ಆಲೂರುಸಿದ್ದಾಪುರ/ ಒಡೆಯನಪುರ : ಶನಿವಾರಸಂತೆ ವ್ಯಾಪ್ತಿಯ ಆಲೂರುಸಿದ್ದಾಪುರ, ಮಾಲಂಬಿ, ನಿಡ್ತ, ಗೋಪಾಲಪುರ, ಹಂಡ್ಲಿ, ಶನಿವಾರಸಂತೆ ಪಟ್ಟಣದ 1ನೇ ವಿಭಾಗ ಮತ್ತು ತ್ಯಾಗರಾಜ ಕಾಲೋನಿ, ದುಂಡಳ್ಳಿ ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ 11-30 ರ ವರೆಗೆ ನೀರಸ ಮಾತದಾನವಾಗಿದೆ. ಮಧ್ಯಾಹ್ನ 12 ಗಂಟೆಯ ನಂತರ ಮತದಾನ ಚುರುಕುಗೊಂಡಿತು. ಈ ಚುನಾವಣೆಯಲ್ಲಿ ಎ.ವಿ.ಎಂ ಮತಯಂತ್ರದ ಜೊತೆಯಲ್ಲಿ ವಿ.ವಿ.ಪ್ಯಾಟ್‍ನಲ್ಲಿ ಮತದಾರನ ಮತ ಚಲಾವಣೆ ಆಗಿರುವ ಬಗ್ಗೆ ಮನದಟ್ಟಾಗಲು 7 ರಿಂದ 10 ಸೆಕೆಂಡು ಸಮಯ ವ್ಯಯವಾಗುವ ಹಿನ್ನೆಲೆಯಲ್ಲಿ ಮತದಾನ ವಿಳಂಬವಾಗುತ್ತಿತ್ತು. ಆದರೂ ಈ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮಧ್ಯಾಹ್ನ 12 ಗಂಟೆಯ ನಂತರ ಮತದಾರರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿತು. ಮಧ್ಯಾಹ್ನ 12 ಗಂಟೆಗೆ ಸರಾಸರಿ ಶೇ15 ಕ್ಕಿಂತ ಕಮ್ಮಿ ಮತದಾನವಾಗಿತ್ತು. ಅಂಕನಹಳ್ಳಿ ಮತಗಟ್ಟೆ 39 ರನ್ನು ಸೂಕ್ಷ್ಮ ಮತಗಟ್ಟೆ ಎಂದು ಘೋಷಣೆ ಮಾಡಲಾಗಿದ್ದರೂ ಈ ಮತಗಟ್ಟೆಯಲ್ಲಿ ಮಧ್ಯಾಹ್ನ 12 ಗಂಟೆಯ ತನಕ ಬೆರಳೆಣಿಕೆಯಷ್ಟು ಮತದಾರರು ಬಂದು ಮತ ಚಲಾಯಿಸುತ್ತಿದ್ದರು, ಮಧ್ಯಾಹ್ನ 2 ಗಂಟೆಯ ನಂತರ ಮತದಾನ ತುಸು ಚುರುಕುಗೊಂಡಿತು. ಶನಿವಾರಸಂತೆ ವ್ಯಾಪ್ತಿಯ ವಿವಿಧ ಮತಗಟ್ಟೆಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಸರಾಸರಿ ಶೇ 45 ರಷ್ಟು ಮತದಾನವಾಗಿತ್ತು. ಮತಗಟ್ಟೆಯಿಂದ 100 ಮೀಟರ್ ದೂರದಲ್ಲಿ ಪಕ್ಷಗಳ ಕಾರ್ಯಕರ್ತರು ಮತ ಪ್ರಚಾರ ಮಾಡಲು ಅವಕಾಶ ಇಲ್ಲದಿದ್ದರೂ ಕೆಲವು ಪಕ್ಷಗಳ ಕಾರ್ಯಕರ್ತರು ನಿಯಮವನ್ನು ಮೀರಿ ಪ್ರಚಾರ ಮಾಡುತ್ತಿದ್ದರು ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸರು ಕಾರ್ಯಕರ್ತರನ್ನು ಅಲ್ಲಿಂದ ಚದುರಿಸಿದರು. ಹೊಸಗುತ್ತಿ ಮತಗಟ್ಟೆಯಲ್ಲಿ ಒಟ್ಟು 500 ಮಂದಿ ಮತದಾರರಿದ್ದು ಈ ಮತಗಟ್ಟೆಯಲ್ಲಿ ಆಗೊಬ್ಬ ಈಗೊಬ್ಬ ಮತದಾರರು ಬಂದು ಮತ ಚಲಾಯಿಸುತ್ತಿದ್ದರು.

ಶನಿವಾರಸಂತೆ ವ್ಯಾಪ್ತಿಯ ಪ್ರತಿಯೊಂದು ಮತಗಟ್ಟೆಗಳಲ್ಲಿ ಪುರುಷ ಮತದಾರಗಿಂತ ಮಹಿಳಾ ಮತದಾರರು ಭಾಗವಹಿಸಿದ್ದು ಕಂಡು ಬಂದಿತು. ಹೆಚ್ಚಾಗಿ ಮೊದಲ ಬಾರಿಗೆ ಅವಕಾಶ ಪಡೆದ ಯುವತಿಯರು ಸರತಿ ಸಾಲಿನಲ್ಲಿ ನಿಂತಿದ್ದರು. ಆಲೂರುಸಿದ್ದಾಪುರ ಮತಗಟ್ಟೆ ವ್ಯಾಪ್ತಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಸೇರಿಕೊಂಡು ಪ್ರಚಾರ ಮಾಡುತ್ತಿದ್ದದು ಕಂಡು ಬಂದಿತ್ತು. ಮಾಲಂಬಿ ಮತಗಟ್ಟೆ ವ್ಯಾಪ್ತಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸೇರಿಕೊಂಡು ಜೊತೆಯಲ್ಲಿ ಪ್ರಚಾರ ಮಾಡುತ್ತಿದ್ದರು. ಶನಿವಾರಸಂತೆ 1ನೇ ವಿಭಾಗದ ಮತಗಟ್ಟೆ ವ್ಯಾಪ್ತಿಯಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ಪಕ್ಷದ ಟೋಪಿಯನ್ನು ಧರಿಸಿ ಪ್ರಚಾರ ಮಾಡುತ್ತಿದ್ದರು.

ಮುಳ್ಳೂರು ಗ್ರಾಮದ ನಿವಾಸಿ ಪೊನ್ನಮ್ಮ (75) ಶುಕ್ರವಾರ ರಾತ್ರಿ ನಿಧನರಾಗಿದ್ದರು, ಶನಿವಾರ ಅವರ ಅಂತ್ಯ ಸಂಸ್ಕಾರ ಕಾರ್ಯವನ್ನು ಮುಗಿಸಿದ ನಂತರ ಅವರ ಅಳಿಯ ಕೃಷ್ಣಕುಟ್ಟಿ ಸೇರಿದಂತೆ ಅವರ ಕುಟುಂಬದ ಎಲ್ಲಾ ಸದಸ್ಯರು ನಿಡ್ತ ಮತಗಟ್ಟೆಗೆ ತೆರಳಿ ಮತದಾನ ಮಾಡಿರುವದು ವಿಶೇಷವಾಗಿತ್ತು.