ಮಡಿಕೇರಿ, ಮೇ 14: ಚುನಾವಣೆ ಮುಗಿದಿದೆ, ಅಭ್ಯರ್ಥಿಗಳ ಭವಿಷ್ಯ ಪೆಟ್ಟಿಗೆಯೊಳಗೆ ಭದ್ರವಾಗಿದೆ, ಸ್ಪರ್ಧಾಕಣದಲ್ಲಿರುವ ಅಭ್ಯರ್ಥಿಗಳು ಈ ಬಾರಿ ಗೆಲುವು ನಮ್ಮದೇ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಆದರೆ, ಮತದಾರ ಯಾರನ್ನೂ ಆಶೀರ್ವದಿಸಿದ್ದಾನೆ, ಯಾರನ್ನು ಯಾವ ಸ್ಥಾನಕ್ಕೆ ತಳ್ಳಿದ್ದಾನೆ ಎಂಬದೇ ಕುತೂಹಲ ಕೆರಳಿಸಿರುವ ಪ್ರಶ್ನೆ. ಮತದಾರನ ತೀರ್ಪು ತಾ. 15 ರಂದು (ಇಂದು) ಪ್ರಕಟಗೊಳ್ಳಲಿದೆ. ಈ ಬಗ್ಗೆ ಅಭ್ಯರ್ಥಿಗಳ ವಿಶ್ವಾಸದ ನುಡಿಗಳು ಇಂತಿವೆ.

ಗೆಲ್ಲುತ್ತೇವೆ - ಬೋಪಯ್ಯ

ಈ ಬಾರಿಯ ಚುನಾವಣೆಯಲ್ಲಿ ಮತದಾರರ ಸ್ಪಂದನ ಚೆನ್ನಾಗಿದೆ. ಬಿಜೆಪಿ ಗೆಲ್ಲುತ್ತದೆ ಎಂದು ವೀರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಹೇಳುತ್ತಾರೆ. ಕಾಂಗ್ರೆಸ್ ನೇರ ಸ್ಪರ್ಧಿಯಾಗಿತ್ತು. ಆದರೂ ನಿರೀಕ್ಷೆಗೂ ಮೀರಿ ಮತಗಳು ಲಭಿಸಿವೆ. ರಾಜ್ಯದಲ್ಲೂ ಕೂಡ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು. ಸ್ಥಾನಮಾನದ ಬಗ್ಗೆ ವರಿಷ್ಠರು ನಿರ್ಧರಿಸಲಿದ್ದಾರೆಂದರು.

ಜನ ಬೆಂಬಲಿಸಿದ್ದಾರೆ - ರಂಜನ್

ಇದೀಗ ಎಲ್ಲೆಡೆ ಮೋದಿ ಅಲೆ ಇದ್ದು, ರಾಜ್ಯದಲ್ಲಿ ಬಿಜೆಪಿ ಸರಕಾರ ಬರಬೇಕೆಂಬ ಹಂಬಲದೊಂದಿಗೆ ಜನ ಬೆಂಬಲಿಸಿದ್ದಾರೆ. ಎಲ್ಲಾ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಿದ್ದು, ಗೆಲುವು ಸಾಧಿಸುವದಾಗಿ ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಕೆಜೆಪಿ ಪಕ್ಷ ಇದ್ದುದರಿಂದ ಸ್ವಲ್ಪ ಮತ ಹಂಚಿಹೋಗಿತ್ತು. ಈ ಬಾರಿ ಬಿಜೆಪಿ ಬೆಂಬಲಿಸಿದ್ದಾರೆ. ಬಿಜೆಪಿಯ ಜನಪರ ಯೋಜನೆಗಳನ್ನು ಮೆಚ್ಚಿ ಮತ ನೀಡಿದ್ದಾರೆ. ಸರ್ವರಿಗೂ ಸಮಪಾಲು ಎಂಬ ತತ್ವ ಬಿಜೆಪಿಗೆ ವರದಾನವಾಗಿದೆ ಎಂದರು. ಜೆಡಿಎಸ್‍ನೊಂದಿಗೆ ನೇರ ಸ್ಪರ್ಧೆ ಇತ್ತಾದರೂ ಅಲ್ಪಸಂಖ್ಯಾತರಿಗೆ ಬಿಜೆಪಿ ಸರಕಾರ ಕೊಟ್ಟಂತಹ ಅನುದಾನವನ್ನು ಪರಿಗಣಿಸಿ ಅಲ್ಪಸಂಖ್ಯಾತರು ಕೂಡ ಮತ ನೀಡಿದ್ದಾರೆ. ಅಲ್ಲದೆ ಈ ಬಾರಿ ಹೊಸ ಮತಗಳು ಬಹುಪಾಲು ಬಿಜೆಪಿ ಪಾಲಾಗಿದೆ. ಹೊರಜಿಲ್ಲೆಗಳಲ್ಲಿ ನೆಲೆಸಿರುವವರು ಕೂಡ ಆಗಮಿಸಿ ಮತ ನೀಡಿದ್ದಾರೆ. ರಾಜ್ಯದಲ್ಲೂ ಬಿಜೆಪಿ ಸರಕಾರ ಬರಲಿದೆ ಎಂದು ಹೇಳಿದರು.

18ಸಾವಿರ ಅಂತರದಿಂದ ಗೆಲುವು - ಅರುಣ್

ಕಾಂಗ್ರೆಸ್ ಪರ ಮತದಾನ ಚೆನ್ನಾಗಿ ಆಗಿದೆ. ನಿರೀಕ್ಷೆಗೂ ಮೀರಿ ಮತಗಳು ಕಾಂಗ್ರೆಸ್ ಪರವಾಗಿವೆ. 18 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವದಾಗಿ ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ಅರುಣ್ ಮಾಚಯ್ಯ ದೃಢ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ನೇರ ಸ್ಪರ್ಧಿಯಾಗಿತ್ತು. ಆದರೂ ಗೆಲ್ಲುತ್ತೇನೆ. ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಮತ್ತೆ ನಾವೇ ಆಡಳಿತ ನಡೆಸುತ್ತೇವೆ. ಅತಂತ್ರ ಪರಿಸ್ಥಿತಿ ಎದುರಾಗುವದಿಲ್ಲ. ಸ್ಥಾನಮಾನದ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ ಎಂದರು.

ಜನರ ಆಶೀರ್ವಾದ - ಜೀವಿಜಯ

ಈ ಬಾರಿ ಜನತೆ ಬದಲಾವಣೆ ಬಯಸಿದ್ದು, ಜೆಡಿಎಸ್‍ಗೆ ನಿರೀಕ್ಷೆಗೂ ಮೀರಿ ಮತಗಳು ಲಭಿಸಿವೆ. ಜನರ ಆಶೀರ್ವಾದ ಇದೆ ಎಂದು ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿಯೊಂದಿಗೆ ನೇರ ಸ್ಪರ್ಧೆಯಿತ್ತು. ಆದರೂ ಗೆಲ್ತೀನಿ ಅನ್ನೋ ವಿಶ್ವಾಸಲಿದೆ. ರಾಜ್ಯದಲ್ಲಿನ ಪರಿಸ್ಥಿತಿ ಹೇಳಲಾಗದು. ಒಂದು ವೇಳೆ ಸಮ್ಮಿಶ್ರ ಸರ್ಕಾರ ಬಂದರೂ ಸ್ಥಾನಮಾನದ ಬಗ್ಗೆ ವರಿಷ್ಠರೇ ನಿರ್ಧರಿಸಲಿದ್ದಾರೆಂದರು.

ಭಾರೀ ಅಂತರ ಹೇಳೋಕಾಗಲ್ಲ - ಚಂದ್ರಕಲಾ

ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೊಂಡಿರುವ ಉತ್ತಮ ಯೋಜನೆಗಳು, ತಾನು ಮಾಡಿರುವ ಸಮಾಜ ಸೇವಾ ಕಾರ್ಯಗಳಿಗಾದರೂ ಜನತೆ ಮತ ನೀಡಬೇಕು, ಅಲ್ಲದೆ ಇನ್ನಿಬ್ಬರು ಅಭ್ಯರ್ಥಿಗಳನ್ನು ಜನತೆ ತಿರಸ್ಕಾರ ಮಾಡಿರುವದರಿಂದ ತಾನು ಗೆಲ್ಲುವ ಅವಕಾಶವಿದೆ. ಆದರೆ, ಭಾರೀ ಅಂತರ ಹೇಳೋಕಾಗಲ್ಲವೆಂದು ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇವಲ 13 ದಿನಗಳ ಅಂತರದಲ್ಲಿ ತನಗೆ ಟಿಕೆಟ್ ಸಿಕ್ಕಿದೆ. ಪಕ್ಷದಿಂದ ಯಾವದೇ ಆರ್ಥಿಕ ನೆರವು ಸಿಕ್ಕಿಲ್ಲ, ಬೆಂಗಳೂರಿನಲ್ಲಿದ್ದ ಫ್ಲ್ಯಾಟ್ ಮಾರಾಟ ಮಾಡಿ ಚುನಾವಣೆಗೆ ವೆಚ್ಚ ಮಾಡಿದ್ದೇನೆ. ಪಕ್ಷದ ನಾಯಕರು, ಜಿಲ್ಲಾ ಸಮಿತಿ ಯಾವದೇ ಸ್ಪಂದನ ನೀಡಿಲ್ಲ, ತುಂಬಾ ಬೇಜಾರಾಗಿದೆ ಕಾರ್ಯಕರ್ತರಿಗೂ ತೊಂದರೆಯಾಗಿದೆ ಎಂದರು. ಬಿಜೆಪಿ ನೇರ ಸ್ಪರ್ಧಿಯಾಗಿತ್ತು. ಮಹಿಳೆಯರು ಅಶೀರ್ವದಿಸಿದ್ದಾರೆ. ನಿರೀಕ್ಷೆಗಿಂತ ಹೆಚ್ಚಿಗೆ ಮತ ಬರಬೇಕು, ಸಿದ್ದರಾಮಯ್ಯ ಅವರ ಯೋಜನೆಗಳು ಯಶಸ್ವಿಯಾಗಿವೆ. ರಾಜ್ಯದಲ್ಲಿ ಕಾಂಗ್ರೆಸ್ ಬರಲಿದೆ. ತನಗೆ ಸ್ಥಾನಮಾನ ಸಿಗದಿದ್ದರೂ ಜನಪರ ಕೆಲಸ ಮಾಡುವದಾಗಿ ಅವರು ಹೇಳಿದರು.

ನಿರಂತರ ಸೇವೆ - ಸಂಕೇತ್

ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಾಗಿದೆ. ರಾಜಕೀಯ ಪಕ್ಷಗಳು ಪ್ರಣಾಳಿಕೆಗಳನ್ನು ಪಾಲಿಸುವದು ಕರ್ತವ್ಯವಾಗಬೇಕು. ಆದರೆ ಈ ಚುನಾವಣೆಯಲ್ಲಿ ಕೆಲವು ಮತ ಮೈಲಿಗೆಯಾಗಿದೆ. ಬಡಮತದಾರರಿಗೆ ಆಮಿಷವೊಡ್ಡಿ ಮೈಲಿಗೆಯಾಗಿದೆ. ಚುನಾವಣೆಯಲ್ಲಿ ಜಾತಿ ರಾಜಕಾರಣ ಬರಬಾರದು. ತಾನು ಸೋಲು - ಗೆಲುವನ್ನು ಸಮನಾಗಿ ಸ್ವೀಕರಿಸಲಿದ್ದು, ನಂತರವೂ ನಿರಂತರ ಜನಸೇವೆ ಮಾಡುವದಾಗಿ ಜೆಡಿಎಸ್‍ನ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಸಂಕೇತ್ ಪೂವಯ್ಯ ಹೇಳಿದರು.

ಜಿಲ್ಲೆಯಿಂದ ಇದುವರೆಗೆ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿಲ್ಲ. ತಾನು ಅಧ್ಯಕ್ಷನಾಗಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದ್ದು, ಈ ಬಾರಿ ಮಡಿಕೇರಿ ಕ್ಷೇತ್ರದಿಂದ ಜೀವಿಜಯ ಗೆಲುವು ಸಾಧಿಸಲಿದ್ದಾರೆ. ಈ ಪಕ್ಷದ ವರಿಷ್ಠರಿಗೆ ಕೊಟ್ಟ ಮಾತಿನಂತೆ ಓರ್ವ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸುವ ಅದೃಷ್ಟ ಸಿಕ್ಕಿದೆ. ರಾಜ್ಯದಲ್ಲೂ ಪಕ್ಷ ಅಧಿಕಾರಕ್ಕೆ ಬರಲಿದೆ. ಪಕ್ಷ ಗುರುತಿಸುತ್ತದೆ ಎಂಬ ನಂಬಿಕೆ ಇದೆ. ಸ್ಥಾನಮಾನ ಸಿಗದಿದ್ದರೂ ಜನರ ಸೇವೆ ಮುಂದುವರಿಸುವದಾಗಿ ಹೇಳಿದರು.