ಮಡಿಕೇರಿ, ಮೇ 21: ಕೊಡಗಿನ ಪ್ರಮುಖ ತೀರ್ಥ ಕ್ಷೇತ್ರ ಹಾಗೂ ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಹಾಗೂ ದೋಷಗಳ ಪರಿಹಾರ ಸಂಬಂಧ ಇಂದು ಅಷ್ಟಮಂಗಲ ಪ್ರಶ್ನೆಗೆ ಚಾಲನೆ ದೊರೆಯಿತು. ದೇವಾಲಯ ವ್ಯವಸ್ಥಾಪನಾ ಸಮಿತಿ, ಅರ್ಚಕರು, ಜ್ಯೋತಿಷ್ಯರು, ಭಕ್ತರನ್ನು ಒಳಗೊಂಡಂತೆ ಪಯ್ಯವೂರಿನ ಎ.ವಿ. ನಾರಾಯಣ ಪುದುವಾಳ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ದೇವತಾ ಕಾರ್ಯ ಆರಂಭಗೊಂಡಿತು. ಶ್ರೀ ಅಗಸ್ತ್ಯೇಶ್ವರ ಸನ್ನಿಧಿಯ ಬಲಬದಿಯಲ್ಲಿ ದ್ವಾದಶ ರಾಶಿ ಚಕ್ರದೊಂದಿಗೆ ಸ್ವಸ್ತಿಕಮಧ್ಯೆ ಶಿವಪೂಜೆ ನೆರವೇರಿಸುವ ಮೂಲಕ ಸ್ವರ್ಣ ಪ್ರಶ್ನೆ ಇಡಲಾಯಿತು. ತಣ್ಣಿಮಾನಿಯ ಮಲ್ಲೇಶ್ ಎಂಬವರ ನಾಲ್ಕೂವರೆ ವರ್ಷದ ಬಾಲಕ ವಂಶಿತ್‍ನಿಂದ ವಿಶೇಷ ಪ್ರಾರ್ಥನೆ ಮುಖಾಂತರ ಸ್ವರ್ಣರಾಶಿ ನೋಡಲಾಯಿತು. ಈ ವೇಳೆ ಮಧ್ಯಾಹ್ನ 12.14ಕ್ಕೆ ಸ್ವರ್ಣಾರೂಢ ರಾಶಿ ತುಲಾವೆಂದು ಗೋಚರಿಸಿತು. ಶ್ರೀ ದಕ್ಷಿಣ ಮೂರ್ತಿಯ ಪ್ರಾರ್ಥನೆಯೊಂದಿಗೆ ಕ್ಷೇತ್ರಾದಿ ದೇವತೆ ಶ್ರೀ ಕಾವೇರಿ ಹಾಗೂ ಅಗಸ್ತ್ಯೇಶ್ವರ ಸಹಿತ ಪರಿವಾರ ದೈವಗಳ ಪ್ರಾರ್ಥನೆಯೊಂದಿಗೆ ಲಕ್ಷ್ಮೀ ಪ್ರಾಪ್ತಿಯ ಲಕ್ಷಣದೊಂದಿಗೆ, ಈಶಾನ್ಯ ದಿಕ್ಕಿಗೆ ಊಧ್ರ್ವಮುಖವಾಗಿ ಸಮೃದ್ಧಿ ಸೂಚಕ ಗುರು ಅನುಗ್ರಹ ಮತ್ತು ದೈವ ಪ್ರೇರಣೆಯ ಶುಭ ಫಲ ಎದುರಾಯಿತು.

ಆದಾಗ್ಯೂ ಭೂತಕಾಲ, ವರ್ತ ಮಾನ ಹಾಗೂ ಭವಿಷ್ಯತ್ ಕಾಲದಲ್ಲೂ ಅನೇಕ ದೋಷಗಳ ಸುಳಿವು ರಾಶಿ ಫಲದಲ್ಲಿ ಗೋಚರಿಸಿದ್ದು, ದೈವಾನುಗ್ರಹದಿಂದ ಎಲ್ಲವನ್ನು ಪರಿಹಾರ ರೂಪದಲ್ಲಿ ನೆರವೇರಿಸುವ ಆಶಯದಿಂದ ಪ್ರಶ್ನೆ ಮುಂದುವರಿಸುವ ಇಂಗಿತವನ್ನು ಈ ವೇಳೆ ದೈವಜ್ಞರು ವ್ಯಕ್ತಪಡಿಸಿದರು.

(ಮೊದಲ ಪುಟದಿಂದ)

ಇಂದಿನಿಂದ ಮೂರು ದಿವಸಗಳ ತನಕ ಮುಂದುವರಿಯಲಿರುವ ಅಷ್ಟಮಂಗಲ ಪ್ರಶ್ನೆಯಲ್ಲಿ, ಭಕ್ತಿ ಪೂರ್ವಕ ನಡೆಯೊಂದಿಗೆ ಎಲ್ಲರೂ ಏಖಮನಸ್ಕರಾಗಿ ಪ್ರಾರ್ಥಿಸಿಕೊಂಡು ಭವಿಷ್ಯದಲ್ಲಿ ಕ್ಷೇತ್ರದಲ್ಲಿ ಸಮಗ್ರ ಏಳಿಗೆ ಹಾಗೂ ಸದ್ಭಕ್ತರ ಸಹಿತ ನಾಡಿಗೆ ಶುಭಕಾರಕ ದೇವತಾನುಗ್ರಹಕ್ಕಾಗಿ ಪ್ರಾರ್ಥಿಸಿಕೊಂಡು ವಾಂಚಿತ ಪಲಸಿದ್ಧಿ ಕಂಡುಕೊಳ್ಳುವ ಸಂಕಲ್ಪ ಕೈಗೊಳ್ಳಲಾಯಿತು. ಈ ವೇಳೆ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಕಳಕಳಿಯ ನಿವೇದನೆಯೊಂದಿಗೆ, ಪ್ರತಿಯೊಬ್ಬರು ಅಷ್ಟಮಂಗಲ ಪ್ರಶ್ನೆಯ ಆಶಯ ಅರ್ಥೈಸಿಕೊಂಡು ವಿಮರ್ಶೆಯಲ್ಲಿ ಪಾಲ್ಗೊಂಡು ಸಮಸ್ಯೆಗಳನ್ನು, ಸಂಶಯಗಳನ್ನು ಪರಿಹರಿಸಲು ಸಹಕರಿಸಬೇಕೆಂದು ಕೇಳಿಕೊಂಡರು.

ಕೊಡವ - ಅಮ್ಮಕೊಡವ ಹಿತರಕ್ಷಣಾ ಸಂಘದ ಸಂಚಾಲಕ ಎಂ.ಬಿ. ದೇವಯ್ಯ ಪ್ರಶ್ನೆಯಲ್ಲಿ ಎದುರಾಗುವ ಸಂಗತಿಗಳಿಗೆ ಆ ಕೂಡಲೇ ಪರಿಹಾರವನ್ನು ಸೂಚಿಸುವಂತೆ ಸಲಹೆ ನೀಡಿದರು. ಈ ಬಗ್ಗೆ ಕಾಲಮಿತಿಯೊಂದಿಗೆ ಅಗತ್ಯ ವಿಮರ್ಶೆ ಮಾಡೋಣವೆಂದು ಚೋದ್ಯರಾದ ಮೈಸೂರಿನ ಉಪನ್ಯಾಸಕ ಎಂ. ಶ್ಯಾಮಸುಂದರ ಶಾಸ್ತ್ರಿ ಭರವಸೆ ನೀಡಿದರು.

ವಿದ್ವಾನ್ ಸುಬ್ರಮಣ್ಯ ಶರ್ಮಾ ಸೇರಿದಂತೆ ದೈವಜ್ಞರ ತಂಡದೊಂದಿಗೆ ಕ್ಷೇತ್ರ ಪುರೋಹಿತ ಪ್ರಶಾಂತ್ ಆಚಾರ್ ಪೂಜಾ ಕೈಂಕರ್ಯ ನೆರವೇರಿಸಿದರು. ಅರ್ಚಕ ಕುಟುಂಬದವರು ಪಾಲ್ಗೊಂಡಿದ್ದರು. ದೇವಾಲಯ ವ್ಯವಸ್ಥಾಪನಾ ಸಮಿತಿಯ ಕೋಡಿ ಮೋಟಯ್ಯ, ಮೀನಾಕ್ಷಿ, ಉದಿಯಂಡ ಸುಭಾಷ್ ಸೇರಿದಂತೆ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ಪಾರುಪತ್ಯೆಗಾರ ಪೊನ್ನಣ್ಣ, ಪ್ರಮುಖರಾದ ಕೋಡಿ ಪೊನ್ನಪ್ಪ, ವಿಠಲಾಚಾರ್ ಮೊದಲಾದವರು ಹಾಜರಿದ್ದರು.