ಮಡಿಕೇರಿ, ಮೇ 12: ಕರ್ನಾಟಕ ವಿಧಾನಸಭೆಗೆ ಇಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಪೂರ್ಣ ಮತದಾನ ದೊಂದಿಗೆ ಶೇ. 75.02ರಷ್ಟು ಸಾಧನೆಯಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಪ್ರತಿಕ್ರಿಯಿಸಿದರು. ಈ ರಾತ್ರಿ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಮತದಾರರು ಶಾಂತಿಯುತ ಮತದಾನಕ್ಕೆ ಸಹಕರಿಸಿದ್ದು, ಕರ್ತವ್ಯನಿರತ ಸಿಬ್ಬಂದಿ, ರಕ್ಷಣಾ ದಳದ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅವರು, ಜಿಲ್ಲೆಯಲ್ಲಿ ಯಾವದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಮತದಾನ ಶಾಂತಿಪೂರ್ಣವಾಗಿ ನಡೆಯುವಲ್ಲಿ ಸಹಕರಿಸಿರುವ ಜನತೆ, ಈ ದಿಸೆಯಲ್ಲಿ ಶ್ರಮಿಸಿದ ಎಲ್ಲಾ ಇಲಾಖೆಗಳ ಮತ್ತು ಅರೆಸೇನಾ ಪಡೆ, ಗೃಹರಕ್ಷಕ, ಕೇಂದ್ರ ಮೀಸಲು, ರಾಜ್ಯ ಮೀಸಲು ಮತ್ತು ಜಿಲ್ಲಾ ಪೊಲೀಸ್ ಸಿಬ್ಬಂದಿಗಳ ಸಹಕಾರಕ್ಕೆ ಮುಕ್ತ ಪ್ರಶಂಸೆ ವ್ಯಕ್ತಪಡಿಸಿದರು.

ಸಂಜೆಗತ್ತಲೆ ನಡುವೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಸೇರಿದಂತೆ ಮಡಿಕೇರಿ ಕ್ಷೇತ್ರದ ಮತಯಂತ್ರಗಳು ಉಪವಿಭಾಗಾಧಿಕಾರಿ ರಮೇಶ್ ಕೋನಾರೆಡ್ಡಿ, ತಹಶೀಲ್ದಾರರುಗಳಾದ ಗೋವಿಂದ ರಾಜು, ಶಾರದಾಂಬ ಹಾಗೂ ರವಿ ಅವರುಗಳ ಮೇಲುಸ್ತುವಾರಿಯಲ್ಲಿ ಸಂತ ಜೋಸೆಫರ ಶಾಲೆಯ ಭದ್ರತಾ ಕೊಠಡಿಗೆ ತಂದಿರಿಸಲಾಯಿತು.

ತಂಡೋಪತಂಡವಾಗಿ ಮತಯಂತ್ರಗಳನ್ನು ತಂದ ಸಿಬ್ಬಂದಿ ಹಾಗೂ ಬೆಂಗಾವಲು ರಕ್ಷಣಾದಳ ಮಂದಿಗೆ ರಾತ್ರಿ ಊಟದ ವ್ಯವಸ್ಥೆ ಕಲ್ಪಿಸುವ ಮುಖಾಂತರ, ಆಯಾ ಮಾರ್ಗಗಳಲ್ಲಿ ರಾಜ್ಯ ಸಾರಿಗೆ ಬಸ್ ಹಾಗೂ ಇತರ ವಾಹನಗಳಲ್ಲಿ ಕಳುಹಿಸಿಕೊಡಲಾಯಿತು.

ದೂರದ ಮುಂಡ್ರೋಟು, ಕುಟ್ಟ, ಕೊಡ್ಲಿಪೇಟೆ, ಕಡಮಕಲ್, ಕರಿಕೆ ಮುಂತಾದೆಡೆಗಳಿಂದ ಅಂತಿಮವಾಗಿ ಮತಯಂತ್ರಗಳು ಭದ್ರತೆಯ ನಡುವೆ ಆಗಮಿಸುವದರೊಂದಿಗೆ ಭದ್ರತಾ ಕೊಠಡಿಯಲ್ಲಿ ಇರಿಸಿ, ಅಭ್ಯರ್ಥಿಗಳು ಹಾಗೂ ಆಯಾ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಚುನಾವಣಾ ವೀಕ್ಷಕರ ಸಮಕ್ಷಮ ಬೀಗ ಮುದ್ರೆಯೊಂದಿಗೆ ಸಂಗ್ರಹಿಸಿ ಇಡಲಾಯಿತು.