ಇಹಲೋಕದಲ್ಲಿರದವರಿಗೂ ಮತ ಮತಪತ್ರ ಹಾಗೂ ಮತದಾರರ ಪಟ್ಟಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಏನೇ ಕ್ರಮವಹಿಸಿದರೂ, ಹಲವು ಲೋಪಗಳಿರುವದು ಸಹಜವಾಗಿ ಬಿಟ್ಟಿದೆ. ಇದಕ್ಕೆ ಉದಾಹರಣೆ ಎಂಬಂತೆ ವೀರಾಜಪೇಟೆ ತಾಲೂಕಿನ 209ನೇ ಬಾಡಗರಕೇರಿ ಹಾಗೂ ಪೊರಾಡು ಮತಗಟ್ಟೆಯಲ್ಲಿ ಕಳೆದ 15-20 ವರ್ಷಗಳಿಗಿಂತಲು ಅಧಿಕ ಸಮಯದಿಂದ ಊರು ಬಿಟ್ಟಿರುವ ವ್ಯಕ್ತಿಯೂ ಸೇರಿದಂತೆ ನಾಲ್ಕೈದು ವರ್ಷದಿಂದ ಇಹಲೋಕದಲ್ಲೇ ಇಲ್ಲದ ಸುಮಾರು 21 ಮಂದಿಯ ಹೆಸರು ಮತದಾರರ ಪಟ್ಟಿಯಲ್ಲಿ ಈಗಲೂ ಮುಂದುವರಿದೆದೆ. ಇದು ಮಾತ್ರವಲ್ಲದೆ ನೆರೆಯ ಗ್ರಾಮವಾದ ಪರಕಟಗೇರಿ ಮತಗಟ್ಟೆ ವ್ಯಾಪ್ತಿಗೆ ಸೇರಿರುವ ಮತದಾರರೊಬ್ಬರ ಹೆಸರು ಈ ಗ್ರಾಮದ ಮತಗಟ್ಟೆಯಲ್ಲಿ ಸೇರ್ಪಡೆಗೊಂಡಿದ್ದ ಕುರಿತು ಪಕ್ಷಗಳ ಪ್ರಮುಖರು ‘ಶಕ್ತಿ’ಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಮತಗಟ್ಟೆ ವ್ಯಾಪ್ತಿಯಲ್ಲಿ ಇರುವ ಮತದಾರರು ಕೇವಲ 800 ರಿಂದ 850 ಆದರೆ ಮತಪಟ್ಟಿಯಲ್ಲಿ 1161 ಮಂದಿಯ ಹೆಸರಿದೆ. ಇದರಿಂದ ಎಷ್ಟೇ ಮತದಾನವಾದರೂ ಶೇಕಡವಾರು ಕಡಿಮೆ ಇರುತ್ತದೆ. ಇದನ್ನು ಸರಿಪಡಿಸೋರು ಯಾರು ಎಂದು ಅವರು ಪ್ರಶ್ನಿಸಿದರು.ವ್ಯಕ್ತಿ. ಇವರು ತಾವು ಮತದಾನದ ಹಕ್ಕು ಹೊಂದಿರುವ ಮತಗಟ್ಟೆಯಲ್ಲಿ 27ನೇ ಬಾರಿಗೆ ಪ್ರಥಮ ವ್ಯಕ್ತಿಯಾಗಿ ಮತ ಚಲಾಯಿಸಿದರು. ಇದು ಕೇವಲ ಒಬ್ಬರಾಗಿ ಮಾತ್ರವಲ್ಲ ಕುಟುಂಬವರ್ಗದವರೊಂದಿಗೆ ಬೆಳಗ್ಗಿನ ಜಾವವೇ ಇವರು ಮತಗಟ್ಟೆಗೆ ತೆರಳುತ್ತಾರೆ. ತಾ. 12ರ ಚುನಾವಣೆಯಲ್ಲಿ ಮಿಟ್ಟು ಚಂಗಪ್ಪ ಅವರು ಪತ್ನಿ ಯಶಿ ಚಂಗಪ್ಪ, ಪುತ್ರಿ ಕಾವ್ಯ ಮಾದಪ್ಪ ಅವರೊಂದಿಗೆ ತೆರಳಿ ಮತ ಚಲಾಯಿಸಿದರು. 6.45ಕ್ಕೆ ಮುನ್ನವೇ ಮತಗಟ್ಟೆಗೆ ಇವರು ತೆರಳುತ್ತಾರೆ. ಇವರ ಈ ಆಸಕ್ತಿಯ ಅರಿವು ಇರುವವರು ಎಲ್ಲಾದರೂ ಸರತಿ ಸಾಲಿನಲ್ಲಿ ನಿಂತಿದ್ದರೆ ಇವರಿಗೆ ಅವಕಾಶ ಮಾಡಿಕೊಡುತ್ತಾರೆ. ಈ ಕುರಿತು ಮಿಟ್ಟು ಚಂಗಪ್ಪ ಅವರು ಹರ್ಷ ವ್ಯಕ್ತಪಡಿಸುತ್ತಾರೆ. ಮತದ ಹಕ್ಕು ಹೊಂದಿದ ಬಳಿಕ ಐದಾರು ವರ್ಷ ಒಬ್ಬನೇ ಮತ ಹಾಕಿದ್ದೇನೆ. ಮದುವೆ ಬಳಿಕ ಕುಟುಂಬದೊಂದಿಗೆ ಮತ ಚಲಾಯಿಸುತ್ತಿರುವದಾಗಿ ಅವರು ಹೇಳಿದರು.
‘‘ನಾನು ರಾಜಕೀಯದಲ್ಲಿದ್ದೇನೆ. ನನಗೆ ಪ್ರಜಾಪ್ರಭುತ್ವದ ಮೇಲೆ ಹೆಚ್ಚು ಗೌರವ. ಅಲ್ಲದೆ ಇದು ನನ್ನ ಒಂದು ಹವ್ಯಾಸವೂ ಆಗಿದೆ ಎನ್ನುತ್ತಾರೆ ಮಿಟ್ಟು.
ಚುನಾವಣೆಯನ್ನು ಸಂಭ್ರಮಿಸಬೇಕು. ಈ ದಿನದಂದು ತಮ್ಮ ಕಾರ್ಮಿಕರು, ಸಿಬ್ಬಂದಿಗಳಿಗೂ ರಜೆ ನೀಡುತ್ತೇನೆ. ಮತ ಚಲಾಯಿಸಿದ ಸಂಭ್ರಮದೊಂದಿಗೆ ಕುಟುಂಬದವರು ಸೇರಿ ಎಲ್ಲಾದರೊಂದು ಕಡೆ ಒಟ್ಟಿಗೆ ಬೆಳಗ್ಗಿನ ಉಪಹಾರವನ್ನು ಸೇವಿಸುವ ಹವ್ಯಾಸ ತಮಗೆ ರೂಢಿಯಾಗಿದೆ. ಪ್ರತಿ ಪ್ರಜೆಯೂ ಮತ ಚಲಾಯಿಸಲೇಬೇಕು ಎಂಬದು ತಮ್ಮ ಅಭಿಪ್ರಾಯ ಎಂದು ಮಿಟ್ಟು ಚಂಗಪ್ಪ ‘ಶಕ್ತಿ’ಯೊಂದಿಗೆ ಮುಕ್ತ ನುಡಿಯನ್ನಾಡಿದರು.
ಕೊಡಗು ಜಿಲ್ಲೆಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದ್ದು, ಮತದಾರರು ಅತಿ ಉತ್ಸಾಹದಿಂದ ಮತ ಚಲಾಯಿಸಿದರು. ಸೋಮವಾರಪೇಟೆ ತಾಲೂಕಿನ ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಕಾಂಡನಕೊಲ್ಲಿ ಮತಗಟ್ಟೆಯಲ್ಲಿ ಮದುಮಗಳೊಬ್ಬರು ಮತ ಚಲಾಯಿಸುವ ಮೂಲಕ ಗಮನ ಸೆಳೆದರು. ಕಾಂಡನಕೊಲ್ಲಿಯ ಐಮುಣಿಯಂಡ ಬಿದ್ದಪ್ಪ ಹಾಗೂ ಸುಶಿಲ ಅವರು ಪುತ್ರಿ ತಾನ್ಸಿ (ಸ್ಮಿತಾ) ಎಂಬಾಕೆ ಕೊಡವ ಸಾಂಪ್ರದಾಯಿಕ ವಿವಾಹ ಉಡುಪಿನಲ್ಲಿ ಕಾಂಡನಕೊಲ್ಲಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ನಂತರ ಮಡಿಕೇರಿಯ ಮೇಲಿನ ಗೌಡ ಸಮಾಜದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಮೂವತ್ತೊಕ್ಲು ಗ್ರಾಮದ ಉದ್ದಿನಾಡಂಡ ಅಪ್ಪಣ್ಣ ಹಾಗೂ ಪೊನ್ಮಮ್ಮ ದಂಪತಿಯ ಪುತ್ರ ಕಾವೇರಪ್ಪ ಅವರನ್ನು ವಿವಾಹವಾದರು.
ಫಲಿತಾಂಶದ ಸಂಭ್ರಮವಲ್ಲ... ಕೊಡಗಿನ ಮದುವೆಈ ಸಂಭ್ರಮಾಚರಣೆಯ ಚಿತ್ರ ನೋಡಿ ಇದೇನು ಮತದಾನದ ದಿನವೇ ಫಲಿತಾಂಶವೂ ಹೊರಬಿದ್ದೀತೇನು ಎಂದು ಅಚ್ಚರಿಪಡಬೇಡಿ ಇದು ರಾಜಕೀಯದಿಂದ ಹೊರತಾದ ವಿಚಾರ... ಬಹುಶಃ ಹಲವರ ಮಾತಿನಂತೆ ಈತನಕದ ಚುನಾವಣೆಗಳಿಗಿಂತ ಈ ಬಾರಿಯ ಚುನಾವಣೆ ವಿಭಿನ್ನವಾಗಿತ್ತು. ಒಂದು ರೀತಿಯಲ್ಲಿ ಜನತೆ, ಮತದಾರರು ರಾಜಕೀಯದ ಬಗ್ಗೆ ನಿರಾಸಕ್ತಿ ತಾಳಿದಂತೆ ಕಂಡುಬಂದಿತ್ತು. ಇದರ ನಡುವೆ ಚುನಾವಣೆ ಘೋಷಣೆಗೂ ಮುನ್ನವೇ ಹಲವೆಡೆ ಮದುವೆ ಸಮಾರಂಭಗಳೂ ನಿಗದಿಯಾಗಿದ್ದವು. ಈ ನಿಗದಿತ ಕಾರ್ಯಕ್ರಮದಲ್ಲಿ ಸಂಬಂಧಿಕರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಮಡಿಕೇರಿ ಗೌಡ ಸಮಾಜದಲ್ಲಿ ಇಂದು ಉದಿನಾಡಂಡ ಹಾಗೂ ಐಮುಣಿಯಂಡ ಮದುವೆ ಸಮಾರಂಭವಿತ್ತು. ಇದರಲ್ಲಿ ಕೆಲವರು ಮತ ಚಲಾಯಿಸಿ ಆಗಮಿಸಿದ್ದರೆ, ಮತ ಚಲಾಯಿಸಲು ಸಾಧ್ಯವಾಗದೆ ದೂರದಿಂದ ಬಂದವರು ಅನಿವಾರ್ಯವಾಗಿ ಪಾಲ್ಗೊಂಡಿದ್ದರು. ಚುನಾವಣೆ ಒಂದೆಡೆಯಾದರೂ ಮದುವೆ ಮನೆಯ ಸಂಭ್ರಮದಲ್ಲಿ ಎಲ್ಲರೂ ತೊಡಗಿಸಿಕೊಂಡಿದ್ದ ದೃಶ್ಯವಿದು.ಮೊದಲ ಓಟ್ ಸಂಭ್ರಮ
ಚುನಾವಣೆಯಲ್ಲಿ ಇದೇ ಪ್ರಥಮ ಬಾರಿಗೆ ಓಟ್ ಮಾಡಿದ ಯುವ ಮತದಾರರು ಸಂಭ್ರಮ ಪಡುತ್ತಿದ್ದುದು ಕಂಡುಬಂತು. ಹೊಸ ಗುರುತಿನ ಚೀಟಿಯೊಂದಿಗೆ ಬೂತ್‍ಗೆ ಆಗಮಿಸಿದ ಯುವ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು. ಕೊಡ್ಲಿಪೇಟೆಯಲ್ಲಿ ಮೊದಲ ಓಟ್ ಮಾಡಿದ ಡೈಸಿಮಾ ಡಿಸೋಜ ಮಾತನಾಡಿ, ಚುನಾವಣಾ ಆಯೋಗ ಕಲ್ಪಿಸಿರುವ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಾವದೇ ಭಯಾತಂಕವಿಲ್ಲದೇ ಮತದಾನದಲ್ಲಿ ಭಾಗವಹಿಸುತ್ತಿದ್ದೇನೆ. ಜೀವನದ ಪ್ರಥಮ ಓಟ್ ಚಲಾಯಿಸಿದ್ದೇನೆ ಎಂದು ಖುಷಿಪಟ್ಟರು.
* ಮತದಾನ ಮಹತ್ವಪೂರ್ಣವಾದದು. ಅದರಲ್ಲೂ ಪ್ರಥಮ ಬಾರಿಗೆ ಮತ ಚಲಾಯಿಸುವದೆಂದರೆ ಅದರ ಅಂಭ್ರಮವೇ ಬೇರೆ. ಮಡಿಕೇರಿಯ ಮತಗಟ್ಟೆಯೊಂದರಲ್ಲಿ ಪ್ರಥಮ ಬಾರಿಗೆ ಹಕ್ಕು ಚಲಾಯಿಸಿದ ಸಂಭ್ರಮದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಎಂ.ಎಂ. ಕವನ.
ಶಾಂತಿಯುತ ಮತದಾನದ ಹರುಷ
ಮಡಿಕೇರಿ, ಮೇ 12: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ 213ನೇ ಮತಗಟ್ಟೆಯು ಇಲ್ಲಿನ ತೋಟಗಾರಿಕಾ ಇಲಾಖೆಯ ಕೇಂದ್ರ ಕಚೇರಿಯಲ್ಲಿ ರೂಪುಗೊಂಡು, ಪೊಲೀಸ್ ಇಲಾಖೆ ಮಹಿಳಾ ಸಿಬ್ಬಂದಿ ಭವ್ಯ ಸಹಿತ ಮತಗಟ್ಟೆ ಅಧಿಕಾರಿ, ಇತರ ಎಲ್ಲರೂ ವನಿತೆಯರೇ ಕಾರ್ಯನಿರ್ವಹಿಸಿದ್ದರು. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ಕೊನೆಯ ಘಳಿಗೆ ತನಕ ಯಾವ ಕಿರಿಕಿರಿಯೂ ಇಲ್ಲದೆ ಎಲ್ಲರೂ ಶಾಂತಿಯುತ ಮತದಾನ ನಡೆಸಿದ್ದು, ಇವರೆಲ್ಲರಲ್ಲಿ ಹರುಷ ಉಂಟು ಮಾಡಿದೆ.
ಅಷ್ಟೇ ಅಲ್ಲದೆ ಈ ಮತಗಟ್ಟೆಯ ಒಟ್ಟು 1048 ಮಂದಿ ಮತದಾರರ ಪೈಕಿ 351 ಮಂದಿ ಪುರುಷರು ಹಕ್ಕು ಚಲಾಯಿಸಿದ್ದಾರೆ. ಇದರೊಂದಿಗೆ 351 ಮಂದಿ ಮಹಿಳಾ ಮತದಾರರೂ ಅಂತಿಮ ಕ್ಷಣದ ತನಕ ತಮ್ಮ ಮತದಾನದೊಂದಿಗೆ ಸಮಾನತೆ ಕಾಯ್ದುಕೊಂಡಿರುವದು, ಈ ಮತಗಟ್ಟೆ ಏಜೆಂಟರ ಸಹಿತ ಎಲ್ಲರಲ್ಲಿ ಹರ್ಷ ಉಂಟು ಮಾಡಿದ್ದು, ಗೋಚರಿಸಿತು.
ಕೃಪೆ ತೋರಿದ ವರುಣ
ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಕಂಡುಬಂದಿದ್ದ ವಾತಾವರಣದ ಅಸಹಜತೆಯಿಂದಾಗಿ ತಾ. 12ರ ಮತ ಸಮರಕ್ಕೆ ಅಡಚಣೆಯಾಗಬಹುದೆಂಬ ಆತಂಕ ಎಲ್ಲರಲ್ಲೂ ಮನೆ ಮಾಡಿತ್ತು. ಇದಕ್ಕೆ ಪೂರಕವೆಂಬಂತೆ ಇಂದು ಬೆಳಿಗ್ಗೆಯಿಂದ ಅಪರಾಹ್ನದ ತನಕವೂ ಸ್ವಲ್ಪಮಟ್ಟಿಗೆ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಆದರೆ ಮತದಾನಕ್ಕೆ ವರುಣ ಇಂದು ಕೃಪೆ ತೋರಿರುವದು ವಿಶೇಷವಾಗಿದೆ. ಕುಶಾಲನಗರ ಹೊರತುಪಡಿಸಿ ಮತದಾನದ ಅವಧಿ ಮುಗಿಯುವ ತನಕ ಎಲ್ಲೂ ಮಳೆಯಾಗಿರುವ ಕುರಿತು ವರದಿಯಾಗಿಲ್ಲ. ಮತದಾನ ತೀರಾ ಕುಂಟಿತವಾಗಬಹುದು ಎಂಬ ಆತಂಕ ಇಂದು ದೂರಾಯಿತು.
ಬಸ್‍ಗಾಗಿ ಪರದಾಟ
ರಾಜ್ಯ ವಿಧಾನಸಭೆಗೆ ಕರ್ನಾಟಕ ರಾಜ್ಯದಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಮತ ಚಲಾವಣೆ ಪ್ರಕ್ರಿಯೆಗಾಗಿ ಹಲವಷ್ಟು ಖಾಸಗಿ ಬಸ್‍ಗಳು ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್‍ಗಳನ್ನು ರಾಜ್ಯಾದ್ಯಂತ ಬಳಸಿಕೊಳ್ಳಲಾಗಿತ್ತು. ಇದರ ಬಿಸಿ ಕೊಡಗಿನ ಹಲವೆಡೆಯೂ ಕಂಡುಬಂದಿತು. ಮತದಾನಕ್ಕಾಗಿ ಜಿಲ್ಲೆಯ ವಿವಿಧೆಡೆ ಹಾಗೂ ಸನಿಹದ ಜಿಲ್ಲೆಗಳಿಗೆ ತೆರಳಲು ಸಿದ್ಧವಾಗಿದ್ದವರು ಹಾಗೂ ನಿಗದಿತ ಕಾರ್ಯಕ್ರಮಗಳಿಗೆ ಅತ್ತಿಂದಿತ್ತ ತೆರಳಬೇಕಾದವರು ಬಸ್ ವ್ಯವಸ್ಥೆ ಕಡಿಮೆ ಇದ್ದರಿಂದ ಪರದಾಡಬೇಕಾಯಿತು. ಗೋಣಿಕೊಪ್ಪಲು ಪಟ್ಟಣದಿಂದ ಬೆಂಗಳೂರಿನತ್ತ ಆಗಮಿಸಿದ್ದ ಬಸ್‍ವೊಂದಕ್ಕೆ ಏರಲು ಸಾರ್ವಜನಿಕರು ಮುಗಿಬಿದ್ದ ಕ್ಷಣವಿದು.ಸರತಿ ಸಾಲಲ್ಲಿ ನಿಂತರು...
ವೀರಾಜಪೇಟೆ: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾ ದಳದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಅವರು ಇಲ್ಲಿನ ಸಂತ ಅನ್ನಮ್ಮ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಮತದಾನಕ್ಕಾಗಿ ಸಂಕೇತ್ ಪೂವಯ್ಯ ಅವರು ಮತದಾನಕ್ಕೆ ಸರದಿಯಲ್ಲಿ ಸಾಗುತ್ತಿದ್ದುದನ್ನು ಕಂಡ ಮತಗಟ್ಟೆ ಅಧಿಕಾರಿಗಳು ಸರದಿ ಬಿಟ್ಟು ನೇರವಾಗಿ ಮತದಾನ ಮಾಡುವಂತೆ ವಿನಂತಿಸಿದರೂ ಸರದಿಯಲ್ಲಿಯೇ ನಿಂತು ಮತದಾನ ಮಾಡಿದರು.
ಮತದಾನ ಮಾಡಲು ಬೆಳಗಿನ 7.30ರಿಂದಲೇ ಮತದಾರರು ಸಾಲಾಗಿ ನಿಂತು ಮತದಾನ ಮಾಡಿದರು. ಸುಮಾರು 1480 ಮತದಾರರಿರುವ ಈ ಮತಗಟ್ಟೆಯಲ್ಲಿ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಪ್ರಧಾನ ಆಡಳಿತಾಧಿಕಾರಿ ರೆ.ಫಾ. ಮದಲೈಮುತ್ತು ಅವರು ಮತಗಟ್ಟೆ ಆರಂಭವಾದ ತಕ್ಷಣ ಮೊದಲ ಮತದಾನ ಮಾಡಿದರು.