ಮಡಿಕೇರಿ, ಮೇ 13: ರಾಜ್ಯ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ 2018 ರ ಮತ ಸಮರ ಮುಗಿದು ಹೋಗಿದೆ. ರಾಜ್ಯ ಸೇರಿದಂತೆ ಕೊಡಗು ಜಿಲ್ಲೆಯಲ್ಲಿಯೂ ಈ ಬಾರಿ ಉತ್ತಮ ಮತದಾನವಾಗಿರುವದು ವಿಶೇಷವಾಗಿದೆ. ಇದೀಗ ಎಲ್ಲೆಲ್ಲೂ ಇದೇ ಚರ್ಚೆ. ರಾಜ್ಯದಲ್ಲಿ ಬಹುಮತ ಪಡೆಯುವ ಪಕ್ಷ ಯಾವದು, ಯಾವ ಅಭ್ಯರ್ಥಿಗಳಿಗೆ ಗೆಲುವು - ಸೋಲು ಎಂಬದು ಮಾತ್ರ. ಘಟಾನುಘಟಿಗಳಲ್ಲಿ ಯಾರು ಮುಗ್ಗರಿಸಲಿದ್ದಾರೆ. ಯಾರು ಪಟ್ಟಕ್ಕೇರಲಿದ್ದಾರೆ ಎಂಬ ಚರ್ಚೆ, ವಿಶ್ಲೇಷಣೆಗಳು ತಾ. 12 ರ ಸಂಜೆಯಿಂದಲೇ ಆರಂಭಗೊಂಡಿವೆ.ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲೆಯ ಎರಡು ಕ್ಷೇತ್ರಗಳಲ್ಲು ಜಿದ್ದಾಜಿದ್ದಿನ ಹಾಗೂ ಪೈಪೋಟಿಯುತವಾಗಿ ಸ್ಪರ್ಧೆ ನಡೆದಿದ್ದು, ಇಂತಹವರೇ ಜಯಗಳಿಸಲಿದ್ದಾರೆ ಎಂದು ಖಚಿತವಾಗಿ ಹೇಳುವಂತಿಲ್ಲ. ಬಹುತೇಕ ಅಭಿಪ್ರಾಯದಂತೆ ಮಡಿಕೇರಿ ಕ್ಷೇತ್ರದಲ್ಲಿ ಜೆ.ಡಿ.ಎಸ್. ಹಾಗೂ ಬಿ.ಜೆ.ಪಿ. ನಡುವೆ ನೇರ ಸ್ಪರ್ಧೆ ಎನ್ನಲಾಗಿದ್ದು, ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನತೆ ಮೂರನೆಯ ಸ್ಥಾನ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅದೇ ವೀರಾಜಪೇಟೆಯಲ್ಲಿ ಬಿ.ಜೆ.ಪಿ. ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿರುವ ಕುರಿತು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.ಈ ಕ್ಷೇತ್ರದಲ್ಲಿ ಜೆ.ಡಿ.ಎಸ್. ಅನ್ನು ಜನತೆ ತಮ್ಮದೇ ವಿಶ್ಲೇಷಣೆಯಲ್ಲಿ ಮೂರನೇ ಸ್ಥಾನಕ್ಕೆ ಇಟ್ಟಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇಂದು ಪತ್ರಿಕಾಗೋಷ್ಠಿ ನಡೆಸಿರುವ ಜೆ.ಡಿ.ಎಸ್. ಅಭ್ಯರ್ಥಿ ಸಂಕೇತ್ ಪೂವಯ್ಯ ಫಲಿತಾಂಶ ಏನೇ ಆದರೂ ಸಮಾಜಸೇವೆ ಮುಂದುವರಿಸುವದಾಗಿ ಹೇಳಿರುವದು ಇಲ್ಲಿ ಗಮನಾರ್ಹ.

ಮಡಿಕೇರಿ ಕ್ಷೇತ್ರದಲ್ಲಿ 8 ಮಂದಿ ಹಾಗೂ ವೀರಾಜಪೇಟೆಯಲ್ಲಿ ಮೂರು ಮಂದಿ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಇವರ ಸ್ಪರ್ಧೆ ಘಟಾನುಘಟಿಗಳ ಸ್ಪರ್ಧೆಯ ನಡುವೆ ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತಿದೆ.

ಪಕ್ಷ ರಾಜಕೀಯದ ಜಿದ್ದಾಜಿದ್ದಿ ಸೇರಿದಂತೆ ಹತ್ತು ಹಲವಾರು ಕಾರಣಗಳಿಂದಾಗಿ 2018 ರ ಚುನಾವಣೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಮತದಾರ ಪ್ರಭು ತಮ್ಮನ್ನು ಪ್ರತಿನಿಧಿಸಬೇಕಾದ ಅಭ್ಯರ್ಥಿ ಯಾರಾಗಬೇಕೆಂದು ಈಗಾಗಲೇ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಆಗಿದೆ.

ಇದರ ಫಲಿತಾಂಶ ತಾ. 15 ರಂದು (ನಾಳೆ) ಹೊರ ಬೀಳಲಿದ್ದು, ಈತನಕ ಕೌತುಕ ಮುಂದುವರಿಯಲಿದೆ.