ಮಡಿಕೇರಿ, ಮೇ. 13: ಕರ್ನಾಟಕ ವಿಧಾನಸಭೆಗೆ ನಿನ್ನೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ, ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಶೇ. 74.95ರಷ್ಟು ಮತದಾನ ನಡೆದಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರ - 208 ರಲ್ಲಿ ಒಟ್ಟು 2,16,937 ಮಂದಿ ಮತದಾರರ ಪೈಕಿ 1,68, 259 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಈ ಕ್ಷೇತ್ರದಲ್ಲಿ ಶೇ. 77.56 ರಷ್ಟು ಮತದಾನ ನಡೆದಿದೆ. ವೀರಾಜಪೇಟೆ ವಿಧಾನ ಸಭಾಕ್ಷೇತ್ರ -209ರಲ್ಲಿ ಒಟ್ಟು 2,16,909 ಮಂದಿ ಮತದಾರರ ಪೈಕಿ 1,56,915 ಮಂದಿ ಮತದಾನ ಮಾಡುವದರೊಂದಿಗೆ ಶೇ. 72.34 ರಷ್ಟು ಮತಗಳು ಚಲಾಯಿಸಲ್ಪಟ್ಟಿವೆ.ಇನ್ನು ಜಿಲ್ಲೆಯ ಒಟ್ಟು 4,33,846 ಮಂದಿ ಮತದಾರರ ಪೈಕಿ 1,62,455 ಪುರುಷರು ಹಾಗೂ 1,62,718 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಇತರ ಓರ್ವರು ಮತ ಚಲಾಯಿಸಿದ್ದಾರೆ. ಹೀಗೆ ಒಟ್ಟು 3,25,174 ಮಂದಿ ಮತದಾನದಲ್ಲಿ ಭಾಗವಹಿಸಿದ್ದಾರೆ. ಈ ಪೈಕಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 83,402 ಪುರುಷರು ಹಾಗೂ 84,857 ಮಂದಿ ಮಹಿಳೆಯರು ಮತ ಚಲಾಯಿಸಿದ್ದು, 1,455 ಮಂದಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ.ವೀರಾಜಪೇಟೆ: ಅಂತೆಯೇ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 79,053 ಮಂದಿ ಪುರುಷರು, 77,861 ಮಂದಿ ಮಹಿಳಾ ಮತದಾರರು ತಮ್ಮ ಮತದಾನ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಮಹಿಳೆಯರಿಗಿಂತ ಪುರುಷರು ಸಾಧನೆ ತೋರುವದರೊಂದಿಗೆ 1,192 ಮಂದಿ ಅಧಿಕ ಸಂಖ್ಯೆಯಲ್ಲಿ ಹಕ್ಕು ಚಲಾಯಿಸಿರುವದು ಗೋಚರಿಸಿದೆ.

ಗರಿಷ್ಠ ಮತದಾನ : ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ, ಈ ಬಾರಿ ಶೇ. 50ಕ್ಕಿಂತಲೂ ಅಧಿಕ ಮತದಾನ ನಡೆದಿದೆ. ಈ ಪೈಕಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಎಂಟು ಮತಗಟ್ಟೆಗಳಲ್ಲಿ ಶೇ. 90ಕ್ಕಿಂತಲೂ ಅಧಿಕ ಮತ ಚಲಾಯಿಸಲ್ಪಟ್ಟಿರುವದು ಕಂಡು ಬಂದಿದೆ.

ಪ್ರಥಮ ಹೆಗ್ಗಳಿಕೆ : ಮಡಿಕೇರಿ ಕ್ಷೇತ್ರದ ಈ ಎಂಟು ಮತಗಟ್ಟೆಗಳ ಪೈಕಿ ಹಾರಂಗಿ ಬಳಿಯ ಅತ್ತೂರು ಮತಗಟ್ಟೆಯಲ್ಲಿ ಶೇ. 93.84 ರಷ್ಟು ಸಾಧನೆಯೊಂದಿಗೆ ಪ್ರಥಮ ಹೆಗ್ಗಳಿಕೆಯ ಸ್ಥಾನ ಪಡೆದಿದೆ. ಕಡಗದಾಳು ಮತಗಟ್ಟೆಯಲ್ಲಿ ಶೇ. 93.63 ಮತದಾನದೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದು, ಹೊಸಗುತ್ತಿ ಮತಗಟ್ಟೆಯಲ್ಲಿ ಶೇ. 92.71 ಮತ ಚಲಾವಣೆಯೊಂದಿಗೆ ತೃತೀಯ ಸ್ಥಾನ ಪಡೆದಿದೆ.

ಅಂತೆಯೇ ಮಡಿಕೇರಿ ಕ್ಷೇತ್ರದಲ್ಲಿ ಇನ್ನುಳಿದಂತೆ ಕಿರುಪಾಲೆ ಮತಗಟ್ಟೆ ಯಲ್ಲಿ ಶೇ. 92.44, ಅಳುವಾರ ಮತಗಟ್ಟೆಯಲ್ಲಿ ಶೇ. 91.55, ತಾಕೇರಿ ಶೇ. 90.67, ಚಿಕ್ಕತ್ತೋರು ಶೇ. 90.43, ಗೌಡಳ್ಳಿ ಶೇ. 90.01 ಮತದಾನ ದೊಂದಿಗೆ ಶೇ. 90ಕ್ಕಿಂತಲೂ ಅಧಿಕ ಸಾಧನೆ ಕಂಡು ಬಂದಿದೆ. ಅಂತೆಯೇ 118 ಮತಗಟ್ಟೆಗಳಲ್ಲಿ ಶೇ. 80ಕ್ಕಿಂತಲೂ ಅಧಿಕ ಮತದಾನವಾಗಿರುವದು ಗೋಚರಿಸಿದೆ.

ವೀರಾಜಪೇಟೆಯ ಪೆರಾಜೆ : ಅತ್ತ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕೊಡಗಿನ ಗಡಿ ಮತಗಟ್ಟೆ ಕುಂಬಳದಾಳು, ಪೆರಾಜೆಯಲ್ಲಿ ಮಾತ್ರ ಶೇ. 91.08 ರಷ್ಟು ಸಾಧನೆ ಕಂಡು ಬಂದಿದೆ. ಅಲ್ಲದೆ ಈ ಕ್ಷೇತ್ರದ 50 ಮತಗಟ್ಟೆಗಳಲ್ಲಿ ಶೇ. 80ಕ್ಕಿಂತಲೂ ಅಧಿಕ ಸಾಧನೆಯಾಗಿದೆ.

ಕಡಿಮೆ ಮತದಾನ : ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ, ಜಿಲ್ಲಾ ಕೇಂದ್ರದಲ್ಲಿರುವ ನಗರಸಭಾ ಶಾಲೆಯ 198ನೇ ಮತಗಟ್ಟೆ ಬಲಪಾಶ್ರ್ವದಲ್ಲಿ ಶೇ. 51.22 ಮತದಾನದೊಂದಿಗೆ ಕನಿಷ್ಟ ಮಂದಿ ಹಕ್ಕು ಚಲಾಯಿಸಿರುವದು ಗೋಚರಿಸಿದೆ. ಅಲ್ಲದೆ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಈ ಬಾರಿ ಶೇ. 50ಕ್ಕಿಂತಲೂ ಅಧಿಕ ಮತದಾನ ನಡೆದಿದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಚೂರಿಕಾಡು ಮತಗಟ್ಟೆಯಲ್ಲಿ ಶೇ. 51.07 ಮತದಾನದೊಂದಿಗೆ ಜಿಲ್ಲೆಯಲ್ಲಿಯೇ ಕನಿಷ್ಟ ಮತದಾನ ಕಂಡು ಬಂದಿದೆ.

ಬೆಳಿಗ್ಗೆ ತನಕ ಕರ್ತವ್ಯ : ಮಡಿಕೇರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಂದ ಸಂಜೆಗತ್ತಲೆ ನಡುವೆ ಮತಯಂತ್ರಗಳು ಸಂತಜೋಸೆಫರ ಶಾಲೆಯ ಎಣಿಕೆ ಕೇಂದ್ರದತ್ತ ನಿನ್ನೆ ರಾತ್ರಿ ತಲಪಿದ್ದು, ಎಲ್ಲ ಮತಯಂತ್ರಗಳ ಪರಿಶೀಲನೆ ಹಾಗೂ ಸುರಕ್ಷತೆ ಬಗ್ಗೆ ಖಾತರಿಪಡಿಸಿ ಕೊಳ್ಳುವಲ್ಲಿ ತಡರಾತ್ರಿ ಪರಿಶೀಲನೆ ಹಾಗೂ ಸುರಕ್ಷತೆ ಬಗ್ಗೆ ಖಾತರಿಪಡಿಸಿ ಕೊಳ್ಳುವಲ್ಲಿ ತಡರಾತ್ರಿಯಾಗಿದೆ. ಇನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮತಯಂತ್ರಗಳು ಅಲ್ಲಿನ ಸರಕಾರಿ ಕಾಲೇಜು ಆವರಣದಲ್ಲಿ ಪರಿಶೀಲನೆ ಬಳಿಕ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಜಿಲ್ಲಾ ಕೇಂದ್ರ ತಲಪಿದೆ. ಆನಂತರ ಮತಯಂತ್ರಗಳನ್ನು ಎಣಿಕೆ ಕೇಂದ್ರದ ಪ್ರತ್ಯೇಕ ಭದ್ರತಾ ಕೊಠಡಿಗಳಲ್ಲಿ ಇರಿಸಿ ಬಿಗಿ ಭದ್ರತೆಯೊಂದಿಗೆ ಚುನಾವಣಾ ವೀಕ್ಷಕರು ಮತ್ತು ಅಭ್ಯರ್ಥಿಗಳ ರಾಜಕೀಯ ಪ್ರತಿನಿಧಿಗಳ ಸಮ್ಮುಖದಲ್ಲಿ ಬೀಗ ಮುದ್ರೆ ಹಾಕುವಷ್ಟರಲ್ಲಿ ಇಂದು ಸೂರ್ಯೋದಯವಾಗಿತ್ತು. ಹೀಗಾಗಿ ಚುನಾವಣಾ ಸಿಬ್ಬಂದಿ ರಾತ್ರಿಯೆಲ್ಲ ಕರ್ತವ್ಯ ನಿರತರಾಗಿದ್ದು ಕಂಡು ಬಂತು.

ಮತ ಎಣಿಕೆಗೆ ಜಿಲ್ಲಾಡಳಿತ ಸಿದ್ಧತೆ

ವಿಧಾನಸಭಾ ಸಾರ್ವತ್ರಿಕ ಚುನಾವಣೆಯೊಂದಿಗೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ತಾ. 15 ರಂದು (ನಾಳೆ) ನಗರದ ಸಂತ ಜೋಸೆಫರ ಶಾಲೆಯಲ್ಲಿ ನಡೆಯಲಿದ್ದು, ಜಿಲ್ಲಾಡಳಿತವು ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ನಾಳೆ ಬೆಳಿಗ್ಗೆ 7 ಗಂಟೆಗೆ ಎಲ್ಲಾ ಮತ ಎಣಿಕೆ ಸಿಬ್ಬಂದಿಗಳು ಮತ ಎಣಿಕೆ ಕೇಂದ್ರಕ್ಕೆ ತಲಪಲಿದ್ದು, ಅಭ್ಯರ್ಥಿಗಳು ಹಾಗೂ ಮತ ಎಣಿಕೆ ಏಜೆಂಟರು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಲಿದ್ದಾರೆ. ಬೆಳಿಗ್ಗೆ 7.45 ಗಂಟೆಗೆ ಹಾಜರಿದ್ದವರ ಸಮ್ಮುಖದಲ್ಲಿ ಮತಯಂತ್ರಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮ್ ಬೀಗ ತೆಗೆದು ಎಣಿಕೆ ಟೇಬಲ್‍ಗಳಿಗೆ ರವಾನಿಸಲಾಗುತ್ತದೆ. ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಮತ ಎಣಿಕೆ ಆರಂಭವಾಗಲಿದೆ.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಮತ ಎಣಿಕೆ ಟೇಬಲ್‍ಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಮತ ಎಣಿಕೆ ಟೇಬಲ್‍ಗೆ

(ಮೊದಲ ಪುಟದಿಂದ) ಒಬ್ಬರು ಮೇಲ್ವಿಚಾರಕ ಅಧಿಕಾರಿ ಮತ್ತು ಸಹಾಯಕ ಮೇಲ್ವಿಚಾರಕ ಅಧಿಕಾರಿ, ಮೈಕ್ರೋ ವೀಕ್ಷಕರಾಗಿ ಒಬ್ಬರು ಹಾಗೂ ಪ್ರತಿ ಅಭ್ಯರ್ಥಿ ಅಥವಾ ಏಜೆಂಟರಿಗೆ ಅವಕಾಶ ಕಲ್ಪಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಸಿಪಿಎಂಎಫ್ ಭದ್ರತೆ ಒದಗಿಸ ಲಾಗಿದ್ದು, ಮೊಬೈಲ್ ಪೋನ್‍ನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಮತ ಎಣಿಕೆ ಕೇಂದ್ರದ ಸಮೀಪದಲ್ಲಿ ಮಾಧ್ಯಮ ಕೇಂದ್ರ ತೆರೆಯಲಾಗಿದ್ದು, ರಾಷ್ಟ್ರೀಯ ಮಾಹಿತಿ ಕೇಂದ್ರದ(ಎನ್‍ಐಸಿ) ಸಾಫ್ಟ್‍ವೇರ್ ಮೂಲಕ ಕಾಲಕಾಲಕ್ಕೆ ಮಾಹಿತಿ ಒದಗಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.

ಚುನಾವಣಾ ಸಾಮಾನ್ಯ ವೀಕ್ಷಕರಾದ ಟಿ.ಶ್ರೀಕಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ. ಸತೀಶ್ ಕುಮಾರ್, ಚುನಾವಣಾಧಿಕಾರಿಗಳಾದ ರಮೇಶ್ ಕೋನರೆಡ್ಡಿ, ರಾಜು, ತಹಶೀಲ್ದಾರರು ಇತರರು ಮತ ಎಣಿಕೆ ಸಿದ್ಧತೆ ಬಗ್ಗೆ ಪರಿಶೀಲನೆ ಮಾಡಿದರು.