ವೀರಾಜಪೇಟೆ, ಮೇ 13: ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ರಾಷ್ಟ್ರೀಯ ಪಕ್ಷಗಳಿಂದ ಮತದಾನದ ಮುನ್ನ ಕೊನೆ ಗಳಿಗೆಯಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಪಾವಿತ್ರ್ಯತೆ ಹೊಂದಿರುವ ಚುನಾವಣೆಯಲ್ಲಿ ಮದ್ಯ ಹಾಗೂ ಹಣದ ಆಮಿಷವೊಡ್ಡಿ ಚುನಾವಣೆಯನ್ನು ಮೈಲಿಗೆ ಮಾಡಲಾಗಿದೆ. ಪಕ್ಷದ ತತ್ವ ಸಿದ್ದಾಂತವನ್ನು ಕಾಯ್ದುಕೊಂಡು ಜಾತ್ಯತೀತ ಜನತಾದಳ ಮೈಲಿಗೆ ಕೆಲಸಕ್ಕೆ ಕೈ ಹಾಕುವ ಗೋಜಿಗೆ ಹೋಗಲಿಲ್ಲ. ಆದ್ದರಿಂದ ಮತದಾನದ ವಿದ್ಯಮಾನಗಳ ಪ್ರಕಾರ ಮೇಲ್ನೋಟಕ್ಕೆ ವೀರಾಜಪೇಟೆ ಕ್ಷೇತ್ರದಲ್ಲಿ ಜನತಾದಳ ಗೆಲುವನ್ನು ನಿರೀಕ್ಷಿಸದಿದ್ದರೂ, ತಾನು ವಿಚಲಿತನಾಗುವದಿಲ್ಲ. ಆದರೆ ಮಡಿಕೇರಿ ಕ್ಷೇತ್ರದಲ್ಲಿ ಜೀವಿಜಯ ಗೆಲುವು ಸಾಧಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ, ವೀರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದ್ದಾರೆ.

ಜನತಾದಳ ಪಕ್ಷದ ಚುನಾವಣಾ ಕಚೇರಿಯಲ್ಲಿ ಇಂದು ಪಕ್ಷದ ಜಿಲ್ಲಾ ಸಮಿತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಕೇತ್ ಪೂವಯ್ಯ ಪ್ರಜಾಪ್ರಭುತ್ವದ ಆಧಾರದ ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಈಗ ರಾಷ್ಟ್ರೀಯ ಪಕ್ಷಗಳಿಂದ ಗೆಲುವು ಸಾಧಿಸುವ ಜನಪ್ರತಿನಿಧಿ ಕೆಲಸ ಮಾಡುವುದಿಲ್ಲ, ಸೋತವನು ಪ್ರತಿಭಟನೆ ಮಾಡದಿರುವುದು ವಾಡಿಕೆಯಾಗಿ ಪರಿಣಮಿಸಿದೆ. ಕಳೆದ ನಾಲ್ಕೂವರೆ ದಶಕಗಳಿಂದಲೂ ಇದು ನಡೆದು ಬಂದಿರುವ ಸಂಪ್ರದಾಯ. ಈಗಲೂ ಇದು ಮುಂದುವರೆಯಲಿದೆ. ನಾನು ಈಗ ಜನಪ್ರತಿನಿಧಿಯಾಗದಿದ್ದರೂ ಮುಂದೆಯೂ ಒಬ್ಬ ಸಮಾಜ ಸೇವಕನಾಗಿ ರೈತರ, ಬೆಳೆಗಾರರ, ಕಾರ್ಮಿಕರ, ಕಡು ಬಡವರ ಕಣ್ಣೀರೊರೆಸುವ ಸೇವಕನಾಗಿ ದುಡಿಯುತ್ತೇನೆ. ತಾನು ಪಕ್ಷದ ಜಿಲ್ಲಾಧ್ಯಕ್ಷ ಆದ ನಂತರ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಿಂದ ಕುಟ್ಟದವರೆಗೆ, ನೆಲ್ಲಿಹುದಿಕೇರಿಯಿಂದ ಮಾಕುಟ್ಟದವರಗೆ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಿದ್ದೇನೆ. ಇಂದಿನ ಸಮೀಕ್ಷೆಗಳ ಪ್ರಕಾರ ಚುನಾವಣೆಯ ಫಲಿತಾಂಶದ ನಂತರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಜನತಾದಳ ಪಕ್ಷದ ಚುನಾವಣೆಯ ಪ್ರಣಾಳಿಕೆ ರೈತರ ಬೆಳೆಗಾರರ, ಕಾರ್ಮಿಕರ ಕಡುಬಡವರ ಪರವಾಗಿದ್ದು ಪ್ರಣಾಳಿಕೆ ರಾಷ್ಟ್ರೀಯ ಪಕ್ಷಗಳಿಗಿಂತಲೂ

(ಮೊದಲ ಪುಟದಿಂದ) ಭಿನ್ನವಾಗಿತ್ತು. ಪಕ್ಷವನ್ನು ಬೆಂಬಲಿಸಿದ ಮತದಾರರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮತದಾರರನ್ನು ಹಾಗೂ ವೀರಾಜಪೇಟೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಪಕ್ಷದ ಎಲ್ಲ ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷ ಸ್ಮರಿಸುತ್ತದೆ ಎಂದರು.

ನಗರ ಸಮಿತಿ ಅಧ್ಯಕ್ಷ ಪಿ.ಎ.ಮಂಜುನಾಥ್ ಮಾತನಾಡಿ ಮತದಾನಕ್ಕೆ ಎರಡು ದಿನಗಳ ಮೊದಲು ರಾಷ್ಟ್ರೀಯ ಪಕ್ಷಗಳು ಚುನಾವಣೆಯನ್ನು ಮೈಲಿಗೆ ಮಾಡುವ ಕೆಲಸಕ್ಕೆ ಕೈ ಹಾಕಿದ್ದರಿಂದ ಫಲಿತಾಂಶದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಸಂಭವವಿದೆ. ರಾಷ್ಟ್ರೀಯ ಪಕ್ಷಗಳ ಪ್ರತಿನಿಧಿಗಳ ಮದÀ್ಯ ಹಾಗೂ ಹಣದ ಆಮಿಷದ ಕುರಿತು ಸಂಬಂಧಿಸಿದ ಚುನಾವಣಾಧಿಕಾರಿಗೆ ದೂರು ನೀಡಿ ಅಧಿಕಾರಿಗಳು ಸ್ಪಂದಿಸಿದರೂ ಕೊನೆ ಗಳಿಗೆಯಾಗಿದ್ದರಿಂದ ಏನು ಮಾಡಲು ಸಾಧ್ಯವಾಗಿಲ್ಲ, ಪಕ್ಷದ ಕಾರ್ಯಕರ್ತರು ಅಭ್ಯರ್ಥಿ ಸಂಕೇತ್ ಪೂವಯ್ಯ ಅವರ ಸಮಾಜ ಸೇವೆಗೆ ಕೈಜೋಡಿಸಲಿದ್ದಾರೆ ಎಂದು ಹೇಳಿದರು.

ಪಕ್ಷದ ತಾಲೂಕು ಯುವ ಘಟಕದ ಅಧ್ಯಕ್ಷ ಅಮ್ಮಂಡ ವಿವೇಕ್ ಮಾತನಾಡಿ ಸ್ವಚ್ಛ ಹಾಗೂ ಪಾರದರ್ಶಕ ಆಡಳಿತವನ್ನು ನಿರೀಕ್ಷಿಸಿರುವ ಅಭ್ಯರ್ಥಿ ಹಾಗೂ ಸಮಾಜ ಸೇವೆಯ ಉದ್ದೇಶವನ್ನಿಟ್ಟುಕೊಂಡಿರುವ ಸಂಕೇತ್ ಪೂವಯ್ಯ ಅವರಿಗೆ ಈ ರಾಷ್ಟ್ರೀಯ ಪಕ್ಷಗಳ ಚುನಾವಣಾ ಮೈಲಿಗೆ ಕಾರ್ಯದಿಂದಾಗಿ ಹಿನ್ನಡೆ ಉಂಟಾಗುವಂತಾಗಿದೆ ಎಂದರು.

ಗೋಷ್ಠಿಯಲ್ಲಿ ಕ್ಷೇತ್ರದ ಅಧ್ಯಕ್ಷ ಎಸ್.ಎಚ್.ಮತೀನ್, ಪಿ.ಕೆ.ಅಬ್ದುಲ್ ಖಾದರ್, ನೂರ್ ಅಹಮ್ಮದ್, ಬಾಳೆಕುಟ್ಟೀರ ದಿನ್ನಿ, ಆಯೂಬ್, ಅಬ್ಬಾಸ್ ಮತ್ತಿತರರು ಹಾಜರಿದ್ದರು.