ಒಡೆಯನಪುರ, ಮೇ 20: ಸಂಸ್ಕಾರ ಎಂಬ ಮಾನವಿಯ ಮೌಲ್ಯ ಪ್ರತಿಯೊಬ್ಬ ಮನುಷ್ಯನ ಬದುಕಿಗೆ ಸನ್ಮಾರ್ಗವಾಗುತ್ತದೆ ಎಂದು ಅರಕಲಗೂಡು ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಸುಜ್ಞಾನ ಪ್ರಭುಪೀಠದ ಜಗದ್ಗುರು ಶಿವಸುಜ್ಞಾನತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶನಿವಾರಸಂತೆ ಶ್ರೀ ವಿಶ್ವಕರ್ಮ ಸಮಾಜದ ವತಿಯಿಂದ ಗುಡುಗಳಲೆ ಯಲ್ಲಿರುವ ಶ್ರೀ ಕಾಳಿಕಾಂಬದೇವಿ ದೇವಸ್ಥಾನದ 3ನೇ ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಮೂಹಿಕ ಉಪನಯನ ಮತ್ತು ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.

ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ವಿಜ್ಞಾನ ಮತ್ತು ಆಧುನಿಕ ನಾಗರಿಕತೆ ವೈಜ್ಞಾನಿಕ ತಳಹದಿಯ ಮೇಲೆ ಸ್ಥಾಪಿತವಾದರೆ, ವ್ಯಕ್ತಿಯಲ್ಲಿರುವ ಸಂಸ್ಕಾರ ಮತ್ತು ಸುಸಂಸ್ಕøತಿ ಧರ್ಮದ ತಳಹದಿಯ ಮೇಲೆ ನಿಂತಿರುತ್ತದೆ. ಈ ನಿಟ್ಟಿನಲ್ಲಿ ವ್ಯಕ್ತಿಯ ಅಂತರಂಗದಲ್ಲಿ ಸಂಸ್ಕಾರ ಇದ್ದರೆ ಮಾತ್ರ ಜೀವನದಲ್ಲಿ ಶಾಂತಿ-ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕೊಡ್ಲಿಪೇಟೆ ಕಲ್ಲುಮಠದ ಮಹಂತ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ವೈವಿದ್ಯತೆಯ ಜೊತೆಯಲ್ಲಿ ಏಕತೆಯನ್ನು ಕಾಣಬಹುದಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಧಾರ್ಮಿಕ ಮತ್ತು ಆದ್ಯಾತ್ಮಿಕ ಚಿಂತನೆಯ ನೆಲೆಯಲ್ಲಿ ಜೀವನ ನಡೆಸಬೇಕೆಂದರು.

ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಲ್. ಲಕ್ಷ್ಮಣಾಚಾರ್ ಅಧ್ಯಕ್ಷತೆ ವಹಿಸಿದರು. ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆಯಿಂದ ಮಧ್ಯಾಹ್ನ ದವರೆಗೆ ವಿವಿಧ ಪೂಜೆ, ಹೋಮ ಹವನ ಹಾಗೂ ಧಾರ್ಮಿಕ ಪೂಜಾ ಕೈಂಕರ್ಯವನ್ನು ನಡೆಸಲಾಯಿತು. ಈ ಸಂದರ್ಭ ದೇವಿಗೆ ಮಹಿಳೆ ಯರಿಂದ ಸಾಮೂಹಿಕ ಕುಂಕು ಮಾರ್ಚನೆ ಕಾರ್ಯಕ್ರಮ ನಡೆಯಿತು. ಸುಮಾರು 12 ಮಂದಿ ವಟುಗಳಿಗೆ ಉಪನಯನ ಕಾರ್ಯ ಕ್ರಮವನ್ನು ಏರ್ಪಡಿಸಲಾಯಿತು. ದೇವಸ್ಥಾನ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನದಾನವನ್ನು ಏರ್ಪಡಿಸಲಾಯಿತು.