ಗೋಣಿಕೊಪ್ಪ: ದಕ್ಷಿಣ ಕೊಡಗಿನಲ್ಲಿ ಮತದಾನ ಸುಸೂತ್ರವಾಗಿ ನಡೆಯಿತು. ಬಹುತೇಕ ಬೂತ್‍ಗಳಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಲಾಗಿತ್ತು. ಅಧಿಕಾರಿಗಳು ಮತದಾರರನ್ನು ಮತದಾನ ಮಾಡಲು ಸ್ವಾಗತಿಸುತ್ತಿದ್ದುದು ಕಂಡುಬಂತು. ಕೈಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾರರ ಬೆರಳಿಗೆ ಹಚ್ಚುವ ಶಾಯಿ ಸರಿಯಾಗಿ ಅಂಟದೆ ಬೂತ್ ಸಿಬ್ಬಂದಿ ಮೂರ್ನಾಲ್ಕು ಬಾರಿ ಹಚ್ಚುತ್ತಿದ್ದುದು ಕಂಡುಬಂತು. ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಕಳೆದ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಕಾರಣ ಮೊಬೈಲ್ ಚಾರ್ಜ್ ಇಲ್ಲದೆ ಸುತ್ತೋಲೆ ಸಂದೇಶಗಳನ್ನು ಪಡೆಯಲು ಅಧಿಕಾರಿ - ಸಿಬ್ಬಂದಿಗಳು ಪರದಾಡುತ್ತಿದ್ದುದು ಗೋಚರಿಸಿತು. ತಿತಿಮತಿ ತಾರಿಕಟ್ಟೆ ಸರ್ಕಾರಿ ಶಾಲೆಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮಿನಿ ಪೊನ್ನಪ್ಪ ಮತದಾನ ಮಾಡಿದರು. ಈ ವ್ಯಾಪ್ತಿಯಲ್ಲಿ ಪಕ್ಷೇತರ ಅಭ್ಯರ್ಥಿ ದೊಡ್ಡಯ್ಯ ಏಕಾಂಗಿ ಮತಯಾಚನೆಯಲ್ಲಿ ತೊಡಗಿದ್ದರು. ಗೋಣಿಕೊಪ್ಪ ವೃತ್ತ ನಿರೀಕ್ಷಕ ಹರೀಶ್ಚಂದ್ರ ಅವರು ಗೋಣಿಕೊಪ್ಪ ಮಹಿಳಾ ಸಮಾಜ ಮತಗಟ್ಟೆಗೆ ಆಗಮಿಸುವ ವೇಳೆ ದ್ವಾರದ ಬಳಿ ಭೂಮಿಗೆ ನಮಿಸಿ ಒಳ ಬಂದರು. ಈ ವೇಳೆ ಪತ್ರಕರ್ತರು ಪ್ರಶ್ನಿಸಿದಾಗ ಯಾವದೇ ತೊಂದರೆ ಉಂಟಾಗದೆ ಮತದಾನ ನಡೆಯಲಿ ಎಂಬ ಕಾರಣಕ್ಕೆ ನಮಿಸಿದ್ದಾಗಿ ಅವರು ಹೇಳಿದರು. ಇನ್ನುಳಿದಂತೆ ಬಾಳೆಲೆ, ಪೊನ್ನಪ್ಪಸಂತೆ, ಕಾರ್ಮಾಡು, ಕಾನೂರು ಭಾಗದಲ್ಲಿ ಚುನಾವಣಾ ಭರಾಟೆ ಅಷ್ಟಾಗಿ ಕಂಡು ಬರಲಿಲ್ಲ. ಚುನಾವಣಾ ಭರಾಟೆ ಅಷ್ಟಾಗಿ ಕಂಡು ಬರಲಿಲ್ಲ.