ಮಡಿಕೇರಿ, ಮೇ 13: ರಾಜ್ಯ ವಿಧಾನಸಭೆಗೆ ಮತದಾನ ನಡೆದ ದಿನವಾದ ತಾ. 12ರಂದು ಅಚ್ಚರಿಯ ರೀತಿಯಲ್ಲಿ ಜನತೆ ಸುಸೂತ್ರವಾಗಿ ಮತ ಚಲಾಯಿಸಲಿ ಎಂಬಂತೆ ಬಿಡುವು ನೀಡಿದ್ದ ಮಳೆ ಇಂದು ಅಪರಾಹ್ನ ಮತ್ತೆ ತನ್ನ ಪ್ರತಾಪ ತೋರಿತು. ನಿನ್ನೆ ಕುಶಾಲನಗರ ಹೊರತುಪಡಿಸಿದಂತೆ ಚುನಾವಣೆಯ ಅವಧಿ ಮುಗಿಯುವ ತನಕ ಎಲ್ಲೂ ಮಳೆಯಾಗಿರಲಿಲ್ಲ. ತಾ. 13ರ ಭಾನುವಾರದಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಪರಾಹ್ನದ ತನಕ ವಾತಾವಣರ ಎಂದಿನಂತಿತ್ತಾದರೂ ಎರಡು ಗಂಟೆಯ ವೇಳೆಗೆ ಮತ್ತೆ ಮೋಡ ಕವಿದ ವಾತಾವರಣ ದೊಂದಿಗೆ ಮಳೆ ಹನಿಯ ಸಿಂಚನ ವಾಗತೊಡಗಿತು. ನಾಲ್ಕು ಗಂಟೆಯ ವೇಳೆಗೆ ಇದು ಅಧಿಕಗೊಂಡಿತ್ತಲ್ಲದೆ, ಗುಡುಗು-ಮಿಂಚಿನ ಆರ್ಭಟ ದೊಂದಿಗೆ ಧಾರಾಕಾರ ಮಳೆ ಸುರಿಯಿತು. ಸಂಜೆ ವೇಳೆಗೆ ವಿದ್ಯುತ್ ಪೂರೈಕೆಯಲ್ಲಿಯೂ ವ್ಯತ್ಯಯ ಕಂಡುಬಂದಿತು. ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾಟ ನಡೆಯುತ್ತಿರುವ ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನ ಮತ್ತೆ ನೀರು ನಿಂತು ಸಮಸ್ಯೆಯಾಗಿದೆ. ನಾಪೋಕ್ಲು ವಿಭಾಗದಲ್ಲಿಯೂ ಅಪರಾಹ್ನ ಧಾರಾಕಾರವಾಗಿ ಮಳೆ ಸುರಿದಿದ್ದು, ಮಳೆ- ಗಾಳಿಯ ರಭಸಕ್ಕೆ ಕುಲ್ಲೇಟಿರ ಕಪ್ ಹಾಕಿ ಉತ್ಸವದಲ್ಲಿ ಮೈದಾನದಲ್ಲಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್‍ಗಳು ನೆಲಕಚ್ಚಿವೆ. ಜಿಲ್ಲೆಯ ಇನ್ನಿತರ ಕೆಲವು ಭಾಗಗಳಲ್ಲಿಯೂ ಇಂದು ಮತ್ತೆ ಮಳೆಯಾಗಿರುವ ಕುರಿತು ವರದಿಯಾಗಿದೆ. ನಾಪೋಕ್ಲು ವರದಿನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಬಿರುಸಿನ ಮಳೆಯಾಗಿದ್ದು ಅಲ್ಲಲ್ಲಿ ಹಾನಿ ಸಂಭವಿಸಿದೆ. ಮಧ್ಯಾಹ್ನ ಒಂದು ಗಂಟೆಗಳ ಕಾಲ

(ಮೊದಲ ಪುಟದಿಂದ) ಬಿರುಸಿನ ಮಳೆ ಸುರಿಯಿತು. ಬೇತು ಕೊಟ್ಟಮುಡಿ ಹೊದ್ದೂರು ಪಾಲೂರು ಸೇರಿದಂತೆ ವಿವಿಧೆಡೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಬಿರುಸಿನ ಗಾಳಿ ಮಳೆಯಿಂದಾಗಿ ಪಟ್ಟಣದ ಮಾರ್ಕೆಟ್ ಬಳಿ ಶೀಟುಗಳು ಹಾರಿಹೋಗಿದ್ದು ನಷ್ಟ ಸಂಭವಿಸಿದೆ. ಇಲ್ಲಿಗೆ ಸಮೀಪದ ಬೇತು ಗ್ರಾಮದಲ್ಲಿ ಬೃಹತ್ ಗಾತ್ರದ ಮರವೊಂದು ಮುರಿದು ಬಿದ್ದು ಉಮೇಶ್ ಅವರ ಕಾಫಿ ತೋಟದಲ್ಲಿ ಹಲವು ಗಿಡಗಳು ಹಾನಿಗೊಂಡಿವೆ. ಕಕ್ಕಬ್ಬೆ, ಕುಂಜಿಲ, ನೆಲಜಿ ಗ್ರಾಮಗಳ ವ್ಯಾಪ್ತಿಗಳಲ್ಲೂ ರಭಸದ ಮಳೆ ಸುರಿದಿದೆ.

ಮಡಿಕೇರಿಯ ಹೊರ ವಲಯದಲ್ಲಿ ಮೈಸೂರು ಹೆದ್ದಾರಿ ತಿರುವಿನಲ್ಲಿ ರಾಜ್ಯ ಸಾರಿಗೆ ಬಸ್ಸೊಂದು ಕಾರೊಂದಕ್ಕೆ ಡಿಕ್ಕಿಯಾದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಗಂಟೆಗಟ್ಟಲೆ ಪ್ರಯಾಣಿಕರು ಪರದಾಡಬೇಕಾಯಿತು. ಯಾವದೇ ಪ್ರಾಣಹಾನಿ ಈ ಸಂದರ್ಭ ಸಂಭವಿಸಿಲ್ಲ.

ಜಿಲ್ಲಾ ಕೇಂದ್ರ ಸೇರಿದಂತೆ ಭಾಗಮಂಡಲ ಹಾಗೂ ಇತರೆಡೆಗಳಲ್ಲಿಯೂ ಗುಡುಗು ಸಹಿತ ಮಳೆಯಾಗಿದೆ.

ಕೂಡಿಗೆ 13 ಕೂಡಿಗೆ ವ್ಯಾಪ್ತಿಯಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. 2 ಇಂಚಿಗೂ ಹಚ್ಚು ಪ್ರಮಾಣದ ಮಳೆಯಾಯಿತು. ಹೆಬ್ಬಾಲೆ, ತೊರೆನೂರು ಮದಾಲಪುರ, ಕೂಡುಮಂಗಳೂರು, ಹಾರಂಗಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಸುರಿಯಿತು.