ವೀರಾಜಪೇಟೆ. ಮೇ 22: ವೀರಾಜಪೇಟೆ ತಾಲೂಕು ಬಿಲ್ಲವ ಸಮಾಜದಿಂದ ಆಯೋಜಿಸಿದ್ದ ಕ್ರೀಡೋತ್ಸವದಲ್ಲಿ ಪ್ರಮುಖ ಪಂದ್ಯವಾದ ಟೆನ್ನಿಸ್ ಬಾಲ್ ಕ್ರಿಕೆಟ್ ಫೈನಲ್ಸ್ ಪಂದ್ಯಾಟದಲ್ಲಿ ಅಮ್ಮತ್ತಿಯ ಬಿಲ್ಲವ ವಾರಿಯರ್ಸ್ “ಎ” ತಂಡ ಜಯ ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಸುಂಟಿಕೊಪ್ಪದ ಬಿಲ್ಲವ ಪ್ಯಾಂಥರ್ಸ್ ತಂಡ ಎರಡನೇ ಸ್ಥಾನ ಪಡೆದು ರನ್ನರ್ಸ್ ಕಪ್ ಪಡೆದು ತೃಪ್ತಿಪಟ್ಟುಕೊಂಡಿತು.
ತಾ. 19ರಂದು ಶನಿವಾರ ಆರಂಭಗೊಂಡ ಬಿಲ್ಲವ ಸಮಾಜದ ಸಮಾರೋಪ ತಾ:20ರಂದು ನಡೆದು ವಾಲಿಬಾಲ್ ಫೈನಲ್ಸ್ ಪಂದ್ಯಾಟದಲ್ಲಿ ಸುಂಟಿಕೊಪ್ಪದ ಬಿಲ್ಲವ ಪ್ಯಾಂಥರ್ಸ್ ಪ್ರಥಮ ಸ್ಥಾನಗಳಿಸಿದರೆ ಸುಂಟಿಕೊಪ್ಪದ ನಾರಾಯಣ ಗುರು ತಂಡ ಎರಡನೇ ಸ್ಥಾನಗಳಿಸಿದೆ. ಹಗ್ಗ ಜಗ್ಗಾಟದ ಫೈನಲ್ಸ್‍ನಲ್ಲಿ ಎಂಜಿಲಗೆರೆ ಬಿಲ್ಲವ ಜಾಜಿ ಫ್ರೆಂಡ್ಸ್ ಪ್ರಥಮ, ವೀರಾಜಪೇಟೆಯ ಬೇಬಿ ಫ್ರೆಂಡ್ಸ್ ಎರಡನೇ ಸ್ಥಾನ ಪಡೆದಿದೆ.
ಬಿಲ್ಲವ ಸಮಾಜದ 17ನೇ ವಾರ್ಷಿಕೊತ್ಸವದ ಅಂಗವಾಗಿ ಸಮುದಾಯದ ಸಂಘಟನೆ ಪ್ರಮುಖ ಪಂದ್ಯಾಟಗಳ ಜೊತೆಗೆ ಪುರುಷರು, ಮಹಿಳೆಯರು ಮಕ್ಕಳಿಗಾಗಿ ಥ್ರೋಬಾಲ್, ವಿಷದ ಚೆಂಡು. ಸೇರಿದಂತೆ ವಿವಿಧ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.
ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳು ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ಸಿ.ಸಿ.ಬಿ ಡಿವೈಎಸ್‍ಪಿ ಬಿ.ಆರ್.ಲಿಂಗಪ್ಪ ಮಾತನಾಡಿ ಸಮುದಾಯ ಬಾಂಧವರು ಕ್ರೀಡೆಯೊಂದಿಗೆ ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ಸಮುದಾಯ ಬಾಂಧವರಲ್ಲಿ ಒಮ್ಮತವಿದ್ದರೆ ಏನೂ ಬೇಕಾದರೂ ಸಾಧಿಸಲು ಸಾಧ್ಯ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾತನಾಡಿ ಸಮಾಜ ಬಾಂಧವರು ಪ್ರಗತಿ ಏಳಿಗೆಯನ್ನು ಸಾಧಿಸ ಬೇಕಾದರೆ ಸಮುದಾಯದಲ್ಲಿ ಒಮ್ಮತವನ್ನು ಕಾಪಾಡಿಕೊಂಡು ಬರಬೇಕು. ಸಮುದಾಯದ ಪ್ರತಿಯೊಬ್ಬರು ಇದಕ್ಕೆ ಸಹಕರಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಮಾತನಾಡಿ ಸಮುದಾಯ ಬಾಂಧವರ ಸಹಕಾರದಿಂದ ಸಂಘಟನೆ ಕಳೆದ 17 ವರ್ಷಗಳಿಂದ ಕ್ರೀಡಾಕೂಟಗಳನ್ನು ಹಮ್ಮಿಕೊಂಡಿದ್ದರಿಂದ ಸಮುದಾಯದ ಕುಟುಂಬಗಳ ನಡುವೆ ಸಾಮರಸ್ಯಕ್ಕೆ ಅವಕಾಶವಾಗಿದೆ. ಸಂಘಟನೆ ಏರ್ಪಡಿಸುವ ಎಲ್ಲ ಕಾರ್ಯಕ್ರಮಗಳಿಗೆ ಸಮಾಜಬಾಂಧವರು ಪರಸ್ಪರ ಸಹಕರಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಕೇಂದ್ರ ಸಹಕಾರ ಬ್ಯಾಂಕಿನ ಡಿ.ಜಿ..ಎಂ. ಬಿ.ಆರ್.ಮೋಹನ್, ಮ್ಯಾನೇಜರ್ ಬಿ.ಕೆ.ಜನಾರ್ಧನ್, ಸುಂಟಿಕೊಪ್ಪದ ಬಿಲ್ಲವ ಸೇವಾ ಸಂಘದ
ಬಿ.ಎಂ.ಮಣಿ ಮುಖೇಶ್, ತಾಲೂಕು ಸಂಘದ ಗೌ: ಅಧ್ಯಕ್ಷ ಬಿ.ರಾಜ, ವೀರಾಜಪೇಟೆ ಉದ್ಯಮಿ ಬಿ.ಆರ್.ಬೋಜಪ್ಪ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಬಿ.ಎಂ.ಗಣೇಶ್, ಕಾರ್ಯದರ್ಶಿ ಬಿ.ಎಸ್.ಜನಾರ್ಧನ್, ಬಿಕೆ.ರಾಮಣ್ಣ, ಅಶ್ವಥ್, ಭರತ್ ಹಾಜರಿದ್ದರು.