ವೀರಾಜಪೇಟೆ, ಮೇ 12: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಕೋಟುಪರಂಬು, ಕದನೂರು, ಚಿಕ್ಕಪೇಟೆ, ಕಡಂಗಮುರೂರು, ಚಾಮಿಯಾಲ ಸೇರಿದಂತೆ ಹಲವಾರು ಮತಗಟ್ಟೆಗಳಲ್ಲಿ ಬೆಳಗಿನಿಂದಲೇ ನೀರಸ ಮತದಾನ ಕಂಡು ಬಂದಿತು. ಹಿಂದಿನ ಅವಧಿಯ ಚುನಾವಣೆಗೂ ಇಂದಿನ ಚುನಾವಣೆಗೂ ಹೋಲಿಸಿದರೆ ಈ ಬಾರಿಯ ಚುನಾವಣೆಯಲ್ಲಿ ಮತದಾನಕ್ಕೆ ಹೆಚ್ಚಿನ ಉತ್ಸುಕತೆ ಇರಲಿಲ್ಲ. ರಾಷ್ಟ್ರೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿನ ಗೊಂದಲ ಮತದಾನದ ಮೇಲೆ ಪ್ರಭಾವ ಬೀರಿರಬಹುದೆಂದು ಶಂಕಿಸಲಾಗಿದೆ ಆದರೆ ಆರ್ಜಿ ಹಾಗೂ ಕಲ್ಲುಬಾಣೆ ಮತಗಟ್ಟೆಯಲ್ಲಿ ಮಾತ್ರ ಮತದಾರರು ಸಾಲುಗಟ್ಟಿ ಬಿರುಸಿನಿಂದ ಮತ ಚಲಾಯಿಸುತ್ತಿರುವದು ಕಂಡು ಬಂತು. ಇನ್ನೂ ಕೆಲವು ಮತಗಟ್ಟೆಗಳಲ್ಲಿ ಕೇವಲ ಬೆರಳೆಣಿಕೆಯ ಕಾರ್ಯಕರ್ತರು ಮತದಾರರ ಓಲೈಕೆಗೆ ಮುಂದಾಗಿದ್ದರು. ವೀರಾಜಪೇಟೆ ವಿಭಾಗಕ್ಕೆ ನಿನ್ನೆ ರಾತ್ರಿ ಭಾರೀ ಮಳೆಯಾಗಿದ್ದು ಇಂದು ಬೆಳಿಗ್ಗೆ ಮಳೆ ವಿರಾಮ ನೀಡಿದ್ದರಿಂದ ಮತದಾರರಿಗೆ ಮತದಾನಕ್ಕೆ ಅನುಕೂಲವಾಯಿತು. ಅಪರಾಹ್ನ 12ಗಂಟೆಯ ನಂತರ ವೀರಾಜಪೇಟೆ ಪಟ್ಟಣದ 12 ಮತಗಟ್ಟೆಗಳಲ್ಲಿ ಮತದಾನ ಕೊಂಚ ಚುರುಕುಗೊಂಡಿತು.

ಬಿಜೆಪಿ ಅಭ್ಯರ್ಥಿ, ಶಾಸಕ ಕೆ.ಜಿ ಬೋಪಯ್ಯ ಬೆಳಿಗ್ಗೆ ಮಡಿಕೇರಿಯಲ್ಲಿ ಮತದಾನ ಮಾಡಿದ ನಂತರ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾನದ ವ್ಯವಸ್ಥೆಯ ಪರಿಶೀಲನೆ ನಡೆಸಿದರು. ಕಡಂಗಮುರೂರು ಮತಗಟ್ಟೆಯಲ್ಲಿ ಆರಂಭದಲ್ಲಿಯೇ ಮತಯಂತ್ರ ಕೈಕೊಟ್ಟ ಕಾರಣ ಒಂದು ಗಂಟೆ ವಿಳಂಬವಾಗಿ ಮತದಾನ ಪ್ರಾರಂಭಗೊಂಡಿತು. ಕಾಕೋಟುಪರಂಬು ಮತಗಟ್ಟೆಯಲ್ಲಿ ಕಣ್ಣು ಕಾಣದ ಮತದಾರ

(ಮೊದಲ ಪುಟದಿಂದ) ತಮ್ಮ ಸಹೋದರನ ಸಹಾಯದಿಂದ ಮತ ಚಲಾಯಿಸಿದರು. ಕಿರುಮಕ್ಕಿ ಮತಗಟ್ಟೆಯಲ್ಲಿ ಪಾಶ್ರ್ವವಾಯು ಪೀಡಿತ ರೋಗಿಯೊಬ್ಬರು ಊರುಗೋಲಿನಿಂದ ಯಾರ ಸಹಾಯವನ್ನು ಪಡೆಯದೆ ಮತಗಟ್ಟೆಗೆ ನಿಧಾನವಾಗಿ ಬಂದು ಮತ ಚಲಾಯಿಸಿದರು. ಎಲ್ಲ ಕಡೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದ ಕಾರಣ ಯಾವದೇ ಅಹಿತಕರ ಘಟನೆಗೆ ಅವಕಾಶ ಇರಲಿಲ್ಲ. ಮತದಾರರ ಪಟ್ಟಿಯಲ್ಲಿ ಬಹಳಷ್ಟು ಮತದಾರರ ಹೆಸರನ್ನು ಕೈ ಬಿಟ್ಟಿರುವದಲ್ಲದೆ ಮರಣಪಟ್ಟವರ ಹೆಸರು ಅಧಿಕವಾಗಿದೆ ಎಂದು ವಿವಿಧ ಪಕ್ಷಗಳ ರಾಜಕೀಯ ಏಜೆಂಟರು ದೂರುತ್ತಿದ್ದರು. ಜೆಡಿಎಸ್ ಪಕ್ಷದ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರು ಮತದಾನದ ನಂತರ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಕಡಂಗಮುರೂರು ಮತಗಟ್ಟೆಯ ನೂರು ಮೀಟರ್ ಅಂತರದಲ್ಲಿ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಕಾರ್ಯಕರ್ತರ ನಡುವೆ ಮತದಾನದ ಕುರಿತಂತೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರಿಗೆ ಜೀವಭಯದ ಬೆದರಿಕೆವೊಡ್ಡಿದರೆಂದು ಪೊಲೀಸರಿಗೆ ದೂರಿದ ಮೇರೆ ಗ್ರಾಮಾಂತರ ಪೊಲೀಸರು ಬಿಗಿ ಬಂದೋಬಸ್ತ್‍ನ್ನು ವ್ಯವಸ್ಥೆಗೊಳಿಸಿದರು. ನಂತರ ಈ ಮತಗಟ್ಟೆಯಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ದೂರಿನ ಸುಳಿವು ತಿಳಿಯುತ್ತಲೇ ಪೊಲೀಸ್ ಅಧಿಕಾರಿಗಳು ಕಡಂಗದ ಮತಗಟ್ಟೆಗೆ ಧಾವಿಸಿ ಎರಡು ಗುಂಪುಗಳನ್ನು ಸಮಾಧಾನಗೊಳಿಸಿದರು.