ಕುಶಾಲನಗರ, ಮೇ 14: ಕೊಡಗು ಜಿಲ್ಲೆಯನ್ನು ವಿಶ್ವದಲ್ಲಿಯೇ ಅತ್ಯಂತ ಸ್ವಚ್ಛ ಜಿಲ್ಲೆಯನ್ನಾಗಿ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕ್ಲೀನ್ ಕೂರ್ಗ್ ಇನಿಷಿಯೇಟಿವ್ ಸಂಸ್ಥೆ ಪ್ರಮುಖರಾದ ಬಡುವಂಡ ಅರುಣ್ ಅಪ್ಪಚ್ಚು ಕರೆ ನೀಡಿದ್ದಾರೆ. ಅವರು ಭಾನುವಾರ ದುಬಾರೆ ಪ್ರವಾಸಿ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರವಾಸಿಗರಿಗೆ ಸ್ವಚ್ಛತೆ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಕೊಡಗು ಜಿಲ್ಲೆ ಜಗತ್ತಿನಲ್ಲಿಯೇ ಅತ್ಯಂತ ಸುಂದರವಾದ ತಾಣವಾಗಿದ್ದು ಪ್ರಕೃತಿಯ ಸ್ವಚ್ಛತೆ ಕಾಪಾಡುವಂತೆ ಕೋರಿದರು. ಕೊಡಗು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಡ್ಡಾಯವಾಗಿ ನಿಷಿದ್ದಗೊಳ್ಳಬೇಕಾಗಿದೆ ಎಂದು ಅವರು ಆಗ್ರಹಿಸಿದರು.ಜಿಲ್ಲೆಯ ವಿವಿಧ ಭಾಗಗಳಿಂದ ಸೈಕಲ್‍ಗಳಲ್ಲಿ ಆಗಮಿಸಿದ 50 ಕ್ಕೂ ಅಧಿಕ ಸ್ವಯಂ ಸೇವಕರು ದುಬಾರೆಯ ನದಿ ತಟ ಸುತ್ತಮುತ್ತಲ ವ್ಯಾಪ್ತಿಯಲ್ಲಿ ತ್ಯಾಜ್ಯಗಳನ್ನು ಸಂಗ್ರಹಿಸಿ ತೆರವುಗೊಳಿಸುವಲ್ಲಿ ತೊಡಗಿಸಿಕೊಂಡರು.
ಪ್ರಮುಖರಾದ ಚಿಮ್ಮಣಮಾಡ ಪ್ರಶಾಂತ್, ಚೇನಂಡ ಅಯ್ಯಪ್ಪ, ಚುಮ್ಮಿ, ಜೆಫ್ರಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಿದ್ದಾಪುರ ಸಮೀಪದ ನೆಲ್ಲಿಹುದಿಕೇರಿ ಕಾವೇರಿ ಸೇತುವೆ ಬಳಿ ಸ್ಥಳೀಯ ಡಾಮಿನೋಸ್ ಕ್ಲಬ್ ನೇತೃತ್ವದಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕ್ಲಬ್‍ನ ಸೌಕತ್ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.