ನಕ್ಸಲರ ಧಾಳಿಗೆ 6 ಸಿಬ್ಬಂದಿ ಬಲಿ ದಾಂತೆವಾಡ, ಮೇ 20: ನಕ್ಸಲರು ಹುದುಗಿಟ್ಟಿದ್ದ ಕಚ್ಚಾ ಬಾಂಬ್ ಸ್ಫೋಟಗೊಂಡ ಪರಿಣಾಮ ಆರು ಮಂದಿ ಭದ್ರತಾ ಸಿಬ್ಬಂದಿ ಮೃತಪಟ್ಟ ದುರ್ಘಟನೆ ಛತ್ತೀಸ್ಗಡದ ಚೋಲನಾರ್ ಗ್ರಾಮದಲ್ಲಿ ಭಾನುವಾರ ನಡೆದಿದೆ. ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರ ಪೈಕಿ ಮೂವರು ಛತ್ತೀಸ್ಗಡ ಸಶಸ್ತ್ರ ಪಡೆಯ ಹಾಗೂ ಇಬ್ಬರು ಜಿಲ್ಲಾ ಪಡೆಯ ಸಿಬ್ಬಂದಿ ಆಗಿದ್ದಾರೆ. ಇನ್ನೊಬ್ಬರ ಕುರಿತಾದ ವಿವರ ಇನ್ನೂ ಲಭ್ಯವಾಗಿಲ್ಲ. ಕೇಂದ್ರ ಮೀಸಲು ಪೆÇಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಎಎನ್‍ಐ ವರದಿ ಮಾಡಿದೆ. ಚೊಲನಾರ್ ಸಮೀಪದ ರಸ್ತೆ ಕಾಮಗಾರಿ ನಡೆಯುತ್ತಿರುವ ಪ್ರದೇಶವೊಂದಕ್ಕೆ ಸಿಬ್ಬಂದಿ ಜೀಪಿನಲ್ಲಿ ತೆರಳುತ್ತಿದ್ದಾಗ ಬಾಂಬ್ ಸ್ಫೋಟಗೊಂಡಿದೆ. ನಕ್ಸಲರಿಗಾಗಿ ಶೋಧ ಕಾರ್ಯ ಪ್ರಗತಿಯಲ್ಲಿದೆ. ಸ್ಫೋಟ ಪ್ರಬಲ ತೀವ್ರತೆಯಿಂದ ಕೂಡಿದ್ದಿರಬಹುದು. ಆದರೆ, ಖಚಿತ ಮಾಹಿತಿ ತನಿಖೆಯ ನಂತರವಷ್ಟೇ ತಿಳಿದುಬರಲಿದೆ ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆ ವಿಭಾಗದ ಡಿಐಜಿ ಸುಂದರ್ ರಾಜ್ ತಿಳಿಸಿದ್ದಾರೆ.
ದೇವಾಲಯಕ್ಕಾಗಿ ಪಾಕ್‍ನಿಂದ ಅನುದಾನ
ಇಸ್ಲಾಮಾಬಾದ್, ಮೇ 20: ರಾವಲ್ಪಿಂಡಿ ನಗರದಲ್ಲಿರುವ ಕೃಷ್ಣನ ದೇವಸ್ಥಾನದ ವಿಸ್ತರಣೆಗೆ ಪಾಕಿಸ್ತಾನದ ಪಂಜಾಬ್ ಸರ್ಕಾರ 20 ಮಿಲಿಯನ್ ಅನುದಾನ ಬಿಡುಗಡೆ ಮಾಡಿದೆ. ದೇವಸ್ಥಾನದಲ್ಲಿ ನಡೆಯುವ ಉತ್ಸವಗಳು ಮತ್ತು ಧಾರ್ಮಿಕ ಆರಚಣೆ ಸಮಯದಲ್ಲಿ ಹಿಂದೂ ಭಕ್ತರಿಗೆ ಸೌಕರ್ಯವನ್ನು ಹೆಚ್ಚಿಸುವ ಹಿನ್ನೆಲೆ ಪಂಜಾಬ್ ಸರ್ಕಾರ ಈ ನಿರ್ಣಯಕ್ಕೆ ಮುಂದಾಗಿದೆ. ಇನ್ನು ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್ ಅವಳಿ ನಗರಗಳಲ್ಲಿ ಇದೊಂದು ಧಾರ್ಮಿಕ ಕ್ಷೇತ್ರವಾಗಿರುವದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವದರಿಂದ ಅವರಿಗೆ ಹೆಚ್ಚಿನ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ 20 ಮಿಲಿಯನ್ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಇಟಿಪಿಬಿ ಉಪ ಆಡಳಿತಾಧಿಕಾರಿ ಮೊಹಮ್ಮದ್ ಆಸೀಫ್ ಹೇಳಿದ್ದಾರೆ. ಪ್ರಾಂತೀಯ ಅಸೆಂಬ್ಲಿಯ ಸದಸ್ಯರು ಮನವಿ ಮೇರೆಗೆ ಆಸೀಫ್ ಅವರು ಈಗಾಗಲೇ ದೇವಸ್ತಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವಸ್ಥಾನ ವಿಸ್ತರಣೆ ಹಿನ್ನೆಲೆ ದೇವಸ್ಥಾನದಲ್ಲಿದ್ದ ವಿಗ್ರಹಗಳನ್ನು ಕೊಠಡಿಯೊಂದರಲ್ಲಿ ಇರಿಸಲಾಗಿದೆ.
ಬಿಎಸ್‍ಎಫ್ ಧಾಳಿ : ಪಾಕ್ ಬಂಕರ್ ನಾಶ
ನವದೆಹಲಿ, ಮೇ 20: ಪಾಕಿಸ್ತಾನದ ಗಡಿಗುಂಟ ಬಿಎಸ್‍ಎಫ್ ಧಾಳಿ ತೀವ್ರಗೊಳಿಸಿದೆ. ಅಖ್ನೂರ್ ವಲಯದಲ್ಲಿ ಬಿಎಸ್‍ಎಫ್ ನಡೆಸಿದ ರಾಕೆಟ್ ಧಾಳಿಗೆ ಪಾಕಿಸ್ತಾನದ ಬಂಕರ್ ನಾಶವಾಗಿದೆ. ಈ ಧಾಳಿಯ ನಂತರ ಜಮ್ಮುವಿನಲ್ಲಿರುವ ಬಿಎಸ್‍ಎಫ್ ಕೇಂದ್ರಕ್ಕೆ ಕರೆ ಮಾಡಿರುವ ಪಾಕಿಸ್ತಾನ್ ರೇಂಜರ್ಸ್ ಅಧಿಕಾರಿಗಳು ಕದನ ವಿರಾಮಕ್ಕೆ ವಿನಂತಿಸಿದ್ದಾರೆ. ‘ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನ ನಡೆಸುತ್ತಿದ್ದ ಅಪ್ರಚೋದಿತ ಗುಂಡಿನ ಧಾಳಿಗೆ ಬಿಎಸ್‍ಎಫ್ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಪಾಕಿಸ್ತಾನಕ್ಕೆ ಇದರಿಂದ ತೀವ್ರಹಾನಿಯಾಗಿತ್ತು. ಬೇರೆ ದಾರಿ ಕಾಣದೆ ಅವರು ಕದನ ವಿರಾಮಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ಬಿಎಸ್‍ಎಫ್‍ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಪಾಕಿಸ್ತಾನವು ಸಾಮಾನ್ಯವಾಗಿ ಪ್ರತಿವರ್ಷ ಬೆಳೆಕೊಯ್ಲು ಮುಗಿದ ನಂತರ ಧಾಳಿ ನಡೆಸುತ್ತದೆ.
ಸಚಿವ ನಿತಿನ್ ಗಡ್ಕರಿ ವಿವಾದ ಸೃಷ್ಟಿ
ಬೇತುಲ್, ಮೇ 20: ಭ್ರಷ್ಟ ರಸ್ತೆ ಗುತ್ತಿಗೆದಾರರ ಮೇಲೆ ಬುಲ್ಡೋಜರ್ ಓಡಿಸಲಾಗುವದು ಎಂದು ಹೇಳುವ ಮೂಲಕ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಿವಾದ ಸೃಷ್ಟಿಸಿದ್ದಾರೆ. ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ನಡೆದ ಅಸಂಘಟಿತ ಕಾರ್ಮಿಕರ ಕಾರ್ಯಕ್ರಮದಲ್ಲಿ ರಸ್ತೆ ಗುತ್ತಿಗೆದಾರರು ಭ್ರಷ್ಟಾಚಾರದಲ್ಲಿ ತೊಡಗಿಕೊಂಡರೆ ಅವರ ಮೇಲೆ ಬುಲ್ಡೋಜರ್ ಓಡಿಸಲಾಗುವುದು ಎಂದು ಹೇಳಿದ್ದಾರೆ. ಗುತ್ತಿಗೆದಾರರು ರಸ್ತೆ ಕಾಮಗಾರಿಗಳು ಸರಿಯಾಗಿ ನಡೆಯುತ್ತಿದೆಯೋ ಇಲ್ಲವೋ ಎಂಬದನ್ನು ನೋಡಿಕೊಳ್ಳಬೇಕು. ಒಂದು ವೇಳೆ ಅವರು ತಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಅವರನ್ನು ಬುಲ್ಡೋಜರ್ ಎದುರು ಎಸೆಯುತ್ತೇನೆ ಎಂದು ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ. ರಸ್ತೆ ಗುತ್ತಿಗೆದಾರರು ನಡೆಸುವ ಭ್ರಷ್ಟಾಚಾರವನ್ನು ಸಹಿಸಲು ಸಾಧ್ಯವಿಲ್ಲ. ಕಾಮಗಾರಿಗೆ ಮಂಜೂರಾಗುವ ಹಣವು ಗುತ್ತಿಗೆದಾರರಿಗೆ ಸೇರಿದ್ದಲ್ಲ, ದೇಶದ ಬಡವರಿಗೆ ಸೇರಿದ್ದು ಎಂದು ಗಡ್ಕರಿ ಹೇಳಿದರು.
ಸರ್ಕಾರ ಶೀಘ್ರ ಪತನ : ಡಿವಿಎಸ್ ಭವಿಷ್ಯ
ಮಂಡ್ಯ, ಮೇ 20: ಹಾಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಆಯಸ್ಸು ಕೇವಲ ಮೂರು ತಿಂಗಳು ಮಾತ್ರ. ಅಥವಾ ಬಹುಮತ ಸಾಬೀತಿಗೂ ಮುನ್ನವೇ ಸರ್ಕಾರ ಪತನವಾದರೂ ಅಚ್ಚರಿ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸದಾನಂದಗೌಡ ಅವರು, ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಆಯಸ್ಸು ಕೇವಲ 3 ತಿಂಗಳ ಮಾತ್ರ.. ಅಥವಾ ಅದಕ್ಕೂ ಮುನ್ನವೇ ಅಂದರೆ ಬಹುಮತ ಸಾಬೀತಿಗೂ ಮುನ್ನವೇ ಸರ್ಕಾರ ಪತನವಾದರೂ ಅಚ್ಚರಿ ಇಲ್ಲ. ಮಂತ್ರಿ ಮಂಡಲ ರಚಿಸುವ ಸಂದರ್ಭದಲ್ಲಿ ಇವರ ಕಿತ್ತಾಟ ಆರಂಭವಾಗುತ್ತದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ. ಕಾಂಗ್ರೆಸ್, ಜೆಡಿಎಸ್ ವಾಚಾಮಗೋಚರವಾಗಿ ಕಚ್ಚಾಡಿದ್ದರು. ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ ಹಾವು-ಮುಂಗಿಸಿಯಂತಿದ್ದವರು. ಅಧಿಕಾರಕ್ಕಾಗಿ ಈಗ ಒಂದಾಗಿದ್ದಾರೆ. ಕಾಂಗ್ರೆಸ್ ಜತೆ ಜೆಡಿಎಸ್ ಹೋಗಲ್ಲ ಎಂದು ಕೊಂಡಿದ್ದೆವು. ಪ್ರಜಾಪ್ರಭುತ್ವ ಧಿಕ್ಕರಿಸಿ ಕಾಂಗ್ರೆಸ್ ಜೊತೆ ಅಧಿಕಾರಕ್ಕಾಗಿ ಒಂದಾಗಿದ್ದಾರೆ. ನಮಗೆ ಜೆಡಿಎಸ್-ಕಾಂಗ್ರೆಸ್ ಕೊಳಕು ರಾಜಕೀಯ ಗೊತ್ತಾದ ಮೇಲೆ ನಾವು ಬಹುಮತ ಸಾಬೀತು ಮಾಡಲಿಲ್ಲ ಎಂದರು.
24 ಗಂಟೆಗಳಲ್ಲಿ ಹೆಚ್‍ಡಿಕೆ ವಿಶ್ವಾಸಮತ
ಬೆಂಗಳೂರು, ಮೇ 20: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ 24 ಗಂಟೆಗಳಲ್ಲಿಯೇ ವಿಶ್ವಾಸಮತ ಸಾಬೀತುಪಡಿಸುತ್ತೇನೆ ಎಂದು ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನಾಳೆ ದೆಹಲಿಗೆ ತೆರಳಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಾಗೂ ಮಂತ್ರಿಮಂಡಲ ಕುರಿತು ಚರ್ಚೆ ನಡೆಸಲಿದ್ದೇನೆ. ಅವರಿಗೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ನೀಡಲಿದ್ದೇನೆ ಎಂದು ಹೇಳಿದರು. ಅವರು ಇಂದು ಬೆಳಿಗ್ಗೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ಹೊರಬಂದ ನಂತರ ಇಂದು ತಮಿಳುನಾಡಿನ ತಿರುಚ್ಚಿಯ ಶ್ರೀರಂಗಂ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ನಂತರ ನಾಳೆ ಬೆಳಿಗ್ಗೆ ದೆಹಲಿಗೆ ತೆರಳಿ ಕಾಂಗ್ರೆಸ್ ವರಿಷ್ಠರ ಜೊತೆ ಮಾತುಕತೆ ನಡೆಸಲಿದ್ದೇನೆ ಹೆಚ್‍ಡಿಕೆ ತಿಳಿಸಿದರು.
ಶೆಡ್‍ನಲ್ಲಿ ವಿ.ವಿ. ಪ್ಯಾಟ್‍ಗಳು ಪತ್ತೆ
ವಿಜಯಪುರ, ಮೇ 20: ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಹೊರ ವಲಯದಲ್ಲಿರುವ ಶೆಡ್ವೊಂದರಲ್ಲಿ ಭಾನುವಾರ ಎಂಟು ವಿ.ವಿ. ಪ್ಯಾಟ್‍ಗಳು (ಮತ ಖಾತ್ರಿ ಯಂತ್ರ) ಖಾಲಿ ಇರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮನಗೂಳಿ ಬಳಿ ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿ ಆರು ತಿಂಗಳಿಂದ ನಡೆದಿದೆ. ಬಿಹಾರದ ಕಾರ್ಮಿಕರು ಇಲ್ಲಿಯೇ ಶೆಡ್ ನಿರ್ಮಿಸಿಕೊಂಡು ವಾಸವಿದ್ದು, ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ವಿ.ವಿ. ಪ್ಯಾಟ್‍ಗಳು ಪತ್ತೆಯಾಗಿರುವದು, ಅವರು ವಾಸವಿರುವ ಈ ಶೆಡ್‍ನಲ್ಲಿಯೇ. ಸುದ್ದಿ ತಿಳಿಯುತ್ತಿದ್ದಂತೆಯೇ, ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಗೆ ಮುಂದಾದರು. ಆದರೆ ಈ ವೇಳೆಗಾಗಲೇ ಅಲ್ಲಿ ಜಮಾಯಿಸಿದ್ದ ಬಸವನಬಾಗೇವಾಡಿ, ವಿಜಯಪುರ ನಗರ, ಬಬಲೇಶ್ವರ, ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್, ಕಾಂಗ್ರೆಸ್, ಬಿಜೆಪಿಯ ಪರಾಜಿತ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೇರಾವ್ ಹಾಕಿದರು. ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ಮರು ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.