ಕೂಡಿಗೆ, ಮೇ 12: ಕೊಡಗಿನ ಏಕೈಕ ಕೈಮಗ್ಗ ಕೇಂದ್ರದ ಬೀಡು ಗಡಿಗ್ರಾಮ ಶಿರಂಗಾಲ. ಸುಮಾರು 1981 ರಲ್ಲಿ ಪ್ರಾರಂಭಗೊಂಡ ಕಾವೇರಿ ಹ್ಯಾಂಡ್‍ಲೂಂ ಶಾಖೆಯಾದ ಕಾವೇರಿ ಸಮೂಹ ನೇಯ್ಗೆ ಕೇಂದ್ರವು ಅಭಿವೃದ್ಧಿ ಕಾಣದೆ ಇದೀಗ ಮುಚ್ಚುವ ಹಂತ ತಲಪಿದ್ದು ಸ್ವದೇಶಿ ಸಂಪ್ರದಾಯ ಕಸೂತಿಯನ್ನು ಜಿಲ್ಲೆಯಲ್ಲಿ ಮರೆಯಾಗಿಸುತ್ತಿದೆ.

ಜಿಲ್ಲೆಯ ಹೆಮ್ಮೆಯ ಕೇಂದ್ರವಾಗಬೇಕಾಗಿದ್ದ ಕೈಮಗ್ಗ ಘಟಕ ನೇಕಾರರಿಗೆ ಉತ್ತಮ ಬದುಕು ರೂಪಿಸಿಕೊಡಬೇಕಿದೆ. ಆಧುನೀಕರಣದ ಅಬ್ಬರ ಹಾಗೂ ಸರ್ಕಾರದ ನಿರ್ಲಕ್ಷ್ಯಕ್ಕೊಳಗಾಗಿ ದುಸ್ಥಿತಿಯತ್ತ ಸಾಗುತ್ತಿದೆ. ಈ ನೇಯ್ಗೆ ಕೇಂದ್ರದಲ್ಲಿ ಮೊದಲು ನೂರಾರು ಸಿಬ್ಬಂದಿ ನೇಯ್ಗೆ ಕಸೂತಿಯಲ್ಲಿ ತೊಡಗುತ್ತಿದ್ದರು, ಪ್ರಸ್ತುತ 15 ಜನ ಮಾತ್ರ ನೇಯ್ಗೆ ಕೆಲಸ ಮಾಡುವಂತಹ ಪ್ರಸಂಗ ಎದುರಾಗಿದೆ. ಇದಕ್ಕೆಲ್ಲ ನಿಗಮದ ಬೇಜವಾಬ್ದಾರಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಈ ಕೇಂದ್ರದಲ್ಲಿ ಬಟ್ಟೆ ನೇಯ್ಗೆ ಮಾಡಲು ಕಚ್ಚಾ ವಸ್ತುಗಳು ಸಮಗ್ರವಾಗಿ ದೊರಕುತ್ತಿದೆ. ನಂತರ ಸಿದ್ಧಪಡಿಸಿದ ಬೆಡ್‍ಶೀಟ್ ಮತ್ತು ಟವಲ್‍ಗಳನ್ನು ಇಲಾಖೆ ಉತ್ತಮ ಬೇಡಿಕೆ ಇರುವ ಮಾರುಕಟ್ಟೆಗಳಿಗೆ ಸಾಗಾಟ ಮಾಡಿದರೂ ಕೈಮಗ್ಗದಲ್ಲಿ ತಯಾರಿಸಿದ ಉಡುಪುಗಳು ಹೈಟೆಕ್ ತಂತ್ರಜ್ಞಾನವುಳ್ಳ ಬಟ್ಟೆ ಕಾರ್ಖಾನೆಗಳ ಮುಂದೆ ಆರ್ಥಿಕ ಪೈಪೋಟಿ ನಡೆಸಲು ಸಾಧ್ಯವಾಗದೆ, ಉತ್ತಮ ಬೆಲೆಯೂ ದೊರಕದೆ ನೇಕಾರರಿಗೆ ಉತ್ತಮ ಸಂಬಳವೂ ದೊರಕುತ್ತಿಲ್ಲ.

