ಮಡಿಕೇರಿ, ಮೇ 12: ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲವೆಡೆ ತಾಂತ್ರಿಕ ನ್ಯೂನತೆ ನಡುವೆಯು ಶಾಂತಿಯುತ ಮತದಾನ ನಡೆಯಿತು. ಮಡಿಕೇರಿ ಸೇರಿದಂತೆ ಜಿಲ್ಲೆಯ ಅನೇಕ ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ಬೆಳಗ್ಗಿನಿಂದಲೇ ಆರಂಭಗೊಂಡಿತು. ಇನ್ನೂ ಕೆಲವೆಡೆ ಮಧ್ಯಾಹ್ನದ ಬಳಿಕ ಮತದಾನ ಚುರುಕುಗೊಂಡಿತು. ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ ಹುಸಿಯಾಗಿದ್ದು, ಇಂದು ಮೋಡಕವಿದ ವಾತಾವರಣವಿದ್ದರೂ ಮಳೆಯಾಗದಿದ್ದುದರಿಂದ ತಂಪಿನ ವಾತಾವರಣದಲ್ಲಿ ಮತದಾನ ಸುಲಲಿತವಾಗಿ ನಡೆಯಿತು. ಆದರೆ ಕುಶಾಲನಗರ ವಿಭಾಗದಲ್ಲಿ ಸಂಜೆ 4 ಗಂಟೆ ಬಳಿಕ ಭಾರೀ ಮಳೆ ಸುರಿದು ಮತದಾನ ಪ್ರಕ್ರಿಯೆ ತೀರ ಅಸ್ತವ್ಯಸ್ಥೆ ಗೊಂಡಿತು. ಸಂಜೆ ವಿರಾಮವಾಗಿ ಮತದಾನಕ್ಕೆ ಹೊರಟಿದ್ದ ಮಂದಿ ತಮ್ಮ ಮನೆಗಳಲ್ಲೇ ಉಳಿದು ಶೇಕಡವಾರು ಮತದಾನ ಕುಂಠಿತಗೊಂಡಿತು. ಜಿಲ್ಲೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಸರಾಸರಿ ಶೇ. 75 ಮತದಾನವಾಗಿದೆ. ಮಡಿಕೇರಿಯಲ್ಲಿ ಶೇ. 77.5 ಹಾಗೂ ವೀರಾಜಪೇಟೆಯಲ್ಲಿ ಶೇ. 72.5 ಮತದಾನ ದಾಖಲುಗೊಂಡಿದೆ.

ಮಡಿಕೇರಿಯ ತಾಲೂಕು ಪಂಚಾಯಿತಿ ಆವರಣದಲ್ಲಿನ ಮತಗಟ್ಟೆಯಲ್ಲಿ ಇಎಂವಿ ಯಂತ್ರ ಕೈಕೊಟ್ಟು ಸುಮಾರು 1 ಗಂಟೆ ಕಾಲ ಮತದಾನ ಪ್ರಕ್ರಿಯೆ ಅಡಚಣೆ ಆಯಿತು ನೂತನ ಯಂತ್ರವನ್ನು ಅಳವಡಿಸಿದ ಬಳಿಕ ಸುಸೂತ್ರವಾಗಿ ನೆರವೇರಿತು. ನೆಮ್ಮಲೆ ಗ್ರಾಮದ ಬೂತ್ ಸಂಖ್ಯೆ 245ರಲ್ಲಿ ಮತಯಂತ್ರ ಸರಿ ಇಲ್ಲದೆ 1 ಗಂಟೆ 25 ನಿಮಿಷ ವಿಳಂಬ ಗೊಂಡಿತು. ಕೆಲವು ಮತದಾರರು ನಿರಾಶರಾಗಿ ಹಿಂತಿರುಗಿದರು. ಸೋಮವಾರಪೇಟೆ ತಾಲೂಕು ಕುಂಬೂರುವಿನ ಮತಗಟ್ಟೆ ಸಂಖ್ಯೆ 115ರಲ್ಲಿ ಇಎಂವಿ ತಾಂತ್ರಿಕ ದೋಷದಿಂದ ಮತದಾನ ಅರ್ಧ ಗಂಟೆ ತಡವಾಯಿತು. ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಅಪ್ಪಚ್ಚುರಂಜನ್ ಈ ಮತಗಟ್ಟೆಯಲ್ಲಿ ಅರ್ಧ ಗಂಟೆ ಕಾದು ಬಳಿಕ ಮತದಾನ ಮಾಡಿದರು. ದಕ್ಷಿಣ ಕೊಡಗಿನ ಕೆರೆತೊಟ್ಟು ಪೈಸಾರಿಯಲ್ಲಿ ಸುಮಾರು 200 ಮಂದಿ ಗಿರಿಜನ ಮತದಾರರು ಮತದಾನಕ್ಕೆ ಬಹಿಷ್ಕಾರ ಹಾಕಿದ ಘಟನೆ ನಡೆಯಿತು. ನಾಪೋಕ್ಲು, ಕಕ್ಕಬೆ ವಿಭಾಗದಲ್ಲಿ ರೆಸಾರ್ಟ್‍ವೊಂದರ ವಿರುದ್ಧ ಸಮರದಲ್ಲಿ ಅನೇಕ ಮಂದಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಘೋಷಿಸಿದ ಪ್ರಕರಣವೂ ನಡೆಯಿತು.

ಕಡಗದಾಳು, ಮೂರ್ನಾಡು, ಚೆಟ್ಟಳ್ಳಿ, ವೀರಾಜಪೇಟೆ, ಪೊನ್ನಂಪೇಟೆ, ಶ್ರೀಮಂಗಲ, ಕುಟ್ಟ, ಕಾನೂರು, ಆರ್ಜಿ, ಅಮ್ಮತ್ತಿ-ಕಾರ್ಮಾಡು, ಸಿದ್ದಾಪುರ, ನೆಲ್ಯಹುದಿಕೇರಿ, ವಾಲ್ನೂರು, ನಂಜರಾಯಪಟ್ಟಣ, ಕುಶಾಲನಗರ, ಕೂಡಿಗೆ, ಗುಡ್ಡೆಹೊಸೂರು, ಸುಂಟಿಕೊಪ್ಪ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಮತ್ತಿತರ ಕಡೆಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸಿದ್ದು ಕಂಡುಬಂದಿತು.

(ಮೊದಲ ಪುಟದಿಂದ) ಮತದಾನ ದಿನವಾದ ಶನಿವಾರ ಬೆಳಗ್ಗಿನ ವೇಳೆಯಲ್ಲಿ ಮತದಾರರು ಉತ್ಸಾಹದಿಂದ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದು ಕಂಡುಬಂದಿತು. ಮತಗಟ್ಟೆಗಳಲ್ಲಿ ಪ್ರಜಾತಂತ್ರದ ಹಬ್ಬದ ಸಡಗರದಲ್ಲಿ ಮತದಾರರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ವಿಶೇಷತೆ: ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದ ತಲಾ 5 ಮತಗಟ್ಟೆಗಳಲ್ಲಿ ಪಿಂಕ್, ಸಖಿ ಮತಗಟ್ಟೆಗಳಿಗೆ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಮಡಿಕೇರಿ ವಿಧಾನಸಭಾ ಕ್ಷೇತ್ರದ ನಗರದ ಸಂತ ಮೈಕಲರ ಶಾಲೆ, ಸಹಕಾರ ಸಂಘಗಳ ನಿರ್ವಹಣಾ ಸಂಸ್ಥೆ, ಬ್ಲಾಸಂ ಇಂಗ್ಲೀಷ್ ಮಾಧ್ಯಮ ಶಾಲೆ, ಕಡಗದಾಳು ಸರ್ಕಾರಿ ಪ್ರೌಢಶಾಲೆ, ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಹಾಗೆಯೇ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ವೀರಾಜಪೇಟೆಯ ಸುಂಕದಕಟ್ಟೆ ಸಮುದಾಯ ಭವನ, ತೆಲುಗರ ಬೀದಿ ಸಮುದಾಯ ಭವನ, ಸೆಂಟ್ ಆನ್ಸ್ ಪ್ರೌಢಶಾಲೆ, ಪಂಜರಪೇಟೆಯ ಉರ್ದು ಶಾಲೆ, ಹಾಗೆಯೇ ಬಿಟ್ಟಂಗಾಲದ ಗ್ರಾಮ ಪಂಚಾಯಿತಿ ಮತಗಟ್ಟೆಗಳಲ್ಲಿ ಸಖಿ ಮತಗಟ್ಟೆಗಳನ್ನು ಒಳಗೊಂಡಿತ್ತು. ಈ ಶಾಲೆಗಳಲ್ಲಿ ಪಿಂಕ್ ಬಣ್ಣದಲ್ಲಿ ಮತಗಟ್ಟೆ ಸ್ಥಾಪಿಸುವುದರ ಜೊತೆಗೆ, ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಿಂಕ್ ಬಣ್ಣದ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದು ವಿಶೇಷವಾಗಿತ್ತು.

ವಿಕಲಚೇತನರೇ ಮತಗಟ್ಟೆಗಳಲ್ಲಿ ಅಧಿಕಾರಿಗಳು: ವಿಕಲಚೇತನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇರುವ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ನಗರದ ತಾಲೂಕು ಪಂಚಾಯಿತಿ ಕಚೇರಿ ಮತ್ತು ವೀರಾಜಪೇಟೆಯ ಜಯಪ್ರಕಾಶ್ ಬಾಲಕಿಯರ ಪ್ರೌಢಶಾಲೆ, ಈ ಮತಗಟ್ಟೆಗಳಲ್ಲಿ ವಿಕಲಚೇತನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ಗಮನ ಸೆಳೆದರು.

ಕೊಡಗಿನ ಸಂಸ್ಕøತಿ ಬಿಂಬಿಸಿದ ಮತಗಟ್ಟೆಗಳು : ಮಡಿಕೇರಿ ವಿಧಾನಸಭಾ ಕ್ಷೇತ್ರದ ಗುಡ್ಡೆಹೊಸೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬೊಮ್ಮಾಡು ಸರ್ಕಾರಿ ಆಶ್ರಮ ಶಾಲೆ ಮತ್ತು ನಾಗರಹೊಳೆಯ ಸರ್ಕಾರಿ ಆಶ್ರಮ ಶಾಲೆಗಳಲ್ಲಿ ಕೊಡಗಿನ ಪಾರಂಪರಿಕ ಸಂಸ್ಕøತಿ ಬಿಂಬಿಸುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಹಿಂದೆ ಊರುಗಳಲ್ಲಿ ಚಪ್ಪರ ಹಾಕಿ ಮದುವೆ ಮಾಡುತ್ತಿದ್ದ ಸಂಭ್ರಮದ ವಾತಾವರಣದ ದೃಶ್ಯಗಳು ಈ ಪಾರಂಪರಿಕ ಮತಗಟ್ಟೆಗಳಲ್ಲಿ ಕಂಡುಬಂದವು.

ಜೊತೆಗೆ ನಗರದ ನಗರಸಭೆಯಲ್ಲಿ ಸ್ಥಾಪಿಸಲಾಗಿದ್ದ ಮಾದರಿ ಮತಗಟ್ಟೆ ಆಕರ್ಷಣೀಯವಾಗಿತ್ತು. ಈ ಮತಗಟ್ಟೆಯಲ್ಲಿ ಹೊಸ ಮತದಾರರಿಗೆ ಸನ್ಮಾನಿಸಿ ಗೌರವಿಸುವ ಕಾರ್ಯವೂ ನಡೆಯಿತು. ಮತದಾನ ಮಾಡಿದವರೇ ಶೂರರು ಎಂಬ ಸಂದೇಶವುಳ್ಳ ಕುರ್ಚಿಯಲ್ಲಿ ಕೂರಿಸಿ ಯುವ ಮತದಾರರನ್ನು ಗೌರವಿಸಿದ್ದು, ಗಮನ ಸೆಳೆಯಿತು. ನೂತನ ಮತದಾರರಿಗೆ ಪೇಟ, ಶಾಲು ಹೊದಿಸಿ ಮತದಾರರು ಮತದಾರರಲ್ಲಿ ಮತದಾನದ ಮಹತ್ವ ಬಗ್ಗೆ ತಿಳಿಸುವ ಕೆಲಸವು ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವದಿಂದ ನಡೆದುದ್ದು ವಿಶೇಷವಾಗಿತ್ತು. ಮೈಸೂರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ದೀಪಾಂಜಲಿ ಬಿ.ಎಲ್. ಮಡಿಕೇರಿಯ ನಿವಾಸಿಯಾಗಿ ಇಂದು ಪ್ರಥಮ ಮತದಾನ ಮಾಡಿ ಸನ್ಮಾನಕ್ಕೆ ಪಾತ್ರರಾದರು. ‘ನಾನು ಸನ್ಮಾನಕ್ಕಾಗಿ ಮತದಾನ ಮಾಡಲಿಲ್ಲ. ಇದು ನನ್ನ ಆದ್ಯ ಕರ್ತವ್ಯ ಎಂದು ಆಕೆ ‘ಶಕ್ತಿ’ಯೊಂದಿಗೆ ನುಡಿದರು.

ನಗರದ ಸಂತ ಮೈಕಲರ ಶಾಲೆಯ ಪಿಂಕ್ ಮತಗಟ್ಟೆಗೆ 90 ವರ್ಷ ವಯಸ್ಸಿನ ವೃದ್ಧರು ತಮ್ಮ ಮೊಮ್ಮಕ್ಕಳ ಸಹಾಯದೊಂದಿಗೆ ಮತಗಟ್ಟೆಗೆ ಆಗಮಿಸಿ ಮತ ಹಕ್ಕು ಚಲಾಯಿಸಿದರು. ಕಡಗದಾಳು ಮತಗಟ್ಟೆಯಲ್ಲಿ ಮಹಿಳಾ ಮತ್ತು ಪುರುಷ ಮತದಾರರು ಉದ್ದುದ್ದ ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸಿದ್ದು ಕಂಡುಬಂದಿತು.

ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕುಗಳ ಎಲ್ಲಾ ಭಾಗಗಳಲ್ಲಿ ಉತ್ತಮ ಮತದಾನವಾಗಿದೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 4 ಗಂಟೆ ವೇಳೆಗೆ ಸುಮಾರು ಶೇ.65 ರಷ್ಟು ಮತದಾನವಾಗಿದೆ ಎಂದು ಮೂಲಗಳು ತಿಳಿಸಿವೆ. ನಗರದ ತಾಲೂಕು ಪಂಚಾಯಿತಿ ಮತಗಟ್ಟೆಯಲ್ಲಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸರತಿ ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು. ಹಾಗೆಯೇ ಸ್ವೀಪ್ ಸಮಿತಿ ಅಧ್ಯಕ್ಷ ಪ್ರಶಾಂತ್ ಕುಮಾರ್ ಮಿಶ್ರ ಅವರು ನಗರದ ನಗರಸಭೆಯಲ್ಲಿ ನಿರ್ಮಾಣ ಮಾಡಲಾಗಿದ್ದ ಮಾದರಿ ಮತಗಟ್ಟೆಯಲ್ಲಿ ಯುವ ಮತದಾರರನ್ನು ಸನ್ಮಾನಿಸಿ, ಗೌರವಿಸಿದರು.