ಕೂಡಿಗೆ, ಮೇ 21 : ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿ ನಾಲ್ಕು ತಿಂಗಳ ಹಿಂದೆ ಉದ್ಘಾಟನೆಗೊಂಡು ಹಲವು ಕಾರಣಗಳಿಂದ ಸ್ಥಗಿತಗೊಂಡಿದ್ದ ಸಂಗೀತ ಕಾರಂಜಿಯು ಮುಂದಿನ ವಾರದಿಂದ ವೀಕ್ಷಣೆಗೆ ಲಭ್ಯವಾಗಲಿದೆ.

ಫೆಬ್ರವರಿ ತಿಂಗಳಲ್ಲಿ ಟ್ರಿಬ್ಯೂನಲ್ ಹೈತೀರ್ಪಿನ ವಿಚಾರವಾಗಿ ಮೇಲಾಧಿಕಾರಿಗಳ ಆದೇಶದಂತೆ ಪ್ರವಾಸಿಗರಿಗೆ ಹಾರಂಗಿ ಜಲಾಶಯಕ್ಕೆ ತೆರಳಲು ನಿರ್ಬಂಧ ಹೇರಲಾಗಿತ್ತು. ಅಂದಿನಿಂದ ಇಂದಿನವರೆಗೂ ನಿರ್ಬಂಧ ಮುಂದುವರೆದಿದ್ದು, ಪ್ರವಾಸಿಗರು ನಿರಾಶರಾಗಿ ಹಿಂತಿರುಗುತ್ತಿರುವದು ಕಂಡುಬರುತ್ತಿತ್ತು.

ಇದೀಗ ಸಂಗೀತ ಕಾರಂಜಿಗೆ ಬೇಕಾಗುವ ಜನರೇಟರ್, ಟಿಕೇಟ್ ವ್ಯವಸ್ಥೆ, ವಾಹನಗಳ ನಿಲುಗಡೆ ವ್ಯವಸ್ಥೆ, ಬೃಂದಾವನಕ್ಕೆ ಇನ್ನೂ ಹೆಚ್ಚಿನ ಆಕರ್ಷಣೆಗೆ ಪ್ರಾಣಿಗಳ ಸ್ಥಬ್ತಚಿತ್ರಗಳನ್ನು ಅಳವಡಿಸಲಾಗಿದೆ. ಈಗಾಗಲೇ ದಿನಂಪ್ರತಿ ಸಾವಿರಾರು ಪ್ರವಾಸಿಗರು ಹಾರಂಗಿ ಬೃಂದಾವನಕ್ಕೆ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ. ನೀರಾವರಿ ನಿಗಮದ ಆದೇಶದನ್ವಯ ಸಂಗೀತ ಕಾರಂಜಿ ಕಾಮಗಾರಿಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸಂಗೀತ ಕಾರಂಜಿ ವೀಕ್ಷಣೆಗೆ ಮುಂದಿನ ವಾರದಿಂದ ಅವಕಾಶ ಮಾಡಿಕೊಡಲಾಗುವದು ಎಂದು ಕಾರ್ಯಪಾಲಕ ಅಭಿಯಂತರ ಧರ್ಮರಾಜ್ ತಿಳಿಸಿದ್ದಾರೆ.

-ಕೆ.ಕೆ.ನಾಗರಾಜಶೆಟ್ಟಿ