ಸುಂಟಿಕೊಪ್ಪ, ಮೇ 4: ಮಕ್ಕಳು ಶಿಬಿರಗಳಲ್ಲಿ ಪಾಲ್ಗೊಳ್ಳುವದರಿಂದ ಮಕ್ಕಳ ಸಾಮಾಜಿಕ ಬೆಳವಣಿಗೆ ಅಭಿವೃದ್ಧಿಗೊಳ್ಳುತ್ತದೆ. ಮಾನವ ಸೇವೆಯೇ ಅತ್ಯುನ್ನತ ಸೇವೆಯಾಗಿದ್ದು ಸಮಾಜದ ಏಳಿಗೆಗೆ ಕಾರಣವಾಗುತ್ತದೆ ಎಂದು ಶಾಂತಿಭವನ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಲೀಡಾ ಸಿಂಗಂ ಹೇಳಿದರು.

ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ವತಿಯಿಂದ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ 15 ದಿನದ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಶಿಬಿರಗಳಲ್ಲಿ ಭಾಗವಹಿಸುವದರಿಂದ ಮಕ್ಕಳ ಜ್ಞಾನದೊಂದಿಗೆ ಪ್ರತಿಭೆ ಬೆಳೆಯಲು ಪೂರಕ ವೇದಿಕೆಯಾಗಲಿದೆ. ಪೋಷಕರು ತಮ್ಮ ಮಕ್ಕಳ ಪ್ರತಿಭೆಯನ್ನು ಬೆಳೆಸುವ ದಿಸೆಯಲ್ಲಿ ಇಂತಹ ಶಿಬಿರಗಳಿಗೆ ಕಳುಹಿಸುವದು ಸೂಕ್ತವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜೆಸಿಐ ನಿಕಟಪೂರ್ವ ಅಧ್ಯಕ್ಷ ದೇವಿಪ್ರಸಾದ್ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ 9ನೇ ಶಿಬಿರವಾಗಿದ್ದು, ಮಕ್ಕಳ ಪ್ರತಿಭೆಗಳನ್ನು ಹೊರಹಾಕಲು ಪ್ರತಿಭೆಯನ್ನು ಬೆಳೆಸಲು ಸೂಕ್ತ ವೇದಿಕೆಯಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಜೆಸಿಐ ಅಧ್ಯಕ್ಷ ಅರುಣ್ ಕುಮಾರ್ ವಹಿಸಿದ್ದರು.

ವೇದಿಕೆಯಲ್ಲಿ ಕಾರ್ಯಕ್ರಮ ಮುಖ್ಯಸ್ಥೆ ನೀತಾ ಲೋಕನಾಥ್, ಕಾರ್ಯಕ್ರಮ ನಿರ್ದೇಶಕ ಪ್ರೆಣೀತ್ ಡೆನ್ನಿಸ್, ಜೂನಿಯರ್ ಜೆಸಿಸ್‍ನ ಅಮೃತ, ಜೇಸಿರೇಟ್ ರಾಧಾ ಪ್ರವೀಣ್ ಉಪಸ್ಥಿತರಿದ್ದರು.

ಶಿಬಿರದಲ್ಲಿ 40 ವಿದ್ಯಾರ್ಥಿಗಳು ಭಾಗವಹಿಸಿದ್ದು, ಮಂಜುಳ, ಸುಮ, ಸ್ಯಾಂಡ್ಲಿ, ಕೈ ಬರಹ ಪಿ.ಡಬ್ಲ್ಯು, ಪೇಪರ್ ಕ್ಯಾಪ್ ಡೆನ್ನಿಸ್, ನೀತು ಇವರುಗಳು ಕ್ರಾಪ್ಟ್, ಸಂಗೀತ, ಕೈಬರಹ,ಪೇಪರ್ ಕ್ರಾಪ್ಟ್‍ಗಳ ಬಗ್ಗೆ ತರಬೇತಿ ನೀಡಿದರು.

ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳ ನೆನಪಿಗಾಗಿ ದೇವಾಲಯದ ಆವರಣದಲ್ಲಿ 40 ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಶಂಸನ ಪತ್ರವನ್ನು ನೀಡಲಾಯಿತು. ಮಕ್ಕಳ ಮನರಂಜನೆಗಾಗಿ ನಾಟಿಕಿಟ್ಸ್ ತಂಡ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಸಲಾಯಿತು.