ಮಡಿಕೇರಿ, ಮೇ 21: ಕಳೆದ ಜ.31ರಂದು ಗಾಳಿಬೀಡು ಸನಿಹದ ಕೂಟುಹೊಳೆಯಲ್ಲಿ ಶವ ದೊರೆತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದ ಆದೇಶದಂತೆ ಶವದ ಮರು ಮರಣೋತ್ತರ ಪರೀಕ್ಷೆ ನಡೆಯಿತು.ಮೊಣ್ಣಂಗೇರಿ ನಿವಾಸಿ ಯಾಲದಾಳು ಪ್ರಭು ಎಂಬವರು ತಾ. 31ರಂದು ಕೂಟುಹೊಳೆಯಲ್ಲಿ ಈಜಲು ತೆರಳಿ ಮುಳುಗಿ ಸಾವನ್ನಪ್ಪಿರುವದಾಗಿ ಆತನ ಜೊತೆಗೆ ಪಾರ್ಟಿ ಮಾಡಿದ್ದ ಸ್ನೇಹಿತರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಮೃತದೇಹದ ಮೇಲೆ ಗಾಯಗಳಿದ್ದ ಕಾರಣ, ಅಲ್ಲದೆ ಮೃತದೇಹದಲ್ಲಿ ನೀರು ಕುಡಿದ ಯಾವದೇ ಕುರುಹುಗಳಿಲ್ಲದ್ದರಿಂದ ಮೃತನ ಕುಟುಂಬಸ್ಥರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ದೂರು ನೀಡಿದರೂ ಪೊಲೀಸರು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಕೀಲ ಡಾ. ಯಾಲದಾಳು ಮನೋಜ್ ಬೋಪಯ್ಯ ಅವರ ಮೂಲಕ ನ್ಯಾಯಾಲಯದ ಮೊರೆಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಕೊಲೆ ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಮೊಕದ್ದಮೆ ದಾಖಲಾಗಿತ್ತು. ಈ ಬೆಳವಣಿಗೆಗಳ ನಡುವೆ ಮೃತನ ಪೋಷಕರು ಶವದ ಮರು ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡುವಂತೆ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮನವಿಗೂ ನ್ಯಾಯಾಲಯ ಒಪ್ಪಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜೆಎಂಎಫ್‍ಸಿ ನ್ಯಾಯಾಲಯದ ಆದೇಶದಂತೆ ಇಂದು ಗಾಳಿಬೀಡುವಿನ ರುದ್ರಭೂಮಿಯಲ್ಲಿ ಶವದ ಮರು ಮರಣೋತ್ತರ

(ಮೊದಲ ಪುಟದಿಂದ) ಪರೀಕ್ಷೆ ನಡೆಯಿತು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ. ಸುರೇಶ್ ಶೆಟ್ಟಿ ತಂಡ ಮರು ಮರಣೋತ್ತರ ಪರೀಕ್ಷೆಯನ್ನು ನಡೆಸಿತು. ಈ ಸಂದರ್ಭ ಉಪವಿಭಾಗಾಧಿಕಾರಿ ರಮೇಶ್ ಕೊನರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಸಿದ್ದಯ್ಯ, ಠಾಣಾಧಿಕಾರಿ ಚೇತನ್, ವಕೀಲರಾದ ಡಾ. ಯಾಲದಾಳು ಮನೋಜ್ ಬೋಪಯ್ಯ, ಮೃತನ ಕುಟುಂಬಸ್ಥರು, ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು. ಮರು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ತಂಡ ಮೃತದೇಹದ ತಲೆಯ ಭಾಗವನ್ನು ಹೆಚ್ಚಿನ ಪರೀಕ್ಷೆಗಾಗಿ ಮಂಗಳೂರಿಗೆ ಕೊಂಡೊಯ್ದಿದೆ.