ಬೆಂಗಳೂರು, ಮೇ 20: ಬುಧವಾರದಂದು ನೂತನ ಮುಖ್ಯಮಂತ್ರಿ ಯಾಗಿ ಜೆಡಿಎಸ್ ನೇತಾರ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸೋಮವಾರ ರಾಜೀವ್ ಗಾಂಧಿ ಪುಣ್ಯ ತಿಥಿ ಪ್ರಯುಕ್ತ ಆ ದಿನ ನಿಗದಿಗೊಂಡಿದ್ದ ಪ್ರಮಾಣ ವಚನ ಕಾರ್ಯಕ್ರಮವನ್ನು ಬುಧವಾರಕ್ಕೆ ಮುಂದೂಡಲಾಗಿದೆ. ದೇಶದಾದ್ಯಂತ ತೃತೀಯ ರಂಗ ಅಥವಾ ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳ ಮಹಾ ಮೈತ್ರಿಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ, ಇತರ ವಿರೋಧ ಪಕ್ಷಗಳ ರಾಷ್ಟ್ರೀಯ ನಾಯಕರುಗಳು ಈ ಸಮಾರಂಭಕ್ಕೆ ಕುಮಾರಸ್ವಾಮಿ ಅವರಿಂದ ಆಹ್ವಾನಿತ ರಾಗಿದ್ದು ಭಾಗವಹಿಸಲಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಅಖಿಲೇಶ್ ಯಾದವ್, ಮಾಯಾವತಿ, ತೆಲಂಗಾಣ ಸಿಎಂ ಕೆಸಿ ಚಂದ್ರಶೇಖರ್ ರಾವ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್, ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರಿಂದರ್ ಸಿಂಗ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ (ಮೊದಲ ಪುಟದಿಂದ) ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.ಇದೇ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ದೇವೇಗೌಡ, ಸಿನಿಮಾ ನಟ ಮತ್ತು ರಾಜಕಾರಣಿ ಕಮಲ್ ಹಾಸನ್, ಕಾಂಗ್ರೆಸ್ ಹಿರಿಯ ನಾಯಕರು, ರಾಜ್ಯ ಕಾಂಗ್ರೆಸ್ ನಾಯಕರು ಕೂಡ ಭಾಗವಹಿಸಲಿದ್ದಾರೆ.

ಈಗಾಗಲೇ ಕಂಠೀರವ ಕ್ರೀಡಾಂಗಣವನ್ನು ಪ್ರಮಾಣ ವಚನ ಕಾರ್ಯಕ್ರಮಕ್ಕೆಂದು ಕಾಯ್ದಿರಿಸಲಾಗಿದೆ. ಕಾರ್ಯಕ್ರಮಕ್ಕೆ ಕರೆಯಬೇಕಿರುವ ಅತಿಥಿಗಳ ಪಟ್ಟಿಯನ್ನೂ ಎರಡೂ ಪಕ್ಷಗಳ ನಾಯಕರು ಅಂತಿಮಗೊಳಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ 24 ಗಂಟೆಗಳಲ್ಲಿಯೇ ವಿಶ್ವಾಸಮತ ಸಾಬೀತುಪಡಿಸುತ್ತೇನೆ ಎಂದು ನಿಯೋಜಿತ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, ಸೋಮವಾರ ದೆಹಲಿಗೆ ತೆರಳಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಾಗೂ ಮಂತ್ರಿಮಂಡಲ ಕುರಿತು ಚರ್ಚೆ ನಡೆಸಲಿದ್ದೇನೆ ಎಂದಿದ್ದಾರೆ.

ಕಾಂಗ್ರೆಸ್ ಹೈಕಮಾಂಡಿಗೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ನೀಡಲಿದ್ದೇನೆ ಎಂದು ಹೇಳಿರುವ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ್ದಾರೆ.

ಸೋಮವಾರ ಬೆಳಿಗ್ಗೆ ದೆಹಲಿಗೆ ತೆರಳಿ ಕಾಂಗ್ರೆಸ್ ವರಿಷ್ಠರ ಜೊತೆ ಮಾತುಕತೆ ನಡೆಸಲಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು. ಅಶೋಕ ಹೋಟೆಲ್‍ನಲ್ಲಿ ಎರಡೂ ಪಕ್ಷದ ಶಾಸಕರು, ಮುಖಂಡರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ ಸಭೆಯಲ್ಲಿ ಶಿಸ್ತು ಸಮಿತಿ ಹಾಗೂ ಸಮನ್ವಯ ಸಮಿತಿಯ ಬಗ್ಗೆಯೂ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿಕೆಶಿ, ಪರಮೇಶ್ವರ್, ಸಿಂಧ್ಯ, ಗುಲಾಂ ನಬಿ ಆಜಾದ್ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

ಸಚಿವ ಸಂಪುಟದ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಬುಧವಾರದಂದು ಎಷ್ಟು ಜನ ಸಚಿವ ಸಂಪುಟ ಸೇರಬೇಕು ಹಾಗೂ ಯಾರ್ಯಾರು ಸೇರಬೇಕು ಎಂಬ ಬಗ್ಗೆಯೂ ನಿರ್ಣಯ ಮಾಡಲಾಗಿದೆ.