ಕುಶಾಲನಗರ, ಮೇ 12: ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ವೇಳೆಗೆ ಭಾರೀ ಗಾಳಿ ಮಳೆ ಬಂದ ಹಿನ್ನೆಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು. ಮತಗಟ್ಟೆಗಳಲ್ಲಿ ಮತದಾನಕ್ಕೆ ಬಂದಿದ್ದ ಮತದಾರರಿಗೂ ಭಾರೀ ತೊಂದರೆ ಉಂಟಾಯಿತು. ಅಭ್ಯರ್ಥಿಗಳ ಪರ ಪ್ರಚಾರದಲ್ಲಿದ್ದ ಕಾರ್ಯಕರ್ತರು ಮಳೆಯಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದ ದೃಶ್ಯ ಕಂಡುಬಂತು.

ಸರಕಾರಿ ಪಾಲಿಟೆಕ್ನಿಕ್ ಮುಂಭಾಗ ಹೊಟೇಲ್ ಬಳಿ ಮರದ ರೆಂಬೆಗಳು ಮುರಿದು ವಿದ್ಯುತ್ ತಂತಿಗಳಲ್ಲಿ ನೇತಾಡುತ್ತಿದ್ದವು. ಈ ಸಂದರ್ಭ ಮುಖ್ಯರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳಿಗೆ ಉಂಟಾಗುತ್ತಿದ್ದ ಅಪಾಯ ತಪ್ಪಿದೆ. ಕಾವೇರಿ ನಿಸರ್ಗ ಧಾಮದಲ್ಲಿ ಮಳೆ ಸಂದರ್ಭ ಸಾವಿರಾರು ಪ್ರವಾಸಿಗರು ಸಿಲುಕಿ ಕೊಂಡಿದ್ದು ಮರಗಳ ರೆಂಬೆಗಳು ಮುರಿದು ಬಿದ್ದಿತ್ತಾದರೂ ಅಪಾಯದಿಂದ ಪಾರಾಗಿದ್ದಾರೆ.