ಸೋಮವಾರಪೇಟೆ,ಮೇ.12: ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಸೋಮವಾರಪೇಟೆ ತಾಲೂಕಿನಾದ್ಯಂತ ಇಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಂದೆರಡು ಕಡೆಗಳಲ್ಲಿ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆದಿದ್ದನ್ನು ಹೊರತುಪಡಿಸಿದರೆ, ಉಳಿದಂತೆ ಚುನಾವಣೆ ಶಾಂತಿಯುತವಾಗಿತ್ತು.ಸೋಮವಾರಪೇಟೆ ಪಟ್ಟಣ, ಶಾಂತಳ್ಳಿ, ಕೊಡ್ಲಿಪೇಟೆ, ಶನಿವಾರಸಂತೆ, ಕುಶಾಲನಗರ, ಸುಂಟಿಕೊಪ್ಪ ಹೋಬಳಿಯಾದ್ಯಂತ ನಡೆದ ಚುನಾವಣೆಯಲ್ಲಿ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದರು. ಕೊಡಗಿನ ಗಡಿಭಾಗವಾದ ಕೊಡ್ಲಿಪೇಟೆಯಲ್ಲಿ ಮೂರೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತದಾರರ ಮನವೊಲಿಸಲು ತೀವ್ರ ಕಸರತ್ತು ನಡೆಸಿದರು.ತಾಲೂಕಿನ ಅಂಕನಹಳ್ಳಿ, ತೋಳೂರುಶೆಟ್ಟಳ್ಳಿ, ಯಡವಾರೆ ಭಾಗದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ‘ಚುನಾವಣಾ ಮಾತಿನ ಚಕಮಕಿ’ ನಡೆದವು. ಅತಿರೇಕಕ್ಕೆ ಹೋಗದಂತೆ ಇತರ ಕಾರ್ಯಕರ್ತರು ತಡೆದಿದ್ದರಿಂದ ಪರಿಸ್ಥಿತಿ ತಿಳಿಯಾಯಿತು.
ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಮಿಕರು ಬೆಳಿಗ್ಗೆ 7ರಿಂದಲೇ ಸರದಿ ಸಾಲಿನಲ್ಲಿ ಮತದಾನದಲ್ಲಿ ಪಾಲ್ಗೊಂಡರೆ, ಹಲವೆಡೆಗಳಲ್ಲಿ ಸಂಜೆ 4 ಗಂಟೆಯ ನಂತರ ಮತದಾನ ಬಿರುಸುಗೊಂಡಿತು.
(ಮೊದಲ ಪುಟದಿಂದ) ತೋಟ ಕಾರ್ಮಿಕರು ಬೆಳಗ್ಗೆ ಕೆಲಸಕ್ಕೆ ತೆರಳಿ ಮಧ್ಯಾಹ್ನದ ನಂತರ ಮತಗಟ್ಟೆಗೆ ಆಗಮಿಸಿದರು. ಚುನಾವಣಾ ಆಯೋಗವು ಕಟ್ಟುನಿಟ್ಟಿನ ಮುಂಜಾಗ್ರತ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಇನ್ನೂರು ಮೀಟರ್ ದೂರದಲ್ಲಿ ಪ್ರಚಾರ ಕಾರ್ಯವನ್ನು ಕೈಗೊಳ್ಳುತ್ತಿದ್ದರು.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮತ್ತು ಎಸ್‍ಜೆಎಂ ಬಾಲಿಕಾ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಅಳವಡಿಸಲಾಗಿದ್ದ ಮತಯಂತ್ರದಲ್ಲಿ ಬೆಳಗ್ಗೆ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅರ್ಧ ಗಂಟೆ ತಡವಾಗಿ ಮತದಾನ ಪ್ರಾರಂಭಗೊಂಡಿತು. ಎಸ್‍ಜೆಎಂ ಬಾಲಿಕ ಪೌಢಶಾಲೆಯ ಮತಗಟ್ಟೆಗೆ ಪಟ್ಟಣದ 5 ಭಾಗಗಳ ಮತದಾರರಿಗೆ ಮತದಾನದ ಅವಕಾಶ ಮಾಡಿದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದ ಸರದಿ ಸಾಲಿನಲ್ಲಿ ಜನರು ಕಾಯುತ್ತಿದ್ದ ದೃಶ್ಯ ಸಂಜೆಯವರೆಗೂ ಮುಂದುವರೆಯಿತು.
ಪಟ್ಟಣ ಪಂಚಾಯಿತಿ ಬೂತ್‍ನಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾದರೂ ಮತಯಂತ್ರದ ದೋಷದಿಂದ 8.25ರವರೆಗೆ ಮತದಾರರು ಬಾಗಿಲಿನಲ್ಲಿ ಕಾಯಬೇಕಾಯಿತು. ಸಿ.ಕೆ.ಸುಬ್ಬಯ್ಯ ರಸ್ತೆ, ಮಾರುಕಟ್ಟೆ ರಸ್ತೆ ಮತ್ತು ಪೌರಕಾರ್ಮಿಕರ ರಸ್ತೆ ನಿವಾಸಿಗಳಲ್ಲಿ ಹಲವರು ಮತದಾನದಿಂದ ವಂಚಿತರಾದರು.
ಎಸ್.ಎಸ್.ಸುನಿತಾ, ಪದ್ಮ, ಗೌತಮಿ, ಕೃಷ್ಣಮೂರ್ತಿ, ಲಕ್ಷ್ಮೀ, ಸುಮತಿ ಮತದಾನದಿಂದ ವಂಚಿತರಾದ ಹಿನ್ನೆಲೆ ಕಂದಾಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೃತಪಟ್ಟವರ ಹೆಸರುಗಳು ಮತದಾರರ ಪಟ್ಟಿಯಲ್ಲಿವೆ. ಬದುಕಿರುವವರ ಹೆಸರು ಇಲ್ಲ, ಚುನಾವಣಾ ಶಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ನಾವುಗಳು ಮತದಾನದಿಂದ ವಂಚಿತರಾಗಬೇಕಾಯಿತು. ನಮ್ಮ ಮತದಾನದ ಹಕ್ಕನ್ನು ಕಸಿದಿರುವದು ಖಂಡನೀಯ ಎಂದು ಮತದಾನ ವಂಚಿತರು ಮತಗಟ್ಟೆ ಎದುರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಕೊಡ್ಲಿಪೇಟೆ, ಹಂಡ್ಲಿ, ಹೆಬ್ಬಾಲೆ, ಶಿರಂಗಾಲ, ಐಗೂರು, ಕುಶಾಲನಗರ, ತೋಳೂರುಶೆಟ್ಟಳ್ಳಿ, ಕಾನ್ವೆಂಟ್ ಬಾಣೆ, ಬಜೆಗುಂಡಿ ಕುಂಬೂರು, ಮಾದಾಪುರ ಗೌಡಳ್ಳಿ, ದೊಡ್ಡಮಳ್ತೆ, ಚೌಡ್ಲು, ಹಂಡ್ಲಿ ಮತಗಟ್ಟೆ ಎದುರು ರಾಜಕೀಯ ಪಕ್ಷಗಳ ಕಾರ್ಯಕರ್ತರು ಅತ್ಯುತ್ಸಾಹದಿಂದ ಮತಯಾಚನೆಯಲ್ಲಿ ತೊಡಗಿದ್ದರೆ, ಕೆಲ ಮತಗಟ್ಟೆಯಲ್ಲಿ ಮತ ಕೇಳಲೂ ಸಹ ಪಕ್ಷಗಳ ಕಾರ್ಯಕರ್ತರಿರಲಿಲ್ಲ.
ಈ ಬಾರಿ ಪ್ರಥಮವಾಗಿ ಮತದಾನದ ಅವಕಾಶ ದೊರೆತ ಯುವ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು. ತಾಲೂಕಿನಾದ್ಯಂತ ಬಹುತೇಕ ಮತಗಟ್ಟೆಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಅತ್ಯುತ್ಸಾಹದಿಂದ ಮತಬೇಟೆಯಲ್ಲಿ ತೊಡಗಿದ್ದುದು ಕಂಡುಬಂತು.
ಬಿಜೆಪಿ ಅಭ್ಯರ್ಥಿ, ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ಕುಂಬೂರಿನ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ, ಮಾಜಿ ಸಚಿವ ಮತ್ತು ಜೆಡಿಎಸ್ ಅಭ್ಯರ್ಥಿ ಬಿ.ಎ.ಜೀವಿಜಯ ಬಿಳಿಗೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಚಲಾಯಿಸಿದರು.
ವಿಕಲಚೇತನರಿಂದ ಮತದಾನ: ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ದೊಡ್ಡಮಳ್ತೆ ಗ್ರಾಮದ ಹೂವಯ್ಯ ಅವರು ಸಹಾಯಕರ ನೆರವಿನೊಂದಿಗೆ ಮತಗಟ್ಟೆಗೆ ಆಗಮಿಸಿದ ಸಂದರ್ಭ, ಚುನಾವಣಾ ಸಹಾಯಕ ಸ್ವಯಂಸೇವಕರು ಅವರನ್ನು ಮತಗಟ್ಟೆ ಒಳಗೆ ಕರೆದೊಯ್ದು ಮತದಾನಕ್ಕೆ ಸಹಕರಿಸಿದರು. ಇದರೊಂದಿಗೆ ಕುಶಾಲನಗರದ ವಿವಿಧೋದ್ದೇಶ ಸಹಕಾರ ಸಂಘದ ಬೂತ್‍ನಲ್ಲಿ ವಿಕಲಚೇತನರಾದ ಬದ್ರುದೀನ್ ಅವರು ಸಹಾಯಕರೊಂದಿಗೆ ತಮ್ಮ ಹಕ್ಕು ಚಲಾಯಿಸಿದರು.
ತೆನೆಹೊತ್ತ ಪುರುಷನಿಂದ ಪ್ರಚಾರ: ಹೆಬ್ಬಾಲೆಯಲ್ಲಿ ಜೆಡಿಎಸ್ ಕಾರ್ಯಕರ್ತ ಸುಂದರ ಅವರು ಹಸಿರು ಸೀರೆ ಸುತ್ತಿಕೊಂಡು ತಲೆ ಮೇಲೆ ತೆನೆಹೊತ್ತುಕೊಳ್ಳುವ ಮೂಲಕ ತೆನೆಹೊತ್ತ ಮಹಿಳೆ ಚಿಹ್ನೆಗೆ ಮತ ನೀಡಿ ಎಂದು ಪ್ರಚಾರ ನಡೆಸಿದರು.
ಎಲ್ಲಾ ಚುನಾವಣೆಯಲ್ಲೂ ಮತ: ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ 89ರ ಪ್ರಾಯದ ಟಿ.ಪಿ. ಅಪ್ಪಸ್ವಾಮಿ ಅವರು ಮತದಾನ ಮಾಡುವ ಮೂಲಕ ಈವರೆಗೂ ನಡೆದ ಎಲ್ಲಾ ಚುವಾವಣೆಯಲ್ಲೂ ಮತದಾನ ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು. ಅಪ್ಪಸ್ವಾಮಿ ಅವರು ಸಾರ್ವತ್ರಿಕ ಚುನಾವಣೆ ಪ್ರಾರಂಭವಾದ 1952ರಿಂದಲೂ ಎಲ್ಲಾ ಚುನಾವಣೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪುತ್ರ ಎಸ್.ಎ. ಮುರಳೀಧರ್ ತಿಳಿಸಿದರು.
ಮಧ್ಯಾಹ್ನದ ನಂತರ ಮತದಾನ ಚುರುಕು: ಹಲವು ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದ ನೀರಸ ಮತದಾನ ನಡೆದರೆ ಮಧ್ಯಾಹ್ನದ ನಂತರ ಚುರುಕುಗೊಂಡಿತು. ಮಧ್ಯಾಹ್ನ 12ರವರೆಗೆ ಶೇ.20ರಷ್ಟಿದ್ದ ಮತದಾನ ಪ್ರಮಾಣ ಮೂರು ಗಂಟೆಯ ವೇಳೆಗೆ ಶೇ. 50 ತಲುಪಿತು. ಸಂಜೆ 4 ಗಂಟೆಯ ನಂತರ ಬಿರುಸಿನ ಮತದಾನ ನಡೆಯಿತು.
ಹೆಚ್ಚುವರಿ ಸಮಯ: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮತ್ತು ಎಸ್‍ಜೆಎಂ ಶಾಲೆಯಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಸಂಜೆ 6.30ರ ನಂತರವೂ ಮತದಾನ ಮುಂದು ವರೆಯಿತು. ಎಲ್ಲಾ ಮತಗಟ್ಟೆಯಲ್ಲೂ ಚುನಾವಣಾ ಆಯೋಗದಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳ ಲಾಗಿತ್ತು. ಮತದಾನಕ್ಕೆ ಸಂಬಂಧಿಸಿ ದಂತೆ ಯಾವದೇ ಗೊಂದಲಗಳು ಉಂಟಾಗದಂತೆ ಸಿಬ್ಬಂದಿಗಳು ಜಾಗ್ರತೆ ವಹಿಸಿದರೆ, ಮತಗಟ್ಟೆಯ ಹೊರಭಾಗ ಪೊಲೀಸ್, ಹೋಂ ಗಾರ್ಡ್, ಸಿಆರ್‍ಪಿಎಫ್, ಬಿಎಸ್‍ಎಫ್ ಯೋಧರು, ಬಿಹಾರದ ವಿಶೇಷ ಪೊಲೀಸ್ ಪಡೆಯವರು ಶಸ್ತ್ರ ಸಜ್ಜಿತರಾಗಿ ಸೂಕ್ತ ಬಂದೂಬಸ್ತ್ ಕಲ್ಪಿಸಿದ್ದರು.