ಮಡಿಕೇರಿ, ಮೇ 20: ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುವ ವಿಭಾಗಗಳಲ್ಲಿ ಒಂದಾದ ನಾಲ್ಕುನಾಡು ವ್ಯಾಪ್ತಿಯ ನಾಪೋಕ್ಲುವಿನಲ್ಲಿ ಕಳೆದ ರಾತ್ರಿಯಿಡೀ ಜಿಟಪಟ ಮಳೆ. ಜನರಲ್ ತಿಮ್ಮಯ್ಯ ಕ್ರೀಡಾಂಗಣವನ್ನು ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಅಚ್ಚುಕಟ್ಟಾಗಿ ಸಿದ್ದಪಡಿಸಿದ್ದ ಈ ಬಾರಿಯ ಆಯೋಜಕರಾದ ಕುಲ್ಲೇಟಿರ ಕುಟುಂಬಸ್ಥರಲ್ಲಿ ತಮ್ಮ ಪ್ರಯತ್ನಕ್ಕೆ ಮಳೆರಾಯ ಎಲ್ಲಿ ಅಡ್ಡಿಪಡಿಸುತ್ತಾನೋ ಎಂಬ ಆತಂಕದ ಛಾಯೆಯ ನಡುವೆ ಕೌಟುಂಬಿಕ ಹಾಕಿ ಉತ್ಸವದ ಫೈನಲ್ ಸಮರದ ಸಮಯ ಬಂದೇ ಬಿಟ್ಟಿತು.ತಾ.20ರ ಭಾನುವಾರ ಬೆಳಗ್ಗಿನ ಜಾವದಿಂದಲೇ ಮೋಡ ಕವಿದ ವಾತಾವರಣ ಪ್ರೇಕ್ಷಕರು ಜಮಾಯಿಸುವರೇ... ಇಲ್ಲವೇ... ಸಿದ್ಧಪಡಿಸಿದ್ದ ಬೃಹತ್ ಗ್ಯಾಲರಿ ಎಲ್ಲಾದರೂ ಖಾಲಿ ಖಾಲಿಯಾಗಿ ಕಾಣಲಿದೆಯೇ ಎಂಬ ಆತಂಕವನ್ನು ಸಂಘಟಕರಲ್ಲಿ ಹಾಗೂ ಹಾಕಿ ಅಭಿಮಾನಿಗಳಲ್ಲಿ ಸೃಷ್ಟಿಸಿತ್ತು. ಆದರೆ ಹೊತ್ತು ಸರಿದಂತೆ ಎಲ್ಲವೂ ತಿಳಿಯಾಗತೊಡಗಿತು. ಹೆಚ್ಚಿನ ಪ್ರಖರತೆ ಇಲ್ಲದಿದ್ದರೂ ಸೂರ್ಯನ ಕಿರಣ ಮೋಡದ ಮರೆಯಿಂದ ಗೋಚರಿಸಲಾರಂಭಿಸಿದಾಗ ತನ್ನಿಂತಾನೆ ಹಾಕಿ ಅಭಿಮಾನಿಗಳ ವದನವೂ ಅರಳತೊಡಗಿತು. ತಂಡೋಪತಂಡವಾಗಿ ಜನರೂ ಮಹಿಳೆಯರು, ಮಕ್ಕಳು, ವೃದ್ಧರೆನ್ನದೆ ಆಗಮಿಸಲಾರಂಭಿಸಿದರು. ಊಹಿಸಿದ್ದಕ್ಕಿಂತಲೂ ಕ್ಷಿಪ್ರಗತಿಯಲ್ಲಿ ಗ್ಯಾಲರಿಯೂ ಪ್ರೇಕ್ಷಕರಿಂದ ತುಂಬಿ ತುಳುಕಲಾರಂಭಿಸಿತಲ್ಲದೆ, ಕಿಕ್ಕಿರಿದು ನೆರೆದ ಕ್ರೀಡಾಂಗಣದಲ್ಲಿ 22ನೆಯ ವರ್ಷದ ಕೌಟುಂಬಿಕ ‘ಹಾಕಿ ನಮ್ಮೆ’ ಯಾವದೇ ಅಡಚಣೆಗಳಿಲ್ಲದೆ ಹಾಕಿ (ಮೊದಲ ಪುಟದಿಂದ) ಅಭಿಮಾನಿಗಳಿಗೆ ರೋಮಾಂಚಕ ಆಟವೊಂದರ ಸವಿಯನ್ನು ಉಣಬಡಿಸಿತು.

22ನೆಯ ವರ್ಷದ ಫೈನಲ್‍ಗೆ ರಹದಾರಿ ಪಡೆದಿದ್ದು, ಕಳೆದ ಬಾರಿಯ ಚಾಂಪಿಯನ್ ಚೇಂದಂಡ ಹಾಗೂ ಮಾಜಿ ಚಾಂಪಿಯನ್ ಅಂಜಪರವಂಡ ಕುಟುಂಬ ತಂಡ ಎರಡೂ ಬಲಿಷ್ಟ ತಂಡಗಳೇ ಆಗಿದ್ದರಿಂದ ಸಹಜವಾಗಿ ಜನತೆ ರೋಚಕ ಪಂದ್ಯವೊಂದರ ನಿರೀಕ್ಷೆಯಲ್ಲಿದ್ದರು. ಇತ್ತಂಡಗಳಲ್ಲೂ ಅನುಭವಿ ಆಟಗಾರರು ಚೇಂದಂಡ ತಂಡ ಯುವ ಆಟಗಾರರನ್ನು ಹೊಂದಿದ್ದರೆ ಅಂಜಪರವಂಡ ತಂಡದಲ್ಲಿಯೂ ಸ್ಟಾರ್ ಆಟಗಾರರಿದ್ದರು. ಅದರಲ್ಲೂ ಎರಡು ತಂಡಗಳಲ್ಲಿ ಭಾರತವನ್ನು ಒಲಿಂಪಿಕ್ಸ್‍ನಲ್ಲಿ ಪ್ರತಿನಿಧಿಸಿರುವ ಇಬ್ಬರು ಆಟಗಾರರು ಎದುರಾಳಿಗಳಾಗಿದ್ದರು.

ಅಂಜಪರವಂಡ ತಂಡ ಈ ಹಿಂದೆ ಎರಡು ಬಾರಿ ಚಾಂಪಿಯನ್ ಹಾಗೂ ಎರಡು ಬಾರಿ ರನ್ನರ್ಸ್ ಪ್ರಶಸ್ತಿ ಗಳಿಸಿದ್ದ ಅನುಭವಿ ತಂಡವಾದರೆ ಯುವ ಆಟಗಾರರನ್ನು ಹೊಂದಿದ್ದ ಕಳೆದ ವರ್ಷದ ಬಿದ್ದಾಟಂಡ ಕಪ್ ಪ್ರಶಸ್ತಿ ವಿಜೇತ ಚೇಂದಂಡ ಆಟಗಾರರು ಈ ಪಂದ್ಯದಲ್ಲಿ ಸೆಣಸಿದರು. ಆದರೆ, ಚೇಂದಂಡ ಹುಡುಗರು ಅಂಜಪರವಂಡ ತಂಡದ ವಿರುದ್ಧ ಅಂಜಲಿಲ್ಲ. ಸಮರ್ಥ ಹೋರಾಟವನ್ನು ನಡೆಸುವ ಮೂಲಕ ಸತತ ಎರಡನೇ ಬಾರಿಗೆ ಅದರಲ್ಲೂ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿಯೇ ಮತ್ತೆ ಚಾಂಪಿಯನ್ ಪಟ್ಟ ಧರಿಸಿತು.

2-0 ಗೋಲಿನ ಅಂತರದಿಂದ ಚೇಂದಂಡ ತಂಡ ಜಯಭೇರಿ ಬಾರಿಸುವದರೊಂದಿಗೆ ಮತ್ತೆ ಪ್ರಶಸ್ತಿ ಗಳಿಸಿ ಚಾಂಪಿಯನ್ ಆಗುವ ಆಸೆಯಿಂದ ಅಂಜಪರವಂಡ ತಂಡ ನಿರಾಸೆ ಅನುಭವಿಸಿತು. ಅಂಜಪರವಂಡ ಗೋಲ್ ಕೀಪರ್ ಒಲಿಂಪಿಯನ್ ಡಾ. ಎ.ಬಿ. ಸುಬ್ಬಯ್ಯ ಅವರಾದರೆ ಚೇಂದಂಡ ಕುಟುಂಬದ ನಿಕಿನ್ ತಿಮ್ಮಯ್ಯ ಕೂಡ ಒಲಂಪಿಯನ್ ಆಗಿದ್ದು, ತಮ್ಮ ತಂಡದ ಮುನ್ನಡೆ ಆಟಗಾರರಾಗಿದ್ದುದು ವಿಶೇಷವಾಗಿತ್ತು. ತಲಾ 15 ನಿಮಿಷಗಳ ನಾಲ್ಕು ಅವಧಿಯ ಪಂದ್ಯ ಇದಾಗಿದ್ದು, ಪ್ರಥಮ ಅವಧಿಯಲ್ಲಿ ಚೇಂದಂಡ ಆಟಗಾರರು ಬಿರುಸಿನ ಆಟ ಪ್ರದರ್ಶಿಸುವದರೊಂದಿಗೆ ನಿಕಿನ್ ತಿಮ್ಮಯ್ಯ ನೀಡಿದ ಆಕರ್ಷಕ ಪಾಸ್ ಅನ್ನು ಬೋಪಣ್ಣ ಗೋಲಾಗಿ ಪರಿವರ್ತಿಸಿ ಮುನ್ನಡೆ ತಂದಿತ್ತರು. ದ್ವಿತೀಯ ಅವಧಿಯಲ್ಲಿ ಸಮಬಲದ ಹೋರಾಟ ನಡೆದರೂ ಯಾವದೇ ಗೋಲು ದಾಖಲಾಗಲಿಲ್ಲ. ಮೂರನೆಯ ಅವಧಿಯಲ್ಲಿ ನಿಕಿನ್ ತಿಮ್ಮಯ್ಯ ಸೊಗಸಾದ ಗೋಲು ಬಾರಿಸುವ ಮೂಲಕ ಚೇಂದಂಡ ಪಾಳಯಕ್ಕೆ ಜಯವನ್ನು ಬಹುತೇಕ ಖಚಿತಗೊಳಿಸಿದರು.

ಕೊನೆಯ ಅವಧಿಯಲ್ಲಿ ಅಂಜಪರವಂಡ ಆಟಗಾರರು ಗೋಲು ದಾಖಲಿಸಲು ಸತತ ಹೋರಾಟ ನಡೆಸಿದರೂ ಯಶಸ್ಸು ಕಾಣಲಿಲ್ಲ. ಅಂತಿಮವಾಗಿ ಚೇಂದಂಡ ತಂಡ 2-0 ಗೋಲಿನಿಂದ ವಿಜಯ ಸಾಧಿಸಿ ಸತತ ಎರಡನೇ ಬಾರಿಗೆ ಕೊಡವ ಕೌಟುಂಬಿಕ ಹಾಕಿ ಉತ್ಸವದ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಂದ್ಯದ ತೀರ್ಪುಗಾರರಾಗಿ ಕೊಂಡಿರ ಕೀರ್ತಿ ಮುತ್ತಪ್ಪ ಹಾಗೂ ಕಾಟುಮಣಿಯಂಡ ಕಾರ್ಯಪ್ಪ ಕಾರ್ಯನಿರ್ವಹಿಸಿದರು.