ಮಡಿಕೇರಿ, ಮೇ 20: ಕೊಡಗಿನ ಕುಲಮಾತೆ, ಜೀವನದಿ ಖ್ಯಾತಿಯ ಕಾವೇರಿ ಉಗಮ ಸ್ಥಳ ತಲಕಾವೇರಿಯಿಂದ ಪೂಂಪ್‍ಹಾರ್ ತನಕ ಸಿಎನ್‍ಸಿ ವತಿಯಿಂದ ತಾ. 24 ರಂದು ಯಾತ್ರೆ ಆರಂಭಿಸಿ, ತಾ. 30 ರಂದು ಮುಕ್ತಾಯಗೊಳಿಸಲಾಗುವದು ಎಂದು ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ. ಈ ಸಂಬಂಧ ಅವರು ಕೆಳಗಿನಂತೆ ವಿವರಿಸಿದ್ದಾರೆ.ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ಕಲ್ಪಿಸುವ ಮಹೋದ್ದೇಶದಿಂದ ಜಗತ್ತಿನ ಧರ್ಮಪ್ರಜ್ಞೆಯನ್ನು ಜಾಗೃತಿಗೊಳಿಸಲು ಹಾಗೂ ನದಿಪಾತ್ರದ ಫಲಾನುಭವಿ ಜನರನ್ನು ಕಾವೇರಿ ರಕ್ಷಣೆಗೆ ಮುಂದಾಗಲು ಅಣಿಗೊಳಿಸುವ ಸಲುವಾಗಿ ಧಾರ್ಮಿಕ-ಆಧ್ಯಾತ್ಮಿಕ ಹಾಗೂ ರಾಜಕೀಯ-ಸಾಂಸ್ಕøತಿಕ ಯಾತ್ರೆಯು ತಲಕಾವೇರಿಯಿಂದ ಪೂಂಪ್‍ಹಾರ್‍ವರೆಗೆ ನಡೆಯಲಿದೆ.ದಕ್ಷಿಣಗಂಗೆ ಜೀವನದಿ ಕಾವೇರಿಯ ಉಗಮಸ್ಥಾನ ಕೊಡಗಾಗಿದ್ದು, (1956 ರ ನವೆಂಬರ್ 1 ರವರೆಗೆ ಸ್ವತಂತ್ರವಾಗಿದ್ದ ಕೊಡಗು ‘ಸಿ’ ರಾಜ್ಯ) ಜಲದಾತೆ ಕಾವೇರಿಯು ಲೋಕ ಪ್ರತೀತಿ ಇದ್ದು, ಭರತ ವರ್ಷದ ವೇದ ಕಾಲದ 7 ಪವಿತ್ರ ಜೀವನದಿಗಳಾದ ಗಂಗೆ, ಯಮುನೆ, ಸಿಂಧು, ನರ್ಮದೆ, ಗೋದಾವರಿ, ಸರಸ್ವತಿಯೊಂದಿಗೆ ಕಾವೇರಿಯೆಂದು ಜಗತ್ಪ್ರಸಿದ್ಧವಾಗಿದೆ. ಇಂದು ಇಂತಹ ಜೀವನದಿ ಆಪತ್ತಿನಲ್ಲಿ ಸಿಲುಕಿದ್ದು, ಇನ್ನೂ ಕೆಲವೇ ವರ್ಷಗಳಲ್ಲಿ ಸರಸ್ವತಿ ನದಿಯಂತೆ ಅದೃಶ್ಯವಾಗುವ ಆತಂಕವಿದೆ. ಅದನ್ನು ಪುನರುಜ್ಜೀವನಗೊಳಿಸಿ, ಕಾವೇರಿಯು ಪೂರ್ಣ ಪ್ರಮಾಣದಲ್ಲಿ ಮೈದುಂಬಿ ಸರ್ವ ಋತುಗಳಲ್ಲೂ ಹರಿದು, ಪೂಂಪ್‍ಹಾರ್ ಬಳಿ ಬಂಗಾಳಕೊಲ್ಲಿ ಸೇರುವಲ್ಲಿಯವರೆಗೆ ಅದರ ತಟದ ಸಕಲ ಜೀವಿಗಳಿಗೂ, ಮಾನವರಿಗೂ ಚಿರಂತನವಾಗಿ ಅನ್ನದಾತೆಯಾಗಿ ಮುಂದುವರಿಯಬೇಕಾಗಿದೆ. ಜಗನ್ಮಾತೆಯಾದ ಕಾವೇರಿ ತನ್ನ ಆಧ್ಯಾತ್ಮಿಕ ಧೀಶಕ್ತಿಯನ್ನು ಮತ್ತು ತಪೋಬಲವನ್ನು ಸರ್ವ ಕಾಲದಲ್ಲೂ ಸೃಷ್ಟಿ ಚಕ್ರ ಉರುಳುತ್ತಿರುವಲ್ಲಿಯವರೆಗೆ ಜನಕೋಟಿಗೆ ಧಾರೆಯೆರೆಯಬೇಕು ಈ ಜೀವನದಿ ಕಾವೇರಿಗೆ ರಾಜ್ಯಾಂಗದತ್ತ ಭದ್ರತೆ ಕಲ್ಪಿಸಿದರೆ, ಅದನ್ನು ಜೋಪಾನ ಮಾಡಿ ಮತ್ತಷ್ಟು

(ಮೊದಲ ಪುಟದಿಂದ) ಜನಪಯೋಗಿಯಾಗಿ ಮುಂದಿನ ಪೀಳಿಗೆಯ ಭವಿಷ್ಯತ್ತಿಗೆ ಬಳುವಳಿ ಯಾಗಿ ನಾವು ಬಿಟ್ಟುಹೋಗಬಹುದು. ಈಗಾಗಲೇ ಗಂಗಾ, ಯಮುನಾ ಮತ್ತು ನರ್ಮದಾ ನದಿಗಳಿಗೆ ಅನುಕ್ರಮವಾಗಿ ಉತ್ತರಖಂಡ್ ಸರ್ಕಾರ ಮತ್ತು ಮಧ್ಯಪ್ರದೇಶ ಸರ್ಕಾರಗಳು ‘ಜೀವಂತ ವ್ಯಕ್ತಿಯ’ ಶಾಸನಬದ್ಧ ಸ್ಥಾನಮಾನ ಕಲ್ಪಿಸಿದೆ. ಅದರಂತೆ ಜೀವನದಿ ಕಾವೇರಿಗೂ ಈ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ಕಲ್ಪಿಸಬೇಕೆಂದು 2017 ರಿಂದ ಸತತವಾಗಿ ಸಿ.ಎನ್.ಸಿ. ಸಂಘಟನೆ ಜ್ಞಾಪನಾಪತ್ರವನ್ನು ಸವೋಚ್ಚ ಆಡಳಿತ ಮತ್ತು ವಿಶ್ವ ಸಂಸ್ಥೆಗೂ ಸಲ್ಲಿಸುತ್ತಾ ಬಂದಿದೆ.

ಕಾವೇರಿ ನದಿ ಪಾತ್ರದ ಸಮಸ್ತ ಜನರಿಗೆ ಇದರ ಮಹತ್ವದ ಅರಿವು ಮೂಡಿಸಲು, ತಲಕಾವೇರಿಯಿಂದ-ಪೂಂಪ್‍ಹಾರ್‍ವರೆಗೆ ಸಿ.ಎನ್.ಸಿ. ವಾಹನ ಜಾಥಾದ ಮೂಲಕ ಚಾರಿತ್ರಿಕ ಕಾವೇರಿ ಯಾತ್ರೆ ಹಮ್ಮಿಕೊಂಡಿದೆ. ಈ ಸಂಬಂಧ ತಾ. 24 ರಂದು ಕಾವೇರಿ ಸನ್ನಿಧಿಯಲ್ಲಿ ಅಗಸ್ತ್ಯ-ಕಾವೇರಿ ವಿಶೇಷ ಪೂಜೆ ಸಲ್ಲಿಸಿ, ಶುಭಾರಂಭಗೊಳ್ಳಲಿರುವ ಈ ಕಾವೇರಿಯಾತ್ರೆ ನಾಪೋಕ್ಲು-ಮಡಿಕೇರಿ, ಮೂರ್ನಾಡು, ಗೋಣಿಕೊಪ್ಪಲು, ಸಿದ್ದಾಪುರ, ಕುಶಾಲನಗರ ಮಾರ್ಗವಾಗಿ ಮೈಸೂರಿಗೆ ತೆರಳಿ ಅಲ್ಲಲ್ಲಿ ಸಭೆ ನಡೆಸಿ, ಮುಂದೆ ಹೊಗೈನೆಕಲ್ ಮೂಲಕ ತಾ. 26 ರಂದು ತಮಿಳುನಾಡು ಪ್ರವೇಶಿಸಿ, ಮುಂದೆ ಕಾವೇರಿ ನದಿ ಪಾತ್ರದ ಜಿಲ್ಲೆಗಳನ್ನು ಹಾದು ಅಂತಿಮವಾಗಿ ಕಾವೇರಿ ನದಿ ಮತ್ತು ಬಂಗಾಳಕೊಲ್ಲಿ ಸಂಗಮಿಸುವ ಪೂಂಪ್‍ಹಾರ್‍ನಲ್ಲಿ ಸಮಾವೇಶಗೊಳ್ಳಲಿದೆ. ಅಲ್ಲಿ ಸಾಗರ ಮತ್ತು ಕಾವೇರಿ ನದಿಗೆ ಪೂಜೆ ಸಲ್ಲಿಸಿ, ಅಲ್ಲಿ ಸಮಾವೇಶ ನಡೆಸಿ, ಕಾರ್ಯಕ್ರಮ ಸಮಾರೋಪಗೊಳ್ಳಲಿದೆ.