ಕೂಡಿಗೆ : ಕುಶಾಲನಗರ- ಮಡಿಕೇರಿ ರಸ್ತೆಯ ಆನೆಕಾಡು ಮೀಸಲು ಅರಣ್ಯ ಪ್ರದೇಶದ ರಸ್ತೆ ಬದಿಯಲ್ಲಿ ಎರಡು ಕಾಡಾನೆಗಳು ಸೋಮವಾರ ಮಧ್ಯಾಹ್ನ ಪ್ರತ್ಯಕ್ಷಗೊಂಡಿದ್ದು, ಎರಡೂ ಆನೆಗಳು ಅರಣ್ಯ ಇಲಾಖೆಯ ಡಿಪೋಗೆ ಸಮೀಪದಲ್ಲೇ ಅರಣ್ಯ ಇಲಾಖೆ ಹೊಸದಾಗಿ ನಿರ್ಮಾಣ ಮಾಡಿರುವ ಕೆರೆ ಏರಿ ಮೇಲೆ ಒಂದು ಹೆಣ್ಣಾನೆ ಮತ್ತು ಒಂದು ಗಂಡಾನೆ ಪರಸ್ಪರ ಕೆಸರನ್ನು ಎರೆಚಿಕೊಳ್ಳುತ್ತಾ ಸಾಗುತ್ತಿದ್ದವು. ಈ ದೃಶ್ಯವನ್ನು ನೂರಾರು ಪ್ರವಾಸಿಗರು ಕಣ್ತುಂಬಿಕೊಂಡು, ತಮ್ಮ ಮೊಬೈಲ್, ಕ್ಯಾಮರಗಳಲ್ಲಿ ಕಾಡಾನೆಗಳ ಆಟದ ದೃಶ್ಯವನ್ನು ಸೆರೆಹಿಡಿದರು.

ನಂತರ ಈ ವಿಷಯವನ್ನು ಸಾರ್ವಜನಿಕರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಬಂದ ಸಿಬ್ಬಂದಿಗಳು ಪ್ರವಾಸಿಗರನ್ನು ಅಲ್ಲಿಂದ ತೆರವುಗೊಳಿಸಿ ಕಾಡಾನೆಗಳನ್ನು ಅರಣ್ಯದೊಳಗೆ ಓಡಿಸಿದರು. - ನಾಗರಾಜಶೆಟ್ಟಿ