ಮಡಿಕೇರಿ, ಮೇ 12: ಕರ್ನಾಟಕ ವಿಧಾನಸಭೆಯ 208ನೇ ಮಡಿಕೇರಿ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆಯಿಂದಲೇ ಬಿರುಸಿನ ಮತದಾನದೊಂದಿಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ. 48ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದರು. ಜಿಲ್ಲಾ ಕೇಂದ್ರ ಮಡಿಕೇರಿಯ ಸರಕಾರಿ ಪ.ಪೂ. ಕಾಲೇಜಿನ ಮತಗಟ್ಟೆಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಜಿ. ಬೋಪಯ್ಯ ಅವರು ತಮ್ಮ ಪತ್ನಿ ಹಾಗೂ ಪುತ್ರಿಯೊಂದಿಗೆ ಆಗಮಿಸಿ ಪ್ರಥಮವಾಗಿ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ಇದೇ ಮತಗಟ್ಟೆಯಲ್ಲಿ ವಯೋವೃದ್ಧೆ ವಿಶಾಲಾಕ್ಷಮ್ಮ ಸದಾಶಿವರಾವ್ (87) ತಮ್ಮ ಮೊಮ್ಮಗಳು ಸ್ವಾತಿ ಸಹಾಯದಿಂದ ತಮ್ಮ ಅಮೂಲ್ಯ ಮತದಾನ ಮಾಡಿದರು. ನಗರದ ಬಹುತೇಕ ಮತಗಟ್ಟೆಗಳಲ್ಲಿ ಬೆಳಿಗ್ಗೆ ಹೆಚ್ಚಿನ ಮತದಾರರು ಸರದಿಯಲ್ಲಿ ನಿಂತು ಹಕ್ಕು ಚಲಾಯಿಸಿ ತಮ್ಮ ತಮ್ಮ ಕೆಲಸಗಳಿಗೆ ತೆರಳುತ್ತಿದ್ದ ಸಾಮಾನ್ಯ ದೃಶ್ಯ ಎದುರಾಯಿತು.

ನಕ್ಸಲ್ ಮತಗಟ್ಟೆ : ಈ ಹಿಂದೆ ನಕ್ಸಲರು ಕಾಣಿಸಿಕೊಂಡಿದ್ದ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಕಾಲೂರು ಗ್ರಾಮದ ಮತಗಟ್ಟೆಯಲ್ಲಿ ಬೆಳಿಗ್ಗೆಯಿಂದಲೇ ವ್ಯಾಪಕ ಭದ್ರತೆ ನಡುವೆಯೂ, ಕಾಲೂರು, ಬೇರೆಬೆಳ್ಳಚ್ಚು, ದೇವಸ್ತೂರು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ಉತ್ಸಾಹದಿಂದ ತಮ್ಮ ಮತ ಚಲಾಯಿಸಿ ಹಿಂತೆರಳುತ್ತಿದ್ದ ದೃಶ್ಯ ಕಂಡುಬಂತು. ಬೆಳಿಗ್ಗೆ 10 ಗಂಟೆ ವೇಳೆಗೆ ಈ ಮತಗಟ್ಟೆಯ 792 ಮತದಾರರ ಪೈಕಿ 238 ಮಂದಿ ತಮ್ಮ ಮತ ಚಲಾಯಿಸಿದ್ದರು.

ಹಮ್ಮಿಯಾನ - ಮುಟ್ಲು : ಇನ್ನು ಜಿಲ್ಲೆಯ ಗಡಿ ಗ್ರಾಮಗಳಾದ ಹಮ್ಮಿಯಾಲ ಮತಗಟ್ಟೆಯಲ್ಲಿ ಬೆಳಿಗ್ಗೆ 10.30ರ ವೇಳೆಗೆ 88 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಮತಗಟ್ಟೆಯ 187 ಮತದಾರರ ಪೈಕಿ ಅನೇಕರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕಾರಣ ಅಲ್ಲಿಂದ ಬರುವದು ವಿಳಂಬವಾದ್ದರಿಂದ ಮತದಾನ ನಿಧಾನಗೊಂಡಿತ್ತು. ಮುಟ್ಲು ಗ್ರಾಮದ ಮತಗಟ್ಟೆಯಲ್ಲಿ 10.45ರ ವೇಳೆಗೆ 241 ಮಂದಿ ಒಟ್ಟು ಮತದಾರರ ಪೈಕಿ 110 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಸುಮಾರು ಶೇ. 40ಕ್ಕೂ ಅಧಿಕ ಮತದಾನವಾಗಿತ್ತು.

ಕಾರ್ಯನಿರತ ರೈತ : ಅದೇ ಹಮ್ಮಿಯಾನ ಗ್ರಾಮದಲ್ಲಿ ಮತ್ತು ಮುಟ್ಲುವಿನ ಗ್ರಾಮಸ್ಥರು ಚುನಾವಣೆಯ ಭರಾಟೆಯ ನಡುವೆ ಮತದಾನ ಪೂರೈಸಿ ಬೆಳೆ ಕುಯಿಲಿನಲ್ಲಿ ನಿರತರಾಗಿದ್ದ ದೃಶ್ಯ ಎದುರಾಯಿತು. ಮುಟ್ಲುವಿನಲ್ಲಿ ವ್ಯಕ್ತಿಯೊಬ್ಬರ ಸಾವಿನ ಕಾರಣ ಮತದಾನ ನಿಧಾನಗೊಂಡಿದ್ದು ಕೇಳಿಬಂತು.

ಸೋಮವಾರಪೇಟೆ ತಾಲೂಕು : ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಮತಗಟ್ಟೆಯಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಒಟ್ಟು 740 ಮಂದಿ ಮತದಾರರ ಪೈಕಿ 300 ಮಂದಿ ಮತದಾನ ಮಾಡಿದ್ದರು. ಅಂತೆಯೇ ಬೆಟ್ಟದಳ್ಳಿ ಮತಗಟ್ಟೆಯಲ್ಲಿ ಒಟ್ಟು 677 ಮಂದಿ ಮತದಾರರ ಪೈಕಿ 11.30ರ ವೇಳೆಗೆ 278 ಮಂದಿ ಹಕ್ಕು ಚಲಾಯಿಸಿದ್ದರು.

ಶಾಂತಳ್ಳಿ : ಸೋಮವಾರಪೇಟೆ ಬಳಿ ಶಾಂತಳ್ಳಿ ಮತಗಟ್ಟೆಯಲ್ಲಿ ಬಿಜೆಪಿ - ಜೆಡಿಎಸ್ ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆ.ಎಂ. ಲೋಕೇಶ್ ಸಹಿತ ಮಾಜಿ ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಎಸ್.ಜಿ. ಮೇದಪ್ಪ ಬೆಂಬಲಿಗರೊಂದಿಗೆ ಕಾಣಿಸಿಕೊಂಡರು. ಈ ಮತಗಟ್ಟೆಯಲ್ಲಿ ಒಟ್ಟು 679 ಮಂದಿ ಮತದಾರರ ಪೈಕಿ 11.50ಕ್ಕೆ 328 ಮಂದಿ ಹಕ್ಕು ಚಲಾಯಿಸಿದ್ದರು.

ಕಾರ್ಮಿಕರು ಬೀಡು : ಶಾಂತಳ್ಳಿಯಲ್ಲಿ ನಾಲ್ಕಾರು ಕುಟುಂಬಗಳ ಆಂಧ್ರ ಮೂಲದ ಕಾರ್ಮಿಕರು ರಿಲಯನ್ಸ್ ಸಂಸ್ಥೆಯ ಕೇಬಲ್ ಅಳವಡಿಕೆಗೆ ಮಣ್ಣು ಕೆಲಸಕ್ಕೆ ಬಂದವರು ಕಾಣಿಸಿಕೊಂಡು ಒಂದೆಡೆ ಟೆಂಟ್‍ಗಳಲ್ಲಿ ಬೀಡುಬಿಟ್ಟಿದ್ದು, ಆ ರಾಜ್ಯದವರಿಗೆ ಕರ್ನಾಟಕ ಚುನಾವu Éಯ ಪರಿಜ್ಞಾನ ಇಲ್ಲದಿರುವದು ಗೋಚರಿಸಿತು.

ಇನ್ನು ತಲ್ತರೆಶೆಟ್ಟಳ್ಳಿ ಮತಗಟ್ಟೆ ವ್ಯಾಪ್ತಿಯ ಒಟ್ಟು 792 ಮತದಾರರ ಪೈಕಿ 302 ಮಂದಿ ಮಧ್ಯಾಹ್ನ 12.30ಕ್ಕೆ ಹಕ್ಕು ಚಲಾಯಿಸಿದ್ದು ಕಂಡುಬಂತು.

ಬಿಳಿಗೇರಿಯಲ್ಲಿ ಪೂಜೆ : ಮಾಜಿ ಸಚಿವ ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ಅವರ ಗ್ರಾಮ ಬಿಳಿಗೇರಿಯಲ್ಲಿ ಗ್ರಾಮಸ್ಥರು ಅಲ್ಲಿನ ದೇವಾಲಯದಲ್ಲಿ ಪೂಜೆಯೊಂದಿಗೆ ಮತದಾನದಲ್ಲಿ ಪಾಲ್ಗೊಂಡಿದ್ದು ಕಂಡುಬಂತು. ಈ ಮತಗಟ್ಟೆಯಲ್ಲಿ ಬೆಳಿಗ್ಗೆ 8.30ರ ಸುಮಾರಿಗೆ ಅಭ್ಯರ್ಥಿ ಜೀವಿಜಯ ತಮ್ಮ ಸಂಸಾರದೊಂದಿಗೆ ಹಕ್ಕು ಚಲಾಯಿಸಿದ್ದರು. ಮಧ್ಯಾಹ್ನ 12.50ರ ಸುಮಾರಿಗೆ ಈ ಮತಗಟ್ಟೆಯಲ್ಲಿ 684 ಮತದಾರರ ಪೈಕಿ 318 ಮಂದಿ ಮತದಾನ ಮಾಡಿದರು.

ಮಾದಾಪುರ : ಮಾದಾಪುರ ಸರಕಾರಿ ಶಾಲೆಯಲ್ಲಿ ಸ್ಥಾಪಿಸಿದ್ದ ಪ್ರತ್ಯೇಕ ಮೂರು ಮತಗಟ್ಟೆಗಳ ಪೈಕಿ ಮಧ್ಯಾಹ್ನ 1.15ರ ವೇಳೆಗೆ ಒಂದೆಡೆ 599 ಮಂದಿಯ ಪೈಕಿ 327 ಮತದಾರರು ಮತದಾನ ಮಾಡಿದ್ದರು. ಇನ್ನೊಂದೆಡೆ 760 ಮತದಾರರಲ್ಲಿ 399 ಮಂದಿ ಹಾಗೂ ಮತ್ತೊಂದೆಡೆ 744 ಮಂದಿ ಪೈಕಿ 401 ಮತದಾರರು ಮತ ನೀಡಿದ್ದು ಕಂಡುಬಂತು. ಈ ಮತಗಟ್ಟೆ ಬಳಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮಂದಿ ಬಿರುಸಿನ ಪ್ರಚಾರ ನಡೆಸುತ್ತಾ, ಅಭ್ಯರ್ಥಿಗಳಿಗೆ ಮತ ನೀಡಲು ಮತದಾರರನ್ನು ಓಲೈಸುತ್ತಿದ್ದ ಚಿತ್ರಣ ಎದುರಾಯಿತು. ಕಾಂಗ್ರೆಸ್ ಪದಾಧಿಕಾರಿಗಳಾದ ಎಂ.ಪಿ. ಮನು ಮೇದಪ್ಪ, ಎಂ.ಎ. ವಸಂತ್, ಎಂ.ಎಸ್. ಪೆಮ್ಮಯ್ಯ ಸೇರಿದಂತೆ ಆರ್‍ಎಸ್‍ಎಸ್‍ನ ಡಿ.ಕೆ. ಡಾಲಿ, ಬಿಜೆಪಿಯ ಸಂದೇಶ್‍ಪ್ರಸನ್ನ, ಪಿ.ಎಸ್. ರತೀಶ್ ಮೊದಲಾದವರು ಮತಬೇಟೆಯಲ್ಲಿ ತೊಡಗಿದ್ದರು.

ಅಪ್ಪಚ್ಚು ರಂಜನ್ ಕುಟುಂಬ : ಮಾದಾಪುರ ಬಳಿಯ ಕುಂಬೂರು ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಬೆಳಿಗ್ಗೆ 7 ಗಂಟೆಗೆ ಮತದಾನಕ್ಕೆ ಧಾವಿಸಿದ್ದರು. ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡು 7.30ಕ್ಕೆ ಸರಿಪಡಿಸಿದ ಬೆನ್ನಲ್ಲೇ ಮಡಿಕೇರಿ ಕ್ಷೇತ್ರದ ಬಿಜೆಪಿ ಪ್ರತಿನಿಧಿ ತಮ್ಮ ಸಂಸಾರದೊಂದಿಗೆ ಮತ ಚಲಾಯಿಸಿದ್ದು ಕಂಡುಬಂತು.

ಉಳಿದಂತೆ ಗ್ರಾಮೀಣ ಭಾಗಗಳಲ್ಲಿ ಅಲ್ಲಲ್ಲಿ ಗ್ರಾಮವಾಸಿಗಳು ತಮ್ಮ ಹಕ್ಕು ಚಲಾಯಿಸುತ್ತಿದ್ದ ಸಾಮಾನ್ಯ ದೃಶ್ಯ ಎದುರಾಯಿತಾದರೂ, ಬಹುತೇಕ ಕಡೆಗಳಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾದಂತೆ ಭಾಸವಾಯಿತು. ಮಡಿಕೇರಿಯ ಮತಗಟ್ಟೆಯೊಂದರಲ್ಲಿ ಮಧ್ಯಾಹ್ನ 2 ಗಂಟೆ ವೇಳೆಗೆ 781 ಮಂದಿ ಮತದಾರರ ಪೈಕಿ 388 ಮಂದಿ ಆದಾಗಲೇ ತಮ್ಮ ಹಕ್ಕು ಚಲಾಯಿಸಿದ್ದರಾದರೂ, ಆ ಬಳಿಕ ನಿಧಾನಗತಿ ಕಂಡುಬಂತು.