ನೇಕಾರಿಕೆ ತರಬೇತಿ ಪಡೆದಿರುವ 16 ನೇಕಾರರು ತಮ್ಮ ಕುಂಟುಂಬದ ಆರ್ಥಿಕತೆ ಬಲಪಡಿಸಿಕೊಳ್ಳಲು ಸ್ವ-ಉದ್ಯೋಗದಡಿ ಬ್ಯಾಂಕ್‍ಗಳ ಮೂಲಕ ವಿಶೇಷ ಸಾಲ ಸೌಲಭ್ಯಗಳನ್ನು ಪಡೆದಿದ್ದಾರೆ. ಆದರೆ ಅವರಿಗೆ ನೀಡಬೇಕಾದ ಸಬ್ಸಿಡಿ ಹಣವು ಐದು ವರ್ಷ ಕಳೆದರೂ ಇದುವರೆಗೂ ಬಿಡುಗಡೆಯಾಗಿಲ್ಲ ಎಂದು ಬಟ್ಟೆ ನೇಕಾರರಾದ ಶಿವಮ್ಮ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಜನತೆಗೆ ಸ್ವಉದ್ಯೋಗ ಅವಲಂಭಿಸಲು ಹಾಗೂ ಕಾರ್ಯೋನ್ಮುಖರಾಗಲು ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದರೂ, ಈ ಗ್ರಾಮದಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕರು ಬಹಳಷ್ಟಿದ್ದು, ತಮ್ಮ ಬದುಕು ಸಾಗಿಸಲು ಈ ನೇಯ್ಗೆ ಕೇಂದ್ರವನ್ನೇ ಆಶ್ರಯಿಸಿದ್ದಾರೆ. ಈ ಬಟ್ಟೆ ಉತ್ಪಾದನಾ ಕೇಂದ್ರವು ಖಾದಿ ವಸ್ತು ಮಾರಾಟದ ಕೇಂದ್ರಗಳನ್ನು ಮಡಿಕೇರಿ ಮತ್ತು ಕುಶಾಲನಗರದಲ್ಲಿ ತೆರೆದಿದ್ದು. ಆದರೆ ಇದೀಗ ಕುಶಾಲನಗರದ ಘಟಕ ಮುಚ್ಚಲ್ಪಟ್ಟಿದೆ. ಈ ಘಟಕ ಸ್ವಂತ ಕಟ್ಟಡವನ್ನು ಹೊಂದಿದ್ದು ಸುಣ್ಣ ಬಣ್ಣ ನಿರ್ವಹಣೆ ಇಲ್ಲದೆ ಮಳೆ, ಗಾಳಿ, ಬಿಸಿಲಿಗೆ ಕುಸಿಯುವ ಹಂತದಲ್ಲಿದೆ. ಕಟ್ಟಡವನ್ನು ಆಧುನಿಕರಣಗೊಳಿಸಿ, ಹೊಸ ಹೊಸ ಉಪಕರಣಗಳನ್ನು ಅಳವಡಿಸಬೇಕಾಗುತ್ತದೆ. ಒಳ್ಳೆಯ ಇಲಾಖಾ ಅಧಿಕಾರಿ ನೇಮಕಗೊಂಡು ವ್ಯವಸ್ಥೆಯನ್ನು ಸರಿದೂಗಿಸಿಕೊಂಡು ಹೋದಲ್ಲಿ ಈ ಘಟಕ ಅಭಿವೃದ್ಧಿಯತ್ತ ಸಾಗುತ್ತದೆ.

ಜಿಲ್ಲೆಯಲ್ಲಿನ ಸುಮಾರು 6 ಸಾವಿರ ನೇಕಾರ ಕುಟುಂಬಗಳಲ್ಲಿ 1 ಸಾವಿರ ಕುಟುಂಬಗಳು ಕೈಮಗ್ಗ ವೃತ್ತಿಯನ್ನೇ ಅವಲಂಬಿಸಿದ್ದಾರೆ. ವಿಶೇಷವಾಗಿ ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚು ಕಾಣಸಿಗುತ್ತಾರೆ. ಈ ಕುಟುಂಬಗಳಲ್ಲಿ ಹೆಚ್ಚಾಗಿ ಮಹಿಳೆಯರು ಕೈಮಗ್ಗ ವೃತ್ತಿಯನ್ನು ಕರಗತಮಾಡಿಕೊಂಡಿದ್ದಾರೆ. ಪ್ರಸ್ತುತ ಈ ನೇಕಾರಿಕೆ ಕೈಗಳು ಕೈಮಗ್ಗ ಕೇಂದ್ರದ ಸಮಸ್ಯೆಗಳಿಂದ ಬಲ ಕಳೆದುಕೊಳ್ಳುತ್ತಿವೆ. ಕಾವೇರಿ ಕೈಮಗ್ಗ ಕೇಂದ್ರದಲ್ಲಿ ಮಗ್ಗಗಳು ಸ್ಥಗಿತಗೊಳ್ಳುವ ಮುನ್ನವೆ ಸರ್ಕಾರ ನೇಕಾರರ ಸಮಸ್ಯೆ ಬಗೆಹರಿಸಿ, ಕೈಮಗ್ಗ ಕೇಂದ್ರಕ್ಕೆ ಕಾಯಕಲ್ಪ ನೀಡಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸ್ಥಳೀಯ ಶಾಸಕರು ಹಾಗೂ ಸ್ಥಳೀಯ ಗ್ರಾ.ಪಂ. ಹೆಚ್ಚು ಉತ್ತೇಜನ ನೀಡಿದಲ್ಲಿ ಈ ನೇಕಾರರ ಬದುಕು ಸಾರ್ಥಕವಾಗಲಿದೆ. ಜಿಲ್ಲೆಯ ಇಲಾಖಾಧಿಕಾರಿಗಳು ಅಥವಾ ರಾಜ್ಯ ಕೈಮಗ್ಗ ನಿಗಮದ ಪದಾಧಿಕಾರಿಗಳು ಇದರತ್ತ ಗಮನಹರಿಸಿದರೆ ಜಿಲ್ಲೆಯ ಏಕೈಕ ಕೈಮಗ್ಗ ಕೇಂದ್ರವನ್ನು ಉಳಿಸಿ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡಿದಂತಾಗುತ್ತದೆ.

- ಕೆ.ಕೆ. ನಾಗರಾಜ ಶೆಟ್ಟಿ.