆಂಗಳೂರಿನಲ್ಲಿರುವ ತನ್ನ ಪತ್ನಿ ಬಳಿಗೆ ಕಾರಿನಲ್ಲಿ (ಕೆ.ಎ. 12 ಎನ್ 3714) ನಿನ್ನೆ ಮಧ್ಯಾಹ್ನ 1.30ರ ಸುಮಾರಿಗೆ ಹೊರಟಿದ್ದಾರೆ. ಇಲವಾಲ ಮೂಲಕ ಹತ್ತಿರದ ಹಾದಿಯಲ್ಲಿ ತೆರಳುತ್ತಿದ್ದ ಸಂದರ್ಭ ದ್ವಿಚಕ್ರ ವಾಹನದಲ್ಲಿ ಇಬ್ಬರು ಹಿಂಬಾಲಿಸಿದ್ದು, ಇವರ ಕಾರನ್ನು ಅಡ್ಡಗಟ್ಟಿದ್ದಾರೆ. ನಿರ್ಜನ ಮಾರ್ಗದಲ್ಲಿ ಅಪಾಯ ಅರಿಯದ ಪ್ರವೀಣ್ ಏನೋ ಮಾತನಾಡಬಹುದೆಂದು ತನ್ನ ಕಾರು ನಿಲ್ಲಿಸಿದ್ದಾರೆ. ಈ ವೇಳೆ ಮತ್ತೊಂದು ದ್ವಿಚಕ್ರ ವಾಹನದಲ್ಲಿ ಅದೇ ಸ್ಥಳಕ್ಕೆ ಇನ್ನಿಬ್ಬರು ಅಪರಿಚಿತರು ಬಂದಿದ್ದು, ಇಲ್ಲಸಲ್ಲದ ನೆಪ ಹೇಳಿ ರೂ. 1 ಲಕ್ಷ ಹಣದ ಬೇಡಿಕೆ ಇಟ್ಟಿದ್ದಾರೆ.
ಈ ಸಂದರ್ಭ ಎಚ್ಚೆತ್ತುಕೊಂಡ ಪ್ರವೀಣ್ ಇಲವಾಲ ಪೊಲೀಸ್ ಠಾಣೆಗೆ ತೆರಳೋಣ ಎಂದು ಹೇಳಲಾಗಿ, ‘ನಿಮ್ಮ ಕಾರು ಬೈಕ್ಕೊಂದಕ್ಕೆ ಡಿಕ್ಕಿಯಾಗಿ ನಮ್ಮ ಸ್ನೇಹಿತ ಗಂಭೀರ ಗಾಯಗೊಂಡು ಆತನ ಚಿಕಿತ್ಸೆಗೆ ಹಣ ಕೊಡಿ’ ಎಂದು ಬೇಡಿಕೆ ಇಟ್ಟಿದ್ದಾರೆ. ಅಪರಿಚಿತ ಮಾತಿಗೆ ಸೊಪ್ಪು ಹಾಕದಿದ್ದಾಗ ಪ್ರವೀಣ್ ಬಳಿಯಿದ್ದ ನಗದು ರೂ. 8100 ಸಹಿತ ಮೊಬೈಲ್ ಕಿತ್ತುಕೊಂಡಿದ್ದಾರೆ. ಅಲ್ಲದೆ ಮೊಬೈಲ್‍ನ ‘ಸಿಮ್’ ಅನ್ನು ತೆಗೆದು ಪ್ರವೀಣ್‍ಗೆ ಕೊಟ್ಟು ಪರಾರಿಯಾಗಿದ್ದಾರೆ.
ಈ ಕೃತ್ಯದ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರ ಗಮನ ಸೆಳೆದಿರುವ ಪ್ರವೀಣ್, ದರೋಡೆಕೋರರ ವಿರುದ್ಧ ಕ್ರಮಕ್ಕೆ ಕೋರಿ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಇಲವಾಲ ಮಾರ್ಗದಲ್ಲಿ ಪ್ರಯಾಣಿಸುವವರು ಎಚ್ಚರ ವಹಿಸುವಂತೆ ಅವರು ‘ಶಕ್ತಿ’ ಮೂಲಕ ಜನತೆಗೆ ಎಚ್ಚರಿಸಿದ್ದಾರೆ.