ವೀರಾಜಪೇಟೆ, ಮೆ 13: ಗ್ರಾಮ ವಾಸಿಗಳ ಸುಭಿಕ್ಷೆಗಾಗಿ ಗ್ರಾಮ ದೇವತೆಯು ನೆಲೆಕಂಡಿದ್ದು ವರ್ಷದಲ್ಲಿ ಗ್ರಾಮ ವಾಸಿಗಳು ತಮ್ಮ ಅಭಿಲಾಷೆಗಳನ್ನು ಈಡೇರಿಸುವಂತೆ ದೇವರ ವಾರ್ಷಿಕ ಹಬ್ಬವನ್ನು ಆಚರಿಸುವದು ವಾಡಿಕೆಯಾಗಿದೆ.

ಅದರಂತೆ ವೀರಾಜಪೇಟೆ ಆರ್ಜಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಾಳುಗೋಡು ಗ್ರಾಮದಲ್ಲಿ ನೆಲೆಕಂಡಿರುವ ದೇವಿ ಶ್ರೀ ಅಗ್ನಿ ಚಾಮುಂಡಿಯ ತೆರೆ ಮಹೋತ್ಸವ ಭಕ್ತ ಹರ್ಷೋದ್ಗಾರದ ನಡುವೆ ಸಂಪನ್ನಗೊಂಡಿತು.

ತಾ. 10 ರಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಆರಂಭವಾದ ಪೂಜಾ ಕಾರ್ಯಕ್ರಮಗಳು ಕಲಶ ಪೂಜೆ, ಶ್ರೀ ದೇವಿಗೆ ಮಹಾಪೂಜೆ, ಚಾಮುಂಡಿ ದೇವಿ ಉತ್ಸವ ಮೂರ್ತಿಯನ್ನು ಹೊತ್ತು ದೇವಾಲಯದ ನವ ಪ್ರದಕ್ಷಿಣೆಯೊಂದಿಗೆ ದೇವರ ನೃತ್ಯ ಬಲಿ ನಡೆಯಿತು. ಮಧ್ಯಾಹ್ನ ಕುಟ್ಟಿಚಾತ ಕಾಲಭೈರವ ಮತ್ತು ನುಚ್ಚುಟ್ಟೆ ಕೋಲಗಳು ಮುಂಜಾನೆಯವರೆಗೆ ಭಕ್ತರಿಗೆ ದರ್ಶನ ನೀಡಿ ಆಶೀರ್ವಾದವನ್ನು ನೀಡಿದವು.

ಉತ್ಸವದ ಪ್ರಮುಖ ಆಕರ್ಷಣೆಯು ಬೃಹದಾಕಾರವಾಗಿ ಹರಡಿದ್ದ ಕಟ್ಟಿಗೆಗಳಿಗೆ ಬೆಂಕಿಯ ಸ್ಪರ್ಶ ನೀಡಿದ್ದು ಬೆಂಕಿಯ ಜ್ವಾಲೆಯು ಆಕಾಸದೆತ್ತರಕ್ಕೆ ಹರಡಿಕೊಂಡಿತ್ತು. ಚಾಮುಂಡಿ ತೆರೆಯು ಅಗ್ನಿಕುಂಡದ ಮೇಲೆ ಎರಗಿ ತನ್ನ ರುದ್ರನರ್ತನ ಮಾಡಿದಾಗ ನೆರೆದಿದ್ದ ಭಕ್ತ ಸಮೂಹ ಭಕ್ತಿಪರವಶದಿಂದ ನಮಿಸಿದರು. ಮಧ್ಯಾಹ್ನ ಚಾಮುಂಡೇಶ್ವರಿ ತೆರೆಯು ತನ್ನ ಉದ್ದನೆಯ ಶ್ರೀಮುಡಿ ಧರಿಸಿ ದೇವಾಲಯದ ಪ್ರದಕ್ಷಿಣೆಯೊಂದಿಗೆ ಭಕ್ತರನ್ನು ಹರಿಸಿ ಉತ್ಸವ ಕೊನೆಗೊಂಡಿತ್ತು.

ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮಹಾಪೂಜೆ ವೇಳೆ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ತಕ್ಕಮುಖ್ಯಸ್ಥರಾದ ಕಬ್ಬಚೀರ ಕಾವೇರಪ್ಪ, ಕಾರ್ಯದರ್ಶಿ ರವೀಂದ್ರ ಬಿ.ಎಸ್., ಗಣೇಶ್ ಟಿ.ಕೆ., ನಿರ್ದೇಶಕರಾದ ಜೀವನ್ ಬಿ.ಪಿ., ಕೆ.ಕೆ. ಅನಿಲ್, ದಾಸನ್, ಅಜಿತ್ ಸಿ.ಆರ್., ವಾಸು ಮತ್ತು ಗ್ರಾಮಸ್ಥರು ಹಾಗೂ ಉತ್ಸವಕ್ಕೆ ಸನಿಹದ ಇತರ ಗ್ರಾಮಗಳು ಸೇರಿದಂತೆ ವಿವಿಧ ಊರುಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ತೆರೆ ಮಹೋತ್ಸವವನ್ನು ಸಾಕ್ಷೀಕರಿಸಿದರು.

- ಕೆ.ಕೆ.ಎಸ್. ವೀರಾಜಪೇಟೆ