*ಗೋಣಿಕೊಪ್ಪಲು: ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯ ಸರ್ಕಾರದ ಯೋಜನೆ ಎಂದು ಸುಳ್ಳು ಹೇಳುತ್ತಾ ಪ್ರಚಾರ ಗಿಟ್ಟಿಸಿ ಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ ದಿಂದ ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿ ಅಸಾಧ್ಯ.
ಕಳೆದ 5 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಕೊಡಗಿನ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸದ ಸರ್ಕಾರ ಕೊಡಗಿನ ಜನತೆಯ ವಿರುದ್ಧವಾದ ಟಿಪ್ಪು ಜಯಂತಿ ಆಚರಣೆ ಮಾಡುವ ಮೂಲಕ ಜನರ ಭಾವನೆಗಳನ್ನು ಕಡೆಗಣಿಸಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಹಾತೂರು ಗ್ರಾಮದಲ್ಲಿ ಮತಯಾಚನಾ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿನ ಅವ್ಯವಹಾರಗಳ ಬಗ್ಗೆ ಕಿಡಿಕಾರಿದ ಅವರು, ಧರ್ಮಗಳನ್ನು ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ ಎಂದರು.
ಮುಸ್ಲಿಂ ಹಾಗೂ ಹಿಂದೂಗಳಲ್ಲಿ ಧರ್ಮದ ವಿಷಬೀಜ ಬಿತ್ತಿ ಮತಕ್ಕಾಗಿ ಹಂಬಲಿಸುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಕೇಂದ್ರದಲ್ಲಿ ಬಿ.ಜೆ.ಪಿ.ಯ ಆಡಳಿತವಿದ್ದಾಗ ಸಮಗ್ರ ಅಭಿವೃದ್ಧಿ ಸಾಧ್ಯವಿದೆ. ಹೊಸ ಯೋಜನೆ ಚಿಂತನೆಗಳೊಂದಿಗೆ ಕೇಂದ್ರ ಸರ್ಕಾರ ಅಭಿವೃದ್ಧಿಗೆ ಮುಂದಾಗುತ್ತಿದೆ. ಇದರ ಫಲವನ್ನು ರಾಜ್ಯವು ಪಡೆದು ಕೊಳ್ಳಬೇಕಾಗಿದೆ. ಹಿಂದೆ ಬಿ.ಜೆ.ಪಿ. ಸರ್ಕಾರವಿದ್ದಾಗ ಸಾವಿರಾರು ಕೋಟಿ ರೂಪಾಯಿಗಳನ್ನು ಜಿಲ್ಲೆಯ ಅಭಿವೃದ್ಧಿ ಗಾಗಿ ವಿಶೇಷ ಅನುಧಾನದಡಿ ನೀಡಿತ್ತು.
ಕಾಂಗ್ರೆಸ್ ಸರ್ಕಾರದ ಈ 5 ವರ್ಷದ ಆಡಳಿತದಲ್ಲಿ ಕುಡಿಯುವ ನೀರಿಗೂ ಅನುಧಾನ ನೀಡದೆ ಸರ್ಕಾರದಲ್ಲಿ ಹಣವಿಲ್ಲ ಎಂಬ ಉತ್ತರ ನೀಡಿ ಕೈಕಟ್ಟಿ ಕುಳಿತುಕೊಂಡಿತು ಎಂದರು. ಈ ಸಂದರ್ಭ ಮೂಕೊಂಡ ಬೋಸ್ ದೇವಯ್ಯ, ಹಾತೂರು ಸ್ಥಾನೀಯ ಸಮಿತಿ ಅಧ್ಯಕ್ಷ ಚಿಯಕ್ಪೂವಂಡ ಸುಬ್ರಮಣಿ, ಜಿ.ಪಂ. ಮಾಜಿ ಸದಸ್ಯ ಬಾಂಡ್ ಗಣಪತಿ, ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷ ಸುಭಾಶ್ ಮಾಥ್ಯು, ವರ್ತಕ ಪ್ರಕೋಷ್ಠ ಅಧ್ಯಕ್ಷ ಗಿರೀಶ್ ಗಣಪತಿ, ಗ್ರಾ.ಪಂ. ಅಧ್ಯಕ್ಷೆ ಆಶಾಲತಾ, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಶಶಿ ಸುಬ್ರಮಣಿ, ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷೆ ಕಾಂತಿ ಸತೀಶ್, ಪಟ್ರಪಂಡ ರಘು ನಾಣಯ್ಯ, ತಾಲ್ಲೂಕು ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಕಾರ್ಯದರ್ಶಿ ಸುವಿನ್ ಗಣಪತಿ, ನೆಲ್ಲೀರ ಚಲನ್, ಪರಿಶಿಷ್ಟ ಜಾತಿ ತಾಲೂಕು ಅಧ್ಯಕ್ಷ ಜಯಾ ಪೂವಯ್ಯ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.ಜನತೆ ಬದಲಾವಣೆ ಬಯಸಿದ್ದಾರೆ: ಸರಿತಾ
ಮಡಿಕೇರಿ: ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ಈ ಬಾರಿಯ ಚುನಾವಣೆಯಲ್ಲಿ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಕಳೆದ ಹಲವಷ್ಟು ವರ್ಷಗಳಲ್ಲಿ ಆಡಳಿತ ನಡೆಸಿರುವ ಶಾಸಕದ್ವಯರ ಬಗ್ಗೆ ಜನತೆಯಲ್ಲಿ ಅಸಮಾಧಾನ ವ್ಯಕ್ತಗೊಂಡಿದ್ದು, ಕಾಂಗ್ರೆಸ್ ಪಕ್ಷದ ಪ್ರಚಾರದ ವೇಳೆ ಇದು ಬಹಿರಂಗವಾಗುತ್ತಿದ್ದು, ಕಾಂಗ್ರೆಸ್ನತ್ತ ಮತದಾರರು ಒಲವು ತೋರುತ್ತಿರುವದಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷೆ ಕೇಚಮಾಡ ಸರಿತಾ ಪೂಣಚ್ಚ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಎರಡು ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ರಹಿತವಾಗಿ ಸಂಪೂರ್ಣವಾಗಿ ಐದು ವರ್ಷಗಳ ಜನಪ್ರಿಯ ನಡೆಸಿರುವದು ಈ ಚುನಾವಣೆ ಎದುರಿಸಲು ಸಹಕಾರಿಯಾಗಿದೆ. ಇಷ್ಟು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬಿ.ಜೆ.ಪಿ. ಶಾಸಕರು ಅಧಿಕಾರ ನಡೆಸಿದ್ದರೂ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಎಲ್ಲದಕ್ಕೂ ಶಾಸಕರು ಕೇವಲ ಕಾಂಗ್ರೆಸ್ ಪಕ್ಷವನ್ನು ಬೊಟ್ಟು ಮಾಡಿಕೊಂಡು ಬರುತ್ತಿದ್ದರೆಂದು ಅಭಿಪ್ರಾಯ ಪಟ್ಟಿರುವ ಅವರು, ಜನರು ಸುಳ್ಳು ಆರೋಪಗಳನ್ನು ನಂಬುವದಿಲ್ಲ. ಪಕ್ಷದ ಕಾರ್ಯಕರ್ತರೂ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಹುಮ್ಮಸ್ಸಿನಿಂದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಅಲ್ಲದೆ ಇಬ್ಬರೂ ಅಭ್ಯರ್ಥಿಗಳು ತಮ್ಮ ಕಾರ್ಯವೈಖರಿಯಿಂದ ಜನತೆಗೆ ಹತ್ತಿರವಾಗಿರುವವರಾಗಿದ್ದು ಹಗರಣಗಳಿಲ್ಲದ ಆಡಳಿತ, ಜನಪರ ಯೋಜನೆಗಳು ಪಕ್ಷದ ಗೆಲುವಿಗೆ ಪೂರಕವಾಗಲಿದೆ ಎಂದು ಸರಿತಾ ಪೂಣಚ್ಚ ಹೇಳಿದ್ದಾರೆ.ಸಿದ್ದಾಪುರ: ಜೆ.ಡಿ.ಎಸ್. ಪಕ್ಷ ರೈತರ ಹಾಗೂ ಕಾರ್ಮಿಕರ, ಅಭಿವೃದ್ಧಿಗೆ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ ಎಂದು ವೀರಾಜಪೇಟೆ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿ ಸಂಕೇತ್ ಪೂವಯ್ಯ ಅಭಿಮತ ವ್ಯಕ್ತಪಡಿಸಿದರು.
ಅಮ್ಮತ್ತಿ-ಕಾರ್ಮಾಡು ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದ ಮತ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಜೆ.ಡಿ.ಎಸ್. ಪಕ್ಷ ಜಾತ್ಯತೀತ ಪಕ್ಷವಾಗಿದ್ದು, ರೈತರ ಹಾಗೂ ಶ್ರಮಿಕರ ಸಮಸ್ಯೆಗಳನ್ನು ಅರಿತುಕೊಂಡು ಸಮಸ್ಯೆಗಳಿಗೆ ಸ್ಪಂದಿಸುವ ಏಕೈಕ ಪಕ್ಷ ಜೆ.ಡಿ.ಎಸ್. ಪಕ್ಷವಾಗಿದ್ದು ಈ ಹಿನ್ನೆಲೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರೈತಾಪಿ ವರ್ಗ ಹಾಗೂ ಶ್ರಮಿಕರು ಜೆ.ಡಿ.ಎಸ್. ಪಕ್ಷದತ್ತ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವ ಮೂಲಕ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯ ಮಂತ್ರಿಯಾಗುವದು ಖಚಿತ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಆಂತರಿಕ ಗುಂಪುಗಾರಿಕೆ ಹಾಗೂ ಕಚ್ಚಾಟಗಳು ಬಹಿರಂಗವಾಗಿದ್ದು ಜೆ.ಡಿ.ಎಸ್. ಪಕ್ಷದಲ್ಲಿ ಯಾವದೇ ಗೊಂದಲವಿಲ್ಲ ಎಂದ ಅವರು, ಸಮಾಜ ಸೇವೆಯನ್ನು ಗುರುತಿಸಿ ರೈತರು, ಶ್ರಮ ಜೀವಿಗಳು ತನ್ನನ್ನು ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.
ಪ್ರಚಾರ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಕಲಿಯಂಡ ನಾಣಯ್ಯ, ಕ್ಷೇತ್ರ ಸಮಿತಿಯ ಅಧ್ಯಕ್ಷ ಹೆಚ್.ಎಸ್. ಮತೀನ್, ಕಾರ್ಮಾಡು ಗ್ರಾ.ಪಂ. ಸದಸ್ಯೆ ಜಯ, ಪಕ್ಷದ ಸದಸ್ಯರುಗಳಾದ ಇಬ್ರಾಹಿಂ, ಹರೀಶ್ ಇತರರು ಹಾಜರಿದ್ದರು. ಈ ಸಂದರ್ಭ ವಿವಿಧ ಪಕ್ಷಗಳಿಂದ 70 ಕ್ಕೂ ಅಧಿಕ ಮಂದಿ ಜೆ.ಡಿ.ಎಸ್.ಗೆ ಸೇರ್ಪಡೆಗೊಂಡರು